More

    120 ಮೀಟರ್ ಧ್ವಜ ಪ್ರದರ್ಶನ

    ವಿಜಯಪುರ: ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆ ಮತದಾನ ಜಾಗೃತಿಗಾಗಿ ಭಾನುವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ 120 ಮೀಟರ್ ಧ್ವಜ ಪ್ರದರ್ಶನ ಹಾಗೂ ಡೊಳ್ಳು ಕುಣಿತ ಕಾರ್ಯಕ್ರಮ ನಡೆಯಿತು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಡೊಳ್ಳು ಭಾರಿಸುವ ಮೂಲಕ ಚಾಲನೆ ನೀಡಲಾಯಿತು.

    ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಮೇ 10 ರಂದು ನಡೆಯಲಿರುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರೂ ಪಾಲ್ಗೊಳ್ಳಬೇಕು. ಸರ್ವರೂ ತಪ್ಪದೇ ಮತದಾನ ಮಾಡಬೇಕು ಎಂದರು.

    ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಈಗಾಗಲೇ ಮತದಾನಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಮತಗಟ್ಟೆಗಳನ್ನು ಶೃಂಗಾರ ಮಾಡಿ, ಮತದಾರರನ್ನು ಆಕರ್ಷಿಸುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಅರ್ಹ ಮತದಾರರು ಪ್ರಜಾಪ್ರಭುತ್ವ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ಮನವಿ ಮಾಡಿಕೊಂಡರು.

    ಎಸ್‌ಪಿ ಎಚ್.ಡಿ. ಆನಂದಕುಮಾರ ಮಾತನಾಡಿ, ಮತದಾನದ ದಿನ ಹತ್ತಿರವಾಗಿದ್ದು ಎಲ್ಲ ಪ್ರಜೆಗಳು ನಿಭೀತಿಯಿಂದ ತಮ್ಮ ಪರಿವಾರದವರೊಡನೆ ಬಂದು ಮತ ಚಲಾಯಿಸಬೇಕು. ಮುಕ್ತ ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಯಾವುದೇ ಮತದಾರ ಮತದಾನದಿಂದ ವಂಚಿತಗೊಳ್ಳಬಾರದೆಂದರು.

    ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಧ್ವಜ ಪ್ರದರ್ಶನದ ಜಾಥಾ ಮಹಾತ್ಮ ಗಾಂಧಿ, ಬಸವೇಶ್ವರ, ಡಾ. ಅಂಬೇಡ್ಕರ್ ಹಾಗೂ ಕನಕದಾಸ ವೃತ್ತದ ಮಾರ್ಗವಾಗಿ ಕಂದಗಲ್ಲ ಹನುಮಂತರಾಯ ರಂಗಮಂದಿರ ತಲುಪಿ ಸಮಾಪ್ತಿಗೊಂಡಿತು.

    ಸತ್ತಿಗೆ ಕುಣಿತ, ಕುದುರೆ ಕುಣಿತ, ನವಿಲು ಕುಣಿತ ಸೇರಿ ವಿವಿಧ ಕಲಾತಂಡಗಳು, ವಿದ್ಯುನ್ಮಾನ ಮತ ಯಂತ್ರಗಳ ಸ್ತಬ್ಧ ಚಿತ್ರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿ 800 ಕ್ಕೂ ಅಧಿಕ ಜನರು ಭಾಗವಹಿಸಿದ್ದರು.

    ವೀಕ್ಷಕರಾದ ಡಾ. ಬಿ. ನವೀನಕುಮಾರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಅಧಿಕಾರಿಗಳಾದ ಎ.ಬಿ. ಅಲ್ಲಾಪುರ, ಬಿ. ನಾಗರಾಜ್, ರಾಜಶೇಖರ ಧೈವಾಡಿ, ಕೆ.ಕೆ. ಚವ್ಹಾಣ, ಸ್ವೀಪ್ ಸಮಿತಿ ಐಕಾನ್ ಸಹನಾ ಕೂಡಿಗನೂರ ಮತ್ತಿತರರಿದ್ದರು. ವಾರ್ತಾಧಿಕಾರಿ ಅಮರೇಶ ದೊಡಮನಿ ಪ್ರತಿಜ್ಞಾ ವಿಧಿ ಬೋಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts