More

    ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಆಕ್ಸಿಜನ್

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಪೂರೈಕೆ ಮಾಡಿರುವ ಆಕ್ಸಿಜನ್​ನಲ್ಲಿ ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಆಕ್ಸಿಜನ್ ಕೊರತೆಯಾಗಿತ್ತು. ಆಗ 865ರಿಂದ 965 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗಿತ್ತು. ಚಾಮರಾಜನಗರದ ಘಟನೆ ನಂತರ ನೀಗಿಸುವ ಪ್ರಯತ್ನ ಮಾಡಿದ್ದೇವೆ. ಕೊರತೆ ಇರುವ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದರು.
    ರಾಜ್ಯದಲ್ಲಿ 1100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಅವು ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಲಭ್ಯವಾಗಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಜೆಮ್ೆಡ್​ಪುರ, ದೆಹಲಿ, ಮಹಾರಾಷ್ಟ್ರದಿಂದಲೂ ರಾಜ್ಯಕ್ಕೆ ಆಕ್ಸಿಜನ್ ಬಂದಿದೆ. ಎಲ್ ಆಂಡ್ ಟಿ ಕಂಪನಿಯಿಂದ 2 ಆಕ್ಸಿಜನ್ ಟ್ಯಾಂಕ್ ಸ್ಥಾಪನೆಯಾಗಲಿದೆ ಎಂದರು.
    ಗ್ರಾಮೀಣ ಭಾಗಕ್ಕೂ ಕೋವಿಡ್ ಸೋಂಕು ಹರಡುತ್ತಿದೆ. ಹೀಗಾಗಿ, ಸೋಂಕಿತರು ಮೃತಪಟ್ಟರೆ ಉಚಿತ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ನಗರ ಭಾಗದಲ್ಲಿ ಈಗಾಗಲೇ ಈ ವ್ಯವಸ್ಥೆ ಮಾಡಲಾಗಿದೆ. ತರಕಾರಿ, ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಡೋರ್​ಡೆಲಿವರಿ ಮಾಡಲು ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
    ಬೆಡ್ ಖಾಲಿ ಇರುವುದನ್ನು ಪ್ರಕಟಿಸುತ್ತೇವೆ
    ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ಗಳು ಖಾಲಿ ಇರುವುದನ್ನು ಇನ್ಮುಂದೆ ಪ್ರಕಟಿಸಲಾಗುವುದು. ಸಾರ್ವಜನಿಕರ ಮಾಹಿತಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ನಿತ್ಯ 41 ಟನ್ ಆಕ್ಸಿಜನ್ ಜಿಲ್ಲೆಗೆ ಬೇಕು. 3 ರೀಫಿಲ್ಲಿಂಗ್ ಕೇಂದ್ರಗಳಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ರವಾನೆಯಾಗುತ್ತದೆ ಎಂದರು.
    ಕೋರ್ಟ್ ನಿರ್ದೇಶನ ಸ್ವಾಗತ: ಕೋರ್ಟ್ ಸೂಚನೆ ನೀಡಿದ ಬಳಿಕ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ. ನಮ್ಮ ಪ್ರಯತ್ನ ಮೀರಿ ಕೆಲಸ ಮಾಡುತ್ತಿದ್ದೇವೆ. ಕೋರ್ಟ್ ನಿರ್ದೇಶನವನ್ನೂ ನಾವು ಸ್ವಾಗತಿಸುತ್ತೇವೆ ಎಂದು ಸಚಿವ ಶೆಟ್ಟರ್ ಹೇಳಿದರು. ನಾವು ಕೆಲಸ ಮಾಡುವಾಗ ಕೋರ್ಟ್ ಕೂಡ ನೋಡುತ್ತಿರುತ್ತದೆ. ಹೀಗೆ ಮಾಡಿ ಎಂದು ನಿರ್ದೇಶನ ನೀಡುತ್ತಿದೆ. ಇದೂ ಒಂದು ರೀತಿಯಲ್ಲಿ ಒಳ್ಳೆಯದು. ಕೋವಿಡ್ ಸಂದರ್ಭದಲ್ಲಿ ಈ ರೀತಿ ಕೆಲಸ ನಡೆಯಬೇಕು ಎಂದರು.
    ಕಾನ್ಸನ್​ಟ್ರೇಟರ್ ಹಸ್ತಾಂತರ: ದೇಶಪಾಂಡೆ ಫೌಂಡೇಷನ್ ವತಿಯಿಂದ 40 ಆಕ್ಸಿಜನ್ ಕಾನ್ಸನ್​ಟ್ರೇಟರ್ ಸಿಲಿಂಡರ್​ಗಳನ್ನು ಹುಬ್ಬಳ್ಳಿಯಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ ಪವಾರ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಡಿಎಚ್​ಒ ಡಾ. ಯಶವಂತ ಮದೀನಕರ, ತಹಸೀಲ್ದಾರ್ ಶಶಿಧರ ಮಾಡ್ಯಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts