More

    ಹಾವೇರಿ ಜಿಲ್ಲೆಯಲ್ಲಿ 128 ಮಕ್ಕಳಿಗೆ ಎಚ್​ಐವಿ ಸೋಂಕು

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಎಚ್​ಐವಿ ಸೋಂಕಿತ ಗರ್ಭಿಣಿಯರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳದ ಕಾರಣ ಪ್ರಪಂಚ ಕಾಣದ ಹಸುಗೂಸು ಸೋಂಕಿಗೆ ತುತ್ತಾಗುವಂತಾಗಿದೆ. ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 128 ಮಕ್ಕಳು ಎಚ್​ಐವಿ ಸೋಂಕಿತರಾಗಿದ್ದು, 550 ಮಕ್ಕಳು ಬಾಧಿತರಾಗಿರುವುದು ಆತಂಕ ಮೂಡಿಸಿದೆ.

    ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಿಂದ ಅನುಷ್ಠಾನಗೊಳಿಸುತ್ತಿರುವ ವಿಶೇಷ ಪಾಲನಾ ಯೋಜನೆಯಡಿ ಜಿಲ್ಲೆಯಲ್ಲಿ ಆಸರೆ ಪಡೆದುಕೊಳ್ಳುತ್ತಿರುವ ಫಲಾನುಭವಿಗಳ ಸಂಖ್ಯೆಯಾಗಿದೆ. ಆದರೆ, ಎಷ್ಟೋ ಜನ ಸೋಂಕು ಕುರಿತು ವೈದ್ಯರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಿರುವ ಕಾರಣ ನಿಖರವಾದ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನಲಾಗುತ್ತಿದೆ.

    ಜಿಲ್ಲೆಯಲ್ಲಿ ಎಚ್​ಐವಿ ಸೋಂಕು ನಿಯಂತ್ರಣಕ್ಕೆ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಮಹಾಮಾರಿಗೆ 128 ಮಕ್ಕಳು ತುತ್ತಾಗಿರುವುದು ಭಯ ಹುಟ್ಟಿಸುತ್ತಿದೆ. ಸೋಂಕಿನಿಂದ ಬಾಧಿತರಾಗುತ್ತಿರುವ ಮಕ್ಕಳ ಸಂಖ್ಯೆ ಜಿಲ್ಲೆಯಲ್ಲಿ 550 (ಬಾಲಕರು-354, ಬಾಲಕಿಯರು-324)ಕ್ಕೆ ತಲುಪಿರುವುದು ಆತಂಕ ಮೂಡಿಸಿದೆ.

    ಎಚ್​ಐವಿ ಸೋಂಕಿನಿಂದ ಬಳಲುತ್ತಿರುವ ಪಾಲಕರು ಒಂದೆಡೆಯಾದರೆ ಸೋಂಕಿನಿಂದ ಬಾಧಿತರಾದ ಮಕ್ಕಳಿಗೆ ಶಿಕ್ಷಣ, ಗೃಹ ಆಧಾರಿತ ಪೋಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಶೇಷ ಪಾಲನಾ ಕಾರ್ಯಕ್ರಮದಡಿ ಆಸರೆ ನೀಡಿದೆ. ಈ ಯೋಜನೆಯಡಿ ಜಿಲ್ಲಾದ್ಯಂತ ಸೋಂಕಿತ -128, ಬಾಧಿತ 550 ಸೇರಿ 678 ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ.

    18 ವರ್ಷದೊಳಗಿನ ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ಮಗುವಿಗೂ ಸರ್ಕಾರ ಪ್ರತಿ ತಿಂಗಳು 1 ಸಾವಿರ ರೂ. ಆರ್ಥಿಕ ನೆರವು ನೀಡುವ ಮೂಲಕ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಪೌಷ್ಟಿಕ ಆಹಾರ, ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದೆ.

    ಅದರಲ್ಲೂ ಸರ್ಕಾರದ ನಿಯಮಾವಳಿ ಪ್ರಕಾರ ಸಾರ್ವಜನಿಕವಾಗಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಹಾಗೂ ಮನೆ ಭೇಟಿ ಮಾಡಲು ಅನುಮತಿಸಿದ ಫಲಾನುಭವಿಗಳೂ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ.

    ಬೇಕಿದೆ ಹೆಚ್ಚಿನ ಜಾಗೃತಿ

    ಎಚ್​ಐವಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಎಚ್​ಐವಿ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಈ ಬಗ್ಗೆ ಜಾಗೃತಿ ವಹಿಸಲು ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯವಿದ್ದರೂ ಜನತೆ ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಅಲ್ಲದೆ ಅವರು ಮಾಡುವ ತಪ್ಪಿನಿಂದಾಗಿ ಹುಟ್ಟುವ ಮಗು ಕೂಡ ಎಚ್​ಐವಿ ಸೋಂಕು ಅನುಭವಿಸಬೇಕಾಗಿದೆ. ಈ ಬಗ್ಗೆ ಜನತೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ.

    ಗರ್ಭಿಣಿಯರ ಎಚ್​ಐವಿ ಪರೀಕ್ಷೆ ಮಾಡಿಸಲೇಬೇಕು. ಪಾಸಿಟಿವ್ ಬಂದರೆ ತಕ್ಷಣದಿಂದಲೇ ಅವರಿಗೆ ವಿಶೇಷ ಚಿಕಿತ್ಸೆ ಕೊಡಿಸಿ ಮಗುವಿಗೆ ಸೋಂಕು ತಗುಲದಂತೆ ಮಾಡಲಾಗುವುದು. ಕಳೆದ ವರ್ಷ 44 ಜನ ಐಎಚ್​ವಿ ಸೋಂಕಿತ ಗರ್ಭಿಣಿಯರು ನಮ್ಮಲ್ಲಿ ನೋಂದಣಿಯಾಗಿದ್ದರು. ಅವರಿಗೆ ಸರಿಯಾದ ಚಿಕಿತ್ಸೆ ನೀಡಿದ ಪರಿಣಾಮ ಅವರಿಗೆ ಜನಿಸಿದ ಮಕ್ಕಳಿಗೆ ಪಾಸಿಟಿವ್ ಬಂದಿಲ್ಲ. ಆದರೆ, ಮಗುವಿಗೆ 18 ವರ್ಷ ತುಂಬುವವರೆಗೂ 6 ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಬೇಕು. ಆದ್ದರಿಂದ ಜನತೆ ಇದರ ಬಗ್ಗೆ ಜಾಗೃತಿ ವಹಿಸಬೇಕು.

    | ಡಾ. ನೀಲೇಶ ಎಂ.ಎನ್., ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts