More

    ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಶೇ.100 ವೆಬ್ ಕಾಸ್ಟಿಂಗ್ ವ್ಯವಸ್ಥೆ

    ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಮತಗಟ್ಟೆಗಳಲ್ಲೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಜತೆಗೆ ಮೈಸೂರು-ಕೊಡಗು ಕ್ಷೇತ್ರದ ಎಲ್ಲ ಮತಗಟ್ಟೆಗಳೂ ವೆಬ್ ಕಾಸ್ಟಿಂಗ್ ಆಗಲಿವೆ.

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2829 ಮತಗಟ್ಟೆಗಳಿದ್ದು, ಮತದಾನ ದಿನದಂದು ಎಲ್ಲ ಮತಗಟ್ಟೆಗಳಲ್ಲೂ ಶೇ.100ರಷ್ಟು ವೆಬ್ ಕಾಸ್ಟಿಂಗ್ ಮಾಡಲಾಗುವುದು.ಕೇಂದ್ರದ ಅರೆಸೇನಾ ಪಡೆಯ 7 ಕಂಪನಿಗಳು ಹಾಗೂ ರಾಜ್ಯದ ಇತರೆ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೊದಲ ಹಂತದ ಚುನಾವಣೆ ನಡೆಯುವ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 30,602 ಮತಗಟ್ಟೆ ಸ್ಥಾಪಿಸಲಾಗಿದೆ. 2,88,19,342 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ ಎಂದರು.

    ಎರಡು ಹಂತದ 28 ಕ್ಷೇತ್ರಗಳಲ್ಲಿ 5,47,72,300 ಮತದಾರರು ಇದ್ದು , ಒಟ್ಟು 58,821 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಈ ಚುನಾವಣೆಯಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು. ಬೆಂಗಳೂರಿನಲ್ಲಿ ಶೇ.90 ರಷ್ಟು ಹಾಗೂ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಶೇ.94-96 ರಷ್ಟು ಮನೆಗಳಿಗೆ ವೋಟರ್ ಸ್ಲಿಪ್ ತಲುಪಿಸಲಾಗಿದೆ.

    10 ದಾಖಲೆ ತೋರಿಸಲು ಅವಕಾಶ:

    ಮತದಾನದ ಸಮಯದಲ್ಲಿ ಆ ಸ್ಲಿಪ್ ಹಾಗೂ ಎಪಿಕ್ ಕಾರ್ಡ್ ತೋರಿಸಬೇಕು. ಅದಿಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಪಿಎಸ್ಯು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಎಂಪಿ, ಎಂಲೆ, ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ಅಂಗವೈಕಲ್ಯದ ಐಡಿ ಕಾರ್ಡ್‌ಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದರು.

    ಮದ್ಯ ಮಾರಾಟ ನಿಷೇಧ

    ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುನ್ನ ಶೂನ್ಯ ಅವಧಿ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಬೇಕು. ಬುಧವಾರ ಸಂಜೆ 6 ಗಂಟೆಯಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಲ್ಯಾಣ ಮಂಟಪ, ಹೋಟೆಲ್ಗಳನ್ನು ಸಂಜೆ 6ರ ನಂತರ ಪರಿಶೀಲನೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

    ಮನೆ ಮನೆ ತೆರಳಿ ಮತ ಯಾಚನೆ

    ಬುಧವಾರ ಸಂಜೆ 6ರ ಬಳಿಕ ಐದು ಜನ ಮೀರದಂತೆ, ಧ್ವನಿ ವರ್ಧಕ ಬಳಸದೆ ಮತಯಾಚನೆ ಮಾಡಬಹುದು. ಸಾಮಾನ್ಯ ಜನರು, ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಕ್ಷೇತ್ರ ಬಿಟ್ಟು ತೆರಳುವ ನಿರ್ಬಂಧ ಇಲ್ಲ ಎಂದು ತಿಳಿಸಿದರು.
    ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್.ವೆಂಕಟೇಶ್ ಕುಮಾರ್ ಹಾಗೂ ಎಂ. ಕೂರ್ಮರಾವ್ ಉಪಸ್ಥಿತರಿದ್ದರು.

    ಮತದಾನಕ್ಕೆ ರಜೆ ಘೋಷಣೆ

    ಮತದಾನ ನಡೆಯುವ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳಿಗೂ ಸಾರ್ವತ್ರಿಕ ರಜೆ ನೀಡಲಾಗಿದೆ. ವ್ಯಾಪಾರೋದ್ಯಮ, ಕೈಗಾರಿಕೋದ್ಯಮ, ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ಸಂಸ್ಥೆಗಳಲ್ಲಿ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ.

    65 ಕಂಪನಿ ಅರೆಸೇನಾ ಪಡೆ

    ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ 65 ಕಂಪನಿ ಅರೆಸೇನಾ ಪಡೆ, 50 ಸಾವಿರ ಸಿವಿಲ್ ಪೊಲೀಸ್ ಬಳಕೆ ಮಾಡುತ್ತಿದ್ದು, 1370 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, 19,701 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮಾಡಲಾಗುತ್ತದೆ. 5ಸಾವಿರ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

    ಕ್ಯೂಆರ್ ಕೋಡ್ ವೋಟರ್ ಸ್ಲಿಪ್
    ನಗರ ಪ್ರದೇಶದ ಮತದಾರರಿಗೆ ವೋಟರ್ ಸ್ಲಿಪ್ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ಮತಗಟ್ಟೆ ಮಾರ್ಗ ತೋರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts