More

    ತಹಸೀಲ್ದಾರ್ ಕಚೇರಿ ಎದುರು ಎತ್ತು ಕಟ್ಟಿ ಪ್ರತಿಭಟನೆ

    ರೋಣ: ‘ನಮ್ಮೂರಿಗೆ ಗ್ರಾಪಂ ಕೇಂದ್ರಸ್ಥಾನ ನೀಡಬೇಕು, ಇಲ್ಲವೇ ಗ್ರಾಪಂ ಕಚೇರಿ ಕಟ್ಟಡವನ್ನಾದರೂ ನಿರ್ವಿುಸಬೇಕು’ ಎಂದು ಆಗ್ರಹಿಸಿ ಎತ್ತಿನ ಬಂಡಿಗಳ ಸಮೇತ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮುಂದೆ ಬುಧವಾರ ಧರಣಿ ನಡೆಸಿದರು.

    ಬೆಳಗ್ಗೆ ಜಿಗಳೂರಿನಿಂದ ನೂರಕ್ಕೂ ಹೆಚ್ಚು ಚಕ್ಕಡಿಗಳಲ್ಲಿ ಆಗಮಿಸಿದ 200ಕ್ಕೂ ಹೆಚ್ಚು ಜನರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಠಿಕಾಣಿ ಹೂಡಿದರು. ಕಚೇರಿ ಪ್ರವೇಶದ್ವಾರದಲ್ಲೇ ಎತ್ತುಗಳನ್ನು ಕಟ್ಟಿ ಪ್ರತಿಭಟನೆ ಆರಂಭಿಸಿದರು.

    ಜಿಗಳೂರಿಗೆ ಗ್ರಾ.ಪಂ. ಕೇಂದ್ರದ ಸ್ಥಾನಮಾನ ನೀಡಲು ಒತ್ತಾಯಿಸಿ ಗ್ರಾಮಸ್ಥರು 2015 ಮತ್ತು 2020ರಲ್ಲಿ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಆದರೆ, ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

    ಗ್ರಾಮದ ಮುಖಂಡ ಬಾಬುಗೌಡ ಪಾಟೀಲ ಮಾತನಾಡಿ, ‘ಇಟಗಿ ಗ್ರಾಮ ಪಂಚಾಯಿತಿಯನ್ನು ಒಡೆದು 2015 ರಲ್ಲಿ ಹೊಸದಾಗಿ ಹೊಸಳ್ಳಿ ಗ್ರಾಮ ಪಂಚಾಯಿತಿ ಸೃಷ್ಟಿಸಲಾಗಿತ್ತು, ಅದರ ವ್ಯಾಪ್ತಿಗೆ ಹೊಸಳ್ಳಿ, ಜಿಗಳೂರ, ಕಳಕಾಪುರ ಗ್ರಾಮಗಳನ್ನು ಸೇರಿಸಲಾಯಿತು. ಈ ಸಂದರ್ಭದಲ್ಲಿ ಜಿಗಳೂರ ಗ್ರಾಮಕ್ಕೆ ಗ್ರಾಪಂ ಸ್ಥಾನಮಾನ ನೀಡಿ ಗ್ರಾಮದಲ್ಲಿ ಪಂಚಾಯಿತಿ ಕಟ್ಟಡ ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಅಂದಿನ ಜಿಲ್ಲಾಧಿಕಾರಿ ಮಾಡಿದ ತಪ್ಪಿನಿಂದ ಕಡಿಮೆ ಜನಸಂಖ್ಯೆ ಹೊಂದಿರುವ ಹೊಸಳ್ಳಿ ಗ್ರಾಮಕ್ಕೆ ಪಂಚಾಯಿತಿ ಸ್ಥಾನಮಾನ ನೀಡಲಾಯಿತು. ಇದನ್ನು ವಿರೋಧಿಸಿ ಕಳೆದ ಬಾರಿಯ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿ ಐದು ವರ್ಷಗಳ ಕಾಲ ನೀರು, ವಿದ್ಯುತ್ ಹೊರತುಪಡಿಸಿ ಯಾವುದೇ ಸೌಲಭ್ಯ ಪಡೆಯದೆ ಹೋರಾಟ ಮಾಡಿದ್ದೇವೆ. ಎರಡು ವರ್ಷಗಳ ಕಾಲ ನೀರು ಮತ್ತು ವಿದ್ಯುತ್ ನಿರ್ವಹಣೆಗೆ ಗ್ರಾಮದ ವಂತಿಗೆಯಿಂದ ಹಣ ಕಟ್ಟಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರೋಣ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ಪ್ರತಿಭಟನೆಯಲ್ಲಿದ್ದ 10 ಜನ ಮುಖಂಡರನ್ನು ತಹಸೀಲ್ದಾರ್ ಕಚೇರಿ ಸಭಾ ಭವನಕ್ಕೆ ಕರೆಸಿ ರ್ಚಚಿಸಿದರು. ನಂತರ ಮಾತನಾಡಿದ ಅವರು, ಪ್ರತ್ಯೇಕ ಗ್ರಾಮ ಪಂಚಾಯಿತಿ ಸ್ಥಾನಮಾನ ಕುರಿತು ಶಾಸಕರು, ಜಿಪಂ ಹಾಗೂ ತಾಪಂ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದ್ದು, ಅವರಿಂದ ಪೂರಕ ಸ್ಪಂದನೆ ಸಿಕ್ಕಿದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಜಿಗಳೂರು, ಹೊಸಳ್ಳಿ, ಕಳಕಾಪುರ ಗ್ರಾಮಸ್ಥರ ಸಭೆ ನಡೆಸಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

    ಜಕ್ಕನಗೌಡರ ವಿರುದ್ಧ ಆಕ್ರೋಶ : ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್​ರ ಜೆ.ಬಿ. ಜಕ್ಕನಗೌಡರ ಅವರನ್ನು ಜಿಗಳೂರು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ‘ಜನವರಿ 6 ರಂದು ಪ್ರತಿಭಟನೆ ನಡೆಸುತ್ತೇವೆ ಎಂದು ಒಂದು ವಾರ ಮೊದಲೇ ಮನವಿ ಸಲ್ಲಿಸಿದ್ದೇವೆ. ಆದರೆ, ಪ್ರತಿಭಟನೆ ನಡೆಸಲು ಪುರಸಭೆ ಮುಖ್ಯಾಧಿಕಾರಿ ಅನುಮತಿ ಪಡೆಯಬೇಕು ಎಂದು ಜನವರಿ 5ರಂದು ಸಂಜೆ ನೋಟಿಸ್ ನೀಡುತ್ತೀರಿ. ನೀವು ಇಲ್ಲಿ ಇರುವವರೆಗೂ ನಮ್ಮ ಬೇಡಿಕೆಗಳು ಈಡೇರುವುದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts