More

    1.51 ನಿಮಿಷದಲ್ಲಿ 15 ಹಲಸಿನ ತೊಳೆ ತಿಂದು ಬಹುಮಾನ ಗೆದ್ದರು!

    ಮೈಸೂರು: ಹಲಸು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಈ ಹಣ್ಣನ್ನು ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯಕರ ಜೀವನಕ್ಕೆ ಹಲಸನ್ನು ಆಹಾರದ ಭಾಗವಾಗಿ ಮಾಡಿಕೊಳ್ಳಬೇಕು ಎಂದು ಆಹಾರ ತಜ್ಞೆ ರತ್ನಾ ರಾಜಯ್ಯ ಹೇಳಿದರು.

    ಸಹಜ ಸಮೃದ್ಧ ಹಾಗೂ ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಲಸಿನ ಹಬ್ಬದಲ್ಲಿ ಹಲಸು ಅಡುಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
    ಶ್ರೀಲಂಕಾ, ಮಲೇಷಿಯಾ, ಥಾಯ್‌ಲ್ಯಾಂಡ್ ದೇಶಗಳು ಹಲಸಿನ ಮೌಲ್ಯವರ್ಧನೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿವೆ. ಹಲಸು ಅಲ್ಲಿನ ನಿತ್ಯದ ಆಹಾರದ ಭಾಗವಾಗಿದೆ ಎಂದರು.
    ಹಲಸಿನ ಅಡುಗೆ ಸ್ಪರ್ಧೆ ತೀರ್ಪುಗಾರರಾಗಿದ್ದ ಸಹಜ ಸಮೃದ್ಧದ ಸಂಚಾಲಕಿ ಸೀಮಾ ಪ್ರಸಾದ್ ಮಾತನಾಡಿ, ನಗರವಾಸಿಗಳು ಹಲಸಿನ ಕಾಯಿ, ಹಣ್ಣು ಮತ್ತು ಬೀಜಗಳಿಂದ ಅಡುಗೆ ಮಾಡುವುದನ್ನು ಕಲಿಯಬೇಕಿದೆ ಎಂದರು.

    ಮತ್ತೊಬ್ಬ ತೀರ್ಪುಗಾರರಾಗಿದ್ದ ಸಾವಯವ ಕೃಷಿಕ ಪಿ.ವಿನಯ ಚಂದ್ರ ಮಾತನಾಡಿ, ಹಲಸು ನಮ್ಮ ಆಹಾರ ಸಂಸ್ಕೃತಿಯ ಭಾಗ. ಕರ್ನಾಟಕದ ವೈವಿಧ್ಯದ ಹಲಸು, ಹಣ್ಣಿನ ಅಂಗಡಿಗಳಲ್ಲಿ ಸಿಗುವಂತಾಗಬೇಕು. ಇದರಿಂದ ಅವನ್ನು ಸಂರಕ್ಷಿಸುತ್ತಿರುವ ರೈತರಿಗೂ ನೆರವಾಗುತ್ತದೆ ಎಂದರು.
    ನಿವೃತ್ತ ಮಹಿಳಾ ಪೈಲೆಟ್, ಭಾರತೀಯ ವಾಯುಸೇನೆಯ ಸ್ವಾಡ್ರನ್ ಲೀಡರ್ ಪರಿಧಿ ಸಿಂಗ್ ಮಾತನಾಡಿ, ಕೆಂಪು ಹಲಸು ಮತ್ತು ಇತರ ವೈವಿಧ್ಯದ ಹಲಸನ್ನು ನಾನು ನೋಡುತ್ತಿರುವುದು ಇದೇ ಮೊದಲು. ನಗರದ ಗ್ರಾಹಕರಿಗೆ ಹಲಸಿನ ಪರಿಚಯ ಮಾಡಿಕೊಡಲು ದೇಶದ ವಿವಿಧ ನಗರಗಳಲ್ಲಿ ಹಲಸಿನ ಮೇಳಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.

    ಫಲಿತಾಂಶ:
    ಹಲಸಿನ ಕೇಕ್, ಹಲಸಿನ ಹಲ್ವ, ಹಲಸಿನ ಲಡ್ಡು, ಹಲಸಿನ ಪಲಾವ್, ಹಲಸಿನ ಪಾಯಸ, ಹಲಸಿನ ಹೋಳಿಗೆ, ಹಲಸಿನ ಕಬಾಬ್, ಹಲಸಿನ ಬೀಜದ ಮಾಲ್ಟ್, ಹಲಸಿನ ದೋಸೆ, ಹಲಸಿನ ವಡೆ, ಹಲಸಿನ ಹಣ್ಣಿನ ಫ್ರೂಟ್ ಸಲಾಡ್ ಮತ್ತು ಪತ್ರೊಡೆ ಸೇರಿದಂತೆ ಹಲವಾರು ಬಗೆಯ ಹಲಸಿನ ರುಚಿಕರ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು. ಮಂಗಳ ಪ್ರಕಾಶ್ (ಪ್ರಥಮ), ಕೆ.ಜಯಶ್ರೀ (ದ್ವಿತೀಯ) ಹಾಗೂ ಶ್ರೀದೇವಿ ಪಿ.ಹೆಗ್ಡೆ (ತೃತೀಯ) ಬಹುಮಾನ ಪಡೆದರು.
    ಹಲಸಿನ ಹಣ್ಣಿನ ತೊಳೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ತಮಿಳುನಾಡಿನಿಂದ ಹಲಸಿನ ಹಬ್ಬ ನೋಡಲು ಬಂದಿದ್ದ ತಿರುಚಿಯ ಜೆ.ಮಣಿಕಂಠನ್ 1.51 ನಿಮಿಷದಲ್ಲಿ 15 ಹಲಸಿನ ತೊಳೆ ತಿಂದು ಪ್ರಥಮ ಸ್ಥಾನ ಗಳಿಸಿದರು. ವಿ.ಬಿ.ಗಿರೀಶ್ ದ್ವಿತೀಯ ಹಾಗೂ ಎಸ್.ಪಿ.ಮೋಹನ್‌ಕುಮಾರ್ ತೃತೀಯ ಬಹುಮಾನ ಗಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts