More

    10 ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶ, ಮಳೆಗೆ ನೆಲಕಚ್ಚಿದ ಮರಗಳು

    ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಅಬ್ಬರಿಸಿದ ಮಳೆಯಿಂದಾಗಿ ಹಲವು ಮರಗಳು ಧರೆಗುರುಳಿದ್ದು, ಬೆಳೆ ಹಾನಿಯಾಗಿದೆ.

    ಸಂಜೆ ಆರಂಭಗೊಂಡ ಮಳೆ ಬಿರುಗಾಳಿ ಸಹಿತ ಗುಡುಗು ಸಿಡಿಲಿನೊಂದಿಗೆ ಭಾರೀ ಪ್ರಮಾಣದಲ್ಲಿ ಸುರಿಯಿತು, ಇದರಿಂದಾಗಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಮಾಡಿತು. ಮಳೆಯಿಂದ ರಾಮನಗರ ಸುತ್ತ ಮುತ್ತಲ ಪ್ರದೇಶದಲ್ಲಿ ಮರಗಳು ಬಿದ್ದಿದ್ದರೆ, ಕೆಲವು ಜಮೀನುಗಳಲ್ಲಿ ನೀರು ಸಂಗ್ರಹವಾಗಿ ರೈತರ ಮೊಗದಲ್ಲಿ ಸಂತಸ ತಂದಿತು. ಇನ್ನು ರಾಮನಗರ ರಂಗರಾಯದೊಡ್ಡಿಯ ಕೆರೆ ಏರಿ ಬಳಿ ಹಾಕಲಾಗಿರುವ ಛಾವಣಿಗಳು ಬಿರುಗಾಳಿಗೆ ಹಾರಿ ಹೋಗಿದ್ದವು. ಕೆಲ ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ ಜನತೆ ಪರದಾಡಿದರು. ಚನ್ನಪಟ್ಟಣ ತಾಲೂಕಿನಲ್ಲಿ ಬಿರುಗಾಳಿ ಪ್ರಮಾಣ ಹೆಚ್ಚಿದ್ದ ಕಾರಣದಿಂದಾಗಿ ಬಾಳೆ ತೋಟಗಳು, ತರಕಾರಿ ಬೆಳೆಗಳು ನೆಲ ಕಚ್ಚಿವೆ.

    ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಮಂಗಳವಾರ ರಾತ್ರಿ 47 ಮಿ.ಮೀ. ಮಳೆಯಾಗಿದೆ. ರಾಮನಗರದಲ್ಲಿ ಒಟ್ಟು 22 ಮಿ.ಮೀ. ಮಳೆಯಾಗಿದ್ದರೆ, ಚನ್ನಪಟ್ಟಣದಲ್ಲಿ 15 ಮಿ.ಮೀ., ಮಾಗಡಿಯಲ್ಲಿ 8.3 ಮಿ.ಮೀ. ಮತ್ತು ಕನಕಪುರದಲ್ಲಿ 2.6 ಮಿ.ಮೀ. ಮಳೆಯಾಗಿದೆ.

    ಬುಧವಾರವೂ ಮಳೆ: ಬುಧವಾರ ಸಂಜೆಯೂ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದೆ. ಸಂಜೆ 5.30ರ ಸುಮಾರಿಗೆ ಆರಂಭಗೊಂಡ ಮಳೆ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಅಬ್ಬರಿಸಿತು. ಇದರಿಂದಾಗಿ ಹಲವಾರು ಮರಗಳು ಉರುಳಿ ಬಿದ್ದಿದ್ದು, ಮಳೆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.

    ಬಿಡದಿಯಲ್ಲಿ ನೆಲಕಚ್ಚಿದ ಬಾಳೆ, ಜೋಳ: ರೈತರು 10.15 ಎಕರೆಯಲ್ಲಿ ಬೆಳೆದಿದ್ದ ಬಾಳೆ ಮತ್ತು 4.27 ಎಕರೆ ಜೋಳ ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ನೆಲಕಚ್ಚಿದೆ.

    ಬಿಡದಿ ಹೋಬಳಿ ಹೊಸೂರು ವೃತ್ತದ ಕಂಚುಗಾರನಹಳ್ಳಿ, ಅರಳಾಳುಸಂದ್ರ ಮತ್ತು ಬನ್ನಗಿರಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ, ಬೀಸಿದ ಬಿರುಗಾಳಿಗೆ ಬಾಳೆ, ಮನೆಯ ಛಾವಣಿ, ತೆಂಗಿನಮರ ಉರುಳಿವೆ. ಗಾಳಿ ರಭಸಕ್ಕೆ ತೆಂಗಿನ ಮರಗಳು ನೆಲಕಚ್ಚಿವೆ. ರೈತ ನಾಗೇಶ್ ಮತ್ತು ಕೃಷ್ಣಪ್ಪ ಎಂಬುವವರ ಜೋಳಕ್ಕೆ ಹಾನಿಯಾಗಿದೆ.
    ಅರಳಾಳುಸಂದ್ರ ಮತ್ತು ಕಂಚುಗಾರನಹಳ್ಳಿಯ ಭಾಗ್ಯಮ್ಮ, ದಾಸಪ್ಪ, ಮೂಡ್ಲಪ್ಪ, ನಾಗರಾಜು ಎಂಬುವವರು ಬಾಳೆಗಿಡಗಳು ಮುರಿದು ಬಿದ್ದಿವೆ. ಕೋಡಿದೊಡ್ಡಿ ಪಾಳ್ಯದ ಹೇಮಾ ಚೆಲುವಯ್ಯ ಅವರ ರೇಷ್ಮೆ ಹುಳು ಮನೆಗೆ ಹಾನಿಯಾಗಿದೆ. ಹಾಗೆಯೇ ಎಚ್. ಗೊಲ್ಲಳ್ಳಿಯ ಚನ್ನಿಗಪ್ಪ ಅವರ ತೋಟದಲ್ಲಿದ್ದ ತೆಂಗಿನ ಮರಗಳು ಉರುಳಿಬಿದ್ದಿವೆ.

    ಚನ್ನಪಟ್ಟಣದಲ್ಲಿ ಬಾಳೆ, ವೀಳ್ಯದೆಲೆ ನಾಶ: ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಅಬ್ಬೂರುದೊಡ್ಡಿ ಸೇರಿ ಈ ರಸ್ತೆಯ ಕೆಲವೆಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಲೂಕಿನ ನಾಗವಾರ ದಶವಾರ ಗ್ರಾಮದಲ್ಲಿ 5 ಎಕರೆ ಬಾಳೆ, 3ಕ್ಕೂ ಹೆಚ್ಚು ಎಕರೆ ವೀಳ್ಯದೆಲೆ ಬೆಳೆ ನೆಲಕಚ್ಚಿದೆ. 2 ಗ್ರಾಮಗಳ ಹಲವು ರೈತರ 20 ಕ್ಕೂ ಹೆಚ್ಚು ತೆಂಗಿನಮರಗಳು ನೆಲಕ್ಕೆ ಕಚ್ಚಿವೆ ಕೆಲದಿನಗಳ ಹಿಂದೆ ಬಿರುಗಾಳಿಗೆ ಸಿಲುಕಿ ತಾಲೂಕಿನ ನೂರಾರು ಎಕರೆ ಬೆಳೆನಾಶವಾಗಿತ್ತು. ಇದೀಗ ಈ ಎರಡು ಗ್ರಾಮಗಳ ರೈತರ ಬೆಳೆನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts