More

    11 ಶಾಲೆಗಳಿಗೆ ಬಿತ್ತು ಬೀಗ

    ತರೀಕೆರೆ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಎಷ್ಟೇ ಸೌಲಭ್ಯ ಒದಗಿಸಿದರೂ ಖಾಸಗಿ ಸಂಸ್ಥೆಗಳ ಅಬ್ಬರದ ಮುಂದೆ ಪೈಪೋಟಿ ನಡೆಸದ ಸ್ಥಿತಿಗೆ ಸಿಲುಕಿವೆ. ಗ್ರಾಮೀಣ ಪ್ರದೇಶವಷ್ಟೇ ಅಲ್ಲ, ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿ ಕೂಡ ಅಯೋಮಯವಾಗಿದೆ.
    ಸಾಲು ಸಾಲು ಸಮಸ್ಯೆಗಳು ಜೀವಂತವಾಗಿವೆ. ಮೇಲ್ಛಾವಣಿ ಕುಸಿತ, ಗೋಡೆ ಶಿಥಿಲ, ಶೌಚಗೃಹ, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯುವವರ ಸಂಖ್ಯೆ ದಿನೇದಿನೆ ಕ್ಷಿಣಿಸುತ್ತಿದೆ.

    ಮಕ್ಕಳ ಕೊರತೆಯಿಂದ 2022-23ರ ಶೈಕ್ಷಣಿಕ ಸಾಲಿನಲ್ಲಿ 8 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿತ್ತು. ಪ್ರಸಕ್ತ ವರ್ಷ ಮತ್ತೆ 3 ಶಾಲೆಗಳು ಈ ಸಾಲಿಗೆ ಸೇರ್ಪಡೆಯಾಗಿವೆ. ತಾಲೂಕಿನ ಭೈರಾಪುರ, ಹಣ್ಣೇ ಸಮೀಪದ ತಿಮ್ಮಾಪುರ ಹಾಗೂ ಅರಿಶಿನಘಟ್ಟ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದ್ದು, ಸರ್ಕಾರಿ ಶಾಲೆಗಳ ಅವನತಿಯನ್ನು ಸಾಕ್ಷೀಕರಿಸುವಂತಿದೆ.
    ಬೋಧನೆ ಜತೆಗೆ ಸರ್ಕಾರದ ಕೆಲವು ಹೆಚ್ಚುವರಿ ಕೆಲಸಗಳು ಶಿಕ್ಷಕರ ಹೆಗಲಿಗೆ ಬಿದ್ದಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಸರ್ಕಾರ ಇದಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಂಡಿಲ್ಲ. ಈ ಕಾರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅನಿವಾರ್ಯವಾಗಿ ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖಮಾಡುತ್ತಿದ್ದಾರೆ.
    ಶೌಚಗೃಹ ಗಬ್ಬುನಾತ: ಪಟ್ಟಣದ ಗಾಳಿಹಳ್ಳಿ ಸರ್ಕಾರಿ ಶಾಲೆ ಶೌಚಗೃಹ ಶಿಥಿಲಾವಸ್ಥೆಗೆ ತಲುಪಿರುವುದು ಮಾತ್ರವಲ್ಲ, ದುರ್ನಾತ ಬೀರುತ್ತಿದೆ. ಹೀಗಾಗಿ ಮಕ್ಕಳು ಶೌಚಗೃಹದ ಬಳಕೆ ಮಾಡುವುದಿರಲಿ, ಒಳಗಡೆ ಹೋಗಲು ಕೂಡ ಹಿಂದೇಟು ಹಾಕುವಂತಾಗಿದೆ. ಶಿಕ್ಷಣ ಇಲಾಖೆ ಗಮನಹರಿಸದ ಹೊರತು ಸಮಸ್ಯೆ ಪರಿಹಾರ ಇತ್ಯರ್ಥವಾಗದು.
    ಶಿಕ್ಷಕರ ಕಿತ್ತಾಟ: ಪಟ್ಟಣ ಸೇರಿ ತಾಲೂಕಿನ ಕಲೆವು ಶಾಲೆಗಳಲ್ಲಿ ಶಿಕ್ಷಕರ ನಡುವಿನ ಜಟಾಪಟಿ ತಾರಕ್ಕಕೇರಿದೆ. ಸಮಾಜವನ್ನು ಸರಿದಾರಿಗೆ ತರಬೇಕಾದ ಶಿಕ್ಷಕರ ಕಿತ್ತಾಟದಿಂದ ವರ್ಷವೊಂದಕ್ಕೆ 20-25 ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಟಿಸಿ ಪಡೆದು ಹೋಗುವಂತಾಗಿದೆ.
    ಹೊಟ್ಟೆ ತುಂಬಿಸುತ್ತಿಲ್ಲ ಬಿಸಿಯೂಟ:
    ಸರ್ಕಾರ ಬಿಸಿಯೂಟಕ್ಕೆ ನಿಗದಿಪಡಿಸಿರುವ ಅವೈಜ್ಞಾನಿಕ ದರ ಯಾವುದಕ್ಕೂ ಸಾಲದಂತಾಗಿದೆ. ತರಕಾರಿ ಧಾರಣೆ ಗಗನಕ್ಕೇರುತ್ತಿರುವ ಹೊತ್ತಿನಲ್ಲಿ ಮಕ್ಕಳಿಗೆ ರುಚಿಯಾದ ಬಿಸಿಯೂಟ ತಯಾರಿಸುವುದು ಅಸಾಧ್ಯವಾಗಿದೆ. ಹೀಗಾಗಿ ಮಕ್ಕಳು ಅರೆಬರೆ ಊಟ ಮಾಡಿ ಕೈತೊಳೆಯುವಂತಾಗಿದೆ.
    ಮನಬಂದಂತೆ ವೈದ್ಯಕೀಯ ವೆಚ್ಚ ಪಾವತಿ: ತರೀಕೆರೆ ಶೈಕ್ಷಣಿಕ ವಲಯದ ಬಿಇಒ ಆಗಿದ್ದವರು ತಮ್ಮ ಅವಧಿಯಲ್ಲಿ ಸಾಕಷ್ಟು ಅಕ್ರಮ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿರುವ ಆರೋಪ ಕೇಳಿಬಂದಿದೆ. ವೈದ್ಯಕೀಯ ವೆಚ್ಚ ಪಾವತಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ವಿಷಯ ಶಿಕ್ಷಕರ ವರ್ಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈದ್ಯಕೀಯ ತಪಾಸಣೆಗೆ ಶಿಕ್ಷಣ ಇಲಾಖೆ ನಿಗದಿಗೊಳಿಸಿದ ಆಸ್ಪತ್ರೆಗಳಿಗಿಂತ ಅನಧಿಕೃತ ಆಸ್ಪತ್ರೆಗಳ ಹೆಸರಿನಲ್ಲೇ ಬಿಲ್ ಪಾವತಿಯಾಗಿರುವುದು ಮಾತ್ರವಲ್ಲ, ವೈದ್ಯಕೀಯ ವೆಚ್ಚ ಪಾವತಿ ಕಂಡ ಕಂಡವರಿಗೆ ಪಾವತಿ ಆಗಿರುವುದರಿಂದ ಆಡಿಟ್ ತಕರಾರು ಮಾಡಿದೆ. ಹಗರಣದ ಸತ್ಯಾಸತ್ಯತೆ ಉನ್ನತ ಮಟ್ಟದ ತನಿಖೆಯಿಂದಷ್ಟೇ ಬಯಲಿಗೆ ಬೀಳಲಿದೆ.
    ಬಿಟ್ಟು ಓಡಿದ ನಿಯೋಜನೆ ಭೂತ!: ಒಂದೆರಡು ದಶಕಗಳಿಂದ ತಾಲೂಕಿನ ಬಹುತೇಕ ಶಾಲೆಗಳಲ್ಲಿ ನೆಪ ಹೇಳಿ ಬೇರೆ ಶಾಲೆಗಳಿಗೆ ನಿಯೋಜನೆ ಮಾಡಿಸಿಕೊಳ್ಳುತ್ತಿದ್ದ ಕೆಲ ಶಿಕ್ಷಕರ ಅಡ್ಡ ಮಾರ್ಗಕ್ಕೆ ಶಿಕ್ಷಣ ಇಲಾಖೆ ತಡೆಹಾಕಿದೆ. ವಿಜಯವಾಣಿ 2022ರ ಜೂನ್ 21ರ ಸಂಚಿಕೆಯಲ್ಲಿ ‘ಸೌಕರ್ಯದ ಜತೆ ವೃತ್ತಿಧರ್ಮ ಪಾಲನೆ ಕೊರತೆ’ ಶೀರ್ಷಿಕೆಯಡಿ ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತಿದ್ದ ಇಲಾಖೆ ಅನೇಕ ವರ್ಷಗಳಿಂದ ಬೇರೆ ಶಾಲೆಗಳಲ್ಲೇ ಬೇರುಬಿಟ್ಟಿದ್ದ ಕೆಲ ಶಿಕ್ಷಕರಿಗೆ ಚಾಟಿ ಬೀಸಿ ಮೂಲ ಶಾಲೆಗೆ ಕಳುಹಿಸಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಯಾವೊಬ್ಬ ಶಿಕ್ಷಕನೂ ನೆಪವೊಡ್ಡಿ ಬೇರೆ ಶಾಲೆಗೆ ನಿಯೋಜನೆಯಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ.
    ಹೆಚ್ಚುವರಿ ಇಲ್ಲ ವರಿ: ಮಕ್ಕಳ ಕೊರತೆಯಿಂದ ಕಾಲಹರಣ ಮಾಡುತ್ತಿದ್ದ 23 ಹೆಚ್ಚುವರಿ ಶಿಕ್ಷಕರನ್ನು ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ ತಾಲೂಕಿನ ಶಾಲೆಗಳಿಗೆ ವರ್ಗಾಯಿಸಿದೆ. ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಪಡೆದು, ಅದನ್ನು ಇಇಡಿಎಸ್ ತಂತ್ರಾಂಶದ ಮೂಲಕ ಶಿಕ್ಷಣ ಇಲಾಖೆಗೆ ಸಲ್ಲಿಸಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಹೊರಟಿದ್ದ ನಾಲ್ವರು ಶಿಕ್ಷಕರಿಗೆ ವಿಜಯವಾಣಿ 2022ರ ಜ.16ರಂದು ‘ವರ್ಗಾವಣೆ ತಪ್ಪಿಸಿಕೊಳ್ಳಲು ಕಾಯಿಲೆ ನೆಪ’ ಶೀರ್ಷಿಕೆಯಡಿ ಪ್ರಕಟಿಸಿದ್ದ ವರದಿ ಹಿನ್ನಡೆ ತಂದಿದೆ. ಇದರಿಂದ ಮಲೆನಾಡು ಭಾಗದ ಶಾಲೆಗಳಿಗೆ ವರ್ಗಾವಣೆಯಾಗಿ ನೈಜ ಶಿಕ್ಷಕರಿಗೆ ಆಗುತ್ತಿದ್ದ ಅನ್ಯಾಯ ತಪ್ಪಿಸಿದಂತಾಗಿದೆ.
    ಸ್ವಾಧೀನವಿದ್ದರೂ ಮಾಲೀಕತ್ವ ಇಲ್ಲ: ದಾನ, ಧರ್ಮಗಳ ಮೂಲಕ ದಕ್ಕಿರುವ ತಾಲೂಕಿನ ಬಹುತೇಕ ಶಾಲೆಗಳ ಜಾಗಗಳಿಗೆ ಸ್ವಂತ ಮಾಲೀಕತ್ವವೇ ಇಲ್ಲದಂತಾಗಿದೆ. ಹೊಸದಾಗಿ ಆರಂಭವಾಗುತ್ತಿರುವ ಶಾಲೆಗಳ ಹೊರತು ಪಿರಮೇನಹಳ್ಳಿ, ಕೋಡಿಹಳ್ಳಿ ವಿವಿಧ ಗ್ರಾಮಗಳ ಶಾಲೆಗಳು ಮತ್ತು ಆಟದ ಮೈದಾನಗಳು ಈಗಲೂ ದಾನಿಗಳ ಹೆಸರಿನಲ್ಲೇ ಇವೆ. ಗಂಭೀರ ವಿಚಾರದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಇನ್ನಾದರೂ ನೋಂದಣಿ ಮಾಡಿಕೊಳ್ಳುವ ಮೂಲಕ ಕಾನೂನು ಬದ್ಧವಾಗಿ ಹೆಸರಿಗೆ ವರ್ಗಾಯಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಬೇಕಿದೆ.
    ಸಾಲು ಸಾಲು ಕೊರತೆಗಳು: ಶೈಕ್ಷಣಿಕ ವಲಯದ ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ಕೊರತೆಯಿಂದಾಗಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯೂ ಖಾಲಿ ಉಳಿದಿವೆ. ದೈಹಿಕ ಶಿಕ್ಷಣ ಶಿಕ್ಷಕರ ಅಲಭ್ಯತೆಯಿಂದ ಮಕ್ಕಳು ಕ್ರೀಡಾಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಆಟೋಟದಿಂದ ಹಿಂದೆ ಸರಿಯುವಂತಾಗಿದೆ. ಪ್ರೌಢಶಾಲೆ ಹೊರತು ಪ್ರಾಥಮಿಕ ಶಾಲೆಗಳಲ್ಲಿ ಲ್ಯಾಬ್ ವ್ಯವಸ್ಥೆ ಇಲ್ಲ. ಅನುದಾನ ಕೊರತೆಯಿಂದ ಮಕ್ಕಳು ಸೌವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಲಭ್ಯವಿರುವ ವಿಜ್ಞಾನ ಉಪಕರಣಗಳ ಉಪಯೋಗದ ಬಗ್ಗೆ ಕೆಲ ಶಿಕ್ಷಕರಿಗೆ ಅರಿವೇ ಇಲ್ಲ. ಅನೇಕ ಶಾಲೆಗಳಲ್ಲಿ ಜೋಡಿಸಿಟ್ಟಿರುವ ಉಪಕರಣಗಳು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts