More

    ನಿಲುವಾಗಿಲು ಗ್ರಾಮಸ್ಥರ ಪ್ರತಿಭಟನೆ

    ಹುಣಸೂರು: ಹುಣಸೂರು-ಹನಗೋಡು ಮುಖ್ಯರಸ್ತೆಯ ರಾಮೇನಹಳ್ಳಿಬೆಟ್ಟದ ತಪ್ಪಲಿನ ನಿಲುವಾಗಿಲು ಗ್ರಾಮದ ಮಹಿಳೆಯರು ಮಳೆಹಾನಿಗೆ ಲೋಕೋಪಯೋಗಿ ಇಲಾಖೆಯ ಬೇಜವಾಬ್ದಾರಿ ವರ್ತನೆಯೇ ಕಾರಣವೆಂದು ಆರೋಪಿಸಿ ಮಳೆಹಾನಿ ನಷ್ಟ ಭರಿಸುವಂತೆ ಒತ್ತಾಯಿಸಿ ನಾಲ್ಕು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

    ಮುಖಂಡ ನಿಲುವಾಗಿಲು ಪ್ರಭಾಕರ್, ನಾಲ್ಕು ವರ್ಷಗಳಿಂದ ಅತಿವೃಷ್ಟಿ ಎಲ್ಲೆಡೆ ಕಾಡುತ್ತಿದೆ. ನಮ್ಮೂರಿನ ಮುಖ್ಯರಸ್ತೆಯ ಬಳಿ ಹಾಲಿ ಇರುವ ಡೆಕ್‌ನೊಂದಿಗೆ ಮತ್ತೊಂದು ಡೆಕ್ ನಿರ್ಮಾಣಕ್ಕಾಗಿ ನಾಲ್ಕು ವರ್ಷಗಳಿಂದ ಲೋಕೋಪಯೋಗಿ ಇಲಾಖೆಗೆ ಒತ್ತಾಯಿಸುತ್ತಲೇ ಇದ್ದೇವೆ. 1-2 ಲಕ್ಷ ರೂ.ಗಳ ಈ ಕಾಮಗಾರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಆಗಿಲ್ಲ. ಈಗಲೂ 60ಕ್ಕೂ ಹೆಚ್ಚು ಮನೆಗಳು ನೀರಿನಿಂದ ತುಂಬಿ ಪಡಿತರ, ಹೊಗೆಸೊಪ್ಪು ಎಲ್ಲವೂ ನಾಶವಾಗಿದೆ. 5 ಮನೆಗಳು ಕುಸಿದಿವೆ. ಸ್ಥಳಕ್ಕೆ ಅಧಿಕಾರಿಗಳು ಬಂದು ನಷ್ಟ ಪರಿಹಾರ ಮತ್ತು ಡೆಕ್ ನಿರ್ಮಾಣಕ್ಕೆ ಭರವಸೆ ನೀಡದ ಹೊರತು ರಸ್ತೆತಡೆ ಕೈಬಿಡುವುದಿಲ್ಲವೆಂದು ಎಚ್ಚರಿಸಿದರು.

    ಸ್ಥಳಕ್ಕೆ ಶಾಸಕ ಭೇಟಿ: ಸ್ಥಳಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಮಹಿಳೆಯರೊಂದಿಗೆ ಮಾತನಾಡಿ, ಶಾಶ್ವತ ಪರಿಹಾರವೆಂದರೆ ಹೆಚ್ಚುವರಿಯಾಗಿ ಡೆಕ್ ನಿರ್ಮಾಣ ಮಾಡುವುದೊಂದೇ ಆಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಜತೆ ಈ ಕುರಿತು ಮಾತನಾಡಿದ್ದು, ಶೀಘ್ರ ಡೆಕ್ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದ ನಂತರ ರಸ್ತೆತಡೆಯನ್ನು ಹಿಂಪಡೆಯಲಾಯಿತು.

    ನಿವಾಸಿಗಳಾದ ವಸಂತ, ಜಯಮ್ಮ, ಸುಶೀಲಾ, ಮಂಗಳಾ, ದೇವಮ್ಮ, ಜವರಮ್ಮ, ಕಮಲಮ್ಮ, ಕರಿಯಯ್ಯ, ಪಾಪಯ್ಯ, ರಮೇಶ್, ಸುಬ್ರಮಣಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಪಿಡಿಒ ಲೋಕೇಶ್ ಇನ್ನಿತರ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts