More

    ಪ್ರೀತಿಯ ಕರೊನಾ… ಇದು ಹತ್ತನೇ ತರಗತಿ ವಿದ್ಯಾರ್ಥಿನಿಯ ಪತ್ರ…

    ನವದೆಹಲಿ: ಕರೊನಾ ಪಿಡುಗಿನಿಂದಾಗಿ ಶಾಲೆ-ಕಾಲೇಜು ಬಂದ್​ ಆಗಿವೆ. ಹಲವು ಬೋರ್ಡ್​ ಪರೀಕ್ಷೆಗಳು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿವೆ. ಸದಾ ಸ್ನೇಹಿತರೊಂದಿಗೆ ಆಟವಾಡಿಕೊಂಡು ಇರಬೇಕಾಗಿದ್ದ ಮಕ್ಕಳು ಮನೆಗಳ ಒಳಗೇ ಬಂದಿಗಳಾಗಿದ್ದಾರೆ. ಇದು ಅವರಿಗೆ ಬೇಸರವನ್ನುಂಟು ಮಾಡಿದೆ. ಅಂಥ ಎಲ್ಲ ಮಕ್ಕಳ ಪ್ರತಿನಿಧಿ ಎಂಬಂತೆ ಅವರೆಲ್ಲರ ಬೇಸರ, ದುಗುಡ-ದುಮ್ಮಾನಗಳನ್ನು ಹೇಳಿಕೊಂಡು ನವದೆಹಲಿಯ 10ನೇ ತರಗತಿಯ ವಿದ್ಯಾರ್ಥಿನಿ ಕರೊನಾ ವೈರಸ್​ಗೆ ಒಂದು ಪತ್ರ ಬರೆದಿದ್ದಾಳೆ. ಆ ಪತ್ರದ ಒಕ್ಕಣೆ ಹೀಗಿದೆ.

    ಪ್ರೀತಿಯ ಕರನೊನಾ ವೈರಸ್​,

    ನಾನು ಮಗುವಾಗಿದ್ದಾಗಿನಿಂದ ಸಕಾರಾತ್ಮಕ ಮನೋಭಾವದೊಂದಿಗೆ ಬೆಳೆದವಳು. ಎಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಧೈರ್ಯಗುಂದಿದವಳಲ್ಲ. ಉದಾಹರಣೆಗೆ ನನಗೆ ಹುಷಾರಿಲ್ಲದಂತಾಗಿ, ಶಾಲೆಗೆ ಹೋಗಲಾಗದಿದ್ದಾಗ ಆ ಅವಕಾಶವನ್ನು ಬಳಸಿಕೊಂಡು ನನಗೆ ತುಂಬಾ ಇಷ್ಟವಾದ ಮಾಸ್ಟರ್​ ಚೆಫ್​ ಎಪಿಸೋಡ್​ಗಳನ್ನು ಯೂಟ್ಯೂಬ್​ನಲ್ಲಿ ನೋಡಿಕೊಂಡು ಕಾಲಕಳೆದಿದ್ದೇನೆ.

    ಇದನ್ನೂ ಓದಿ: ಮಾನವ ಕರುಳಿನಲ್ಲೂ ವೃದ್ಧಿಸುವ ಕರೊನಾ 19 ವೈರಾಣು

    ಶಾಲೆಯಿಂದ ಮನೆಗೆ ಮರಳುವಾಗ ನಾನು ಪ್ರಯಾಣಿಸುತ್ತಿರುವ ಶಾಲಾ ವಾಹನ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಾಗ ಕೋಳಿ ನಿದ್ದೆ ಮಾಡಿ ಹೊಸ ಚೈತನ್ಯ ಪಡೆದುಕೊಂಡಿದ್ದೇನೆ. ನನ್ನ ಸ್ನೇಹಿತರು ಐಸ್​ಕ್ರೀಂ ಪಾರ್ಟಿ ರದ್ದುಗೊಳಿಸಿದಾಗ ಪಾಲಕರನ್ನು ಪೀಡಿಸಿ ಪಿಜ್ಜಾ ತರಿಸಿಕೊಂಡು ಮನೆಯವರೆಲ್ಲ ಒಟ್ಟಾಗಿ ಕುಳಿತು ತಿಂದು ನಲಿದಿದ್ದೇವೆ.

    ಆದರೆ ನೀನು ಉಂಟು ಮಾಡಿರುವ ನೋವು, ಸಂಕಟದ ಬಗ್ಗೆ ಕೇಳಿದಾಗಿನಿಂದ ನನ್ನ ಸಕಾರಾತ್ಮಕ ಮನೋಭಾವಕ್ಕೆ ಧಕ್ಕೆಯುಂಟಾಗಿದೆ. ಕಳೆದ ಕೆಲವು ವಾರಗಳಿಂದ ನಕಾರಾತ್ಮಕ ಮನೋಭಾವ ಬಲಗೊಳ್ಳುತ್ತಲೇ ಇದೆ. ನನ್ನಲ್ಲಿ ನೀನು ಭಯ, ಆತಂಕ ಮತ್ತು ದುಗುಡವನ್ನುಂಟು ಮಾಡಿದ್ದೀಯ.

    ಇದನ್ನೂ ಓದಿ: ಕ್ವಾರಂಟೈನ್​ನಲ್ಲೇ ದಾಖಲೆ ಬರೆದುಬಿಟ್ಟ ಈ ಯುವಕ!

    ನನಗೆ ಭಯ ಏಕೆ ಆಗುತ್ತಿದೆ ಗೊತ್ತಾ? ನನ್ನ ಪ್ರೀತಿಯ ತಾತಾ 80 ವರ್ಷದ ಬಾಬಾ, ದೇವಸ್ಥಾನಕ್ಕೆ, ಮಾರ್ಕೆಟ್​ಗೆ ಮತ್ತು ಬೆಳಗಿನ ವಾಯುವಿಹಾರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ನೀನು ಹಿರಿಯ ಜೀವಗಳಿಗೆ ತುಂಬಾ ಹಾನಿ ಉಂಟು ಮಾಡುತ್ತೀಯ ಎಂಬ ಭಯವೇ ಇದಕ್ಕೆ ಕಾರಣ.

    ನನ್ನ ಶಾಲೆ ಅನಿರ್ದಿಷ್ಟಾವಧಿಗೆ ಮುಚ್ಚಲ್ಪಟ್ಟಿದೆ. ಇದು ನನ್ನ ಆತಂಕಕ್ಕೆ ಕಾರಣವಾಗಿದೆ. ನನ್ನ ಮನೆಯ ಅಕ್ಕಪಕ್ಕದಲ್ಲಿದ್ದ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ನಮ್ಮ ಬಡಾವಣೆಯ ಜನರು ಆ ಅಂಗಡಿ ಮುಂಗಟ್ಟುಗಳಿಗೆ ಹೋಗದಿರುವುದೇ ಇದಕ್ಕೆ ಕಾರಣ. ಹಾಗಾಗಿ ಅಂಗಡಿ ಮಾಲೀಕರು, ಅಲ್ಲಿ ಕೆಲಸ ಮಾಡುವವರು ದುಡಿಮೆ ಇಲ್ಲದೆ ಹೇಗಿರಬಹುದು ಎಂಬುದನ್ನು ಊಹಿಸಿಕೊಂಡರೇ ಭಯವಾಗುತ್ತದೆ. ಇದೀಗ ಜಾರಿಯಲ್ಲಿರುವ ಲಾಕ್​ಡೌನ್​ ತೆರವಾದ ನಂತರದಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗುವ ಭೀತಿ ಆವರಿಸಿದೆ.
    ಇದನ್ನೂ ಓದಿ: ವರ್ಷಾಂತ್ಯಕ್ಕೆ ಕರೊನಾ ಲಸಿಕೆ ತಯಾರಾಗುವುದು ಖಚಿತ

    ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆಗಳು, ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಇರುವ ಅಮೆರಿಕ ಆಸ್ಪತ್ರೆಗಳು ಕೂಡ ನಿನ್ನಿಂದಾಗುತ್ತಿರುವ ಅನಾಹುತವನ್ನು ತಡೆಗಟ್ಟಲು ಸೂಕ್ತ ರೀತಿಯಲ್ಲಿ ಸಜ್ಜಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ನಮ್ಮ ಭಾರತದಲ್ಲಿನ ಪರಿಸ್ಥಿತಿ ನೆನಪಿಸಿಕೊಂಡರೇ ಎದೆ ನಡುಗುತ್ತದೆ.

    ನಿನ್ನ ದಾಳಿಯಿಂದ ಪಾರಾಗಲು ನಾವೆಲ್ಲರೂ ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಮಾನವ ಸಂಪರ್ಕವನ್ನು ಕಡಿಮೆ ಮಾಡುವ ಸಲುವಾಗಿ ಶಾಲೆ, ಕಾಲೇಜು, ಮಾಲ್​, ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ.

    ಇದನ್ನೂ ಓದಿ: ಚೀನಾ ಕೋವಿಡ್​ 19ರ ತೀವ್ರತೆಯನ್ನು ಬೇಕೆಂದೇ ಬಚ್ಚಿಟ್ಟಿತ್ತು: ಅಮೆರಿಕದ ವರದಿ

    ಅಗತ್ಯ ಸೇವೆಗಳನ್ನು ಪಡೆಯಲು, ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಹೋಗುವ ನಾವು ಅನಿವಾರ್ಯವಾಗಿ ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಪರಸ್ಪರ ಕನಿಷ್ಠ 1 ಮೀಟರ್​ ಅಂತರದಲ್ಲಿ ನಿಂತುಕೊಳ್ಳಬೇಕಾಗಿದೆ.

    ಹೌದು, ನಿನ್ನ ವಿರುದ್ಧ ಹೋರಾಡಲು ಕೆಚ್ಚೆದೆಯಿಂದ ನಾವು ಸಜ್ಜಾಗಿದ್ದೇವೆ. ಶತಾಯಗತಾಯ ನಿನ್ನನ್ನು ಹಿಮ್ಮೆಟ್ಟಿಸಲು ಪಣತೊಟ್ಟಿದ್ದೇವೆ.
    ನೀನು ಉಂಟು ಮಾಡುತ್ತಿರುವ ನೋವು, ಆಘಾತದಿಂದ ಮನಸ್ಸು ನೊಂದಿದೆ. ಅದರೆ ನಿನ್ನಿಂದ ಆಗಿರುವ ಅನಾಹುತವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ಜನರು ಸಂಘಟನೆಗೊಳ್ಳುತ್ತಿರುವ ರೀತಿ, ತೋರುತ್ತಿರುವ ದಿಟ್ಟತನ ಸಂತಸವನ್ನುಂಟು ಮಾಡುತ್ತಿದೆ.

    ಇದನ್ನೂ ಓದಿ: ವಿಮಾನಕ್ಕಾಗಿ ಕಾಯ್ತಾ ಇದ್ದೀರಾ? ಬೆಲೆ ನೋಡೋ ಮೊದ್ಲು ಎದೆ ಗಟ್ಟಿ ಮಾಡ್ಕೊಳಿ

    ಉದಾಹರಣೆಗೆ ಇಟಲಿಯಲ್ಲಿ ಕಣ್ಣೆದುರೇ ಸಹಸ್ರಾರು ಜನರು ಬಲಿಯಾಗುತ್ತಿದ್ದರೂ, ಒಂದು ಅಪಾರ್ಟ್​ಮೆಂಟ್​ ಜನ ಪರಸ್ಪರ ಧೈರ್ಯ ತುಂಬಲು ಬಾಲ್ಕನಿ ಮೇಲೆ ನಿಂತು ಹಾಡು ಹಾಡಿದ್ದು ಕಂಡು ಹೃದಯ ತುಂಬಿ ಬಂದಿತು.

    ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಅವಕಾಶವಂಚಿತರನ್ನು ಖುದ್ದಾಗಿ ಸಂಪರ್ಕಿಸಿ ಅವರಿಗೆ ಊಟೋಪಚಾರಗಳ ಜತೆಗೆ ಮಾಸ್ಕ್​ಗಳನ್ನು ವಿತರಿಸಿದ್ದಾರೆ.

    ಒರೆಗಾನ್​ನಲ್ಲಿ ಅಂಗಡಿಗಳಿಗೆ ಬಂದರೂ ಸೋಂಕು ತಗಲುವ ಭಯದಲ್ಲಿ ಕಾರಿನಿಂದ ಇಳಿಯಲು ಹೆದರುತ್ತಿದ್ದ ಹಿರಿಯ ನಾಗರಿಕರ ಪರವಾಗಿ ವ್ಯಕ್ತಿಯೊಬ್ಬ ಸ್ವಪ್ರೇರಣೆಯಿಂದ ಶಾಪಿಂಗ್​ ಮಾಡಿ ನಿಸ್ವಾರ್ಥತೆ ಮೆರೆದಿದ್ದಾರೆ. ನಿನ್ನಿಂದ ಜೀವಕ್ಕೇ ಅಪಾಯ ಇದೆ ಎಂಬುದು ಗೊತ್ತಿದ್ದರೂ ಜನರು ಮಾತ್ರ ನಿನ್ನ ವಿರುದ್ಧ ಸ್ಫೂರ್ತಿದಾಯಕ ಹೋರಾಟ ಸಂಘಟಿಸಲು ಸಜ್ಜಾಗಿದ್ದಾರೆ.

    ಇದನ್ನೂ ಓದಿ: ದೇಶಾದ್ಯಂತ ಲಾಕ್​ಡೌನ್ 3.0 ಜಾರಿ: ಹಸಿರು, ಕಿತ್ತಳೆ ವಲಯದಲ್ಲಿ ನಿರ್ಬಂಧ ಸಡಿಲಿಕೆ

    ನೀನು ನನ್ನ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಸಾಮೂಹಿಕ ಮಾನವ ಜೀವಹಾನಿಯ ಅನುಭವಕ್ಕೆ ಕಾರಣವಾಗಿದ್ದೀಯ. ನಿನ್ನಿಂದಾಗಿ ತಮ್ಮ ಪ್ರೀತಿಪಾತ್ರರಾದವರನ್ನು ಕಳೆದುಕೊಂಡು ಜೀವಗಳಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಹಾಗೂ ಸೋಂಕಿನಿಂದ ಬಳಲುತ್ತಿರುವವರು ಶೀಘ್ರವೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ಸಂಕಷ್ಟದ ಈ ಸಮಯದಲ್ಲಿ ಪರಸ್ಪರ ಸಹಾಯಕ್ಕೆ ಮುಂದಾಗಿ ಜಗತ್ತಿನಲ್ಲಿ ಇನ್ನೂ ಮಾನವೀಯತೆ ಇದೆ ಎಂಬುದನ್ನು ತೋರಿಸಿಕೊಟ್ಟ ಎಲ್ಲರಿಗೂ ಕೃತಜ್ಞತೆಗಳು. ನೀನು ನಮ್ಮಲ್ಲಿ ಇನ್ನೂ ಹಲವರನ್ನು ಬಲಿ ಪಡೆಯಬಹುದು. ಆದರೆ, ಜೀವಂತವಾಗುಳಿಯುವ ನಮ್ಮ ಹೋರಾಟದ ಮನೋಭಾವವನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ.

    ಇಡೀ ಮಾನವ ಜನಾಂಗವೇ ಒಂದಾಗಿ ನಿನ್ನ ವಿರುದ್ಧ ಹೋರಾಡುತ್ತೇವೆ. ಇನ್ನು ಕೆಲವೇ ದಿನಗಳಲ್ಲಿ ನೀನು ಇತಿಹಾಸದ ಪುಟ ಸೇರುವುದು ನಿಶ್ಚಿತ. ಈ ಸಂಕಷ್ಟದ ದಿನಗಳ ನಂತರದಲ್ಲಿ ನಾವೆಲ್ಲರೂ ಮತ್ತಷ್ಟು ಬಲಶಾಲಿಯಾಗಿ ಪುಟಿದೇಳುತ್ತೇವೆ. ಇದು ಖಂಡಿತ.

    ಅನಾದರ, ಅವಿಧೇಯತೆಗಳೊಂದಿಗೆ
    ಪ್ರಿಯಾಂಕಾ ಭಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts