More

    1 ಲಕ್ಷ ರೂಪಾಯಿಗೆ ಹಸುಗೂಸು ಮಾರಾಟ!

    ಬೇತಮಂಗಲ: ಮಹಿಳೆಯನ್ನು ವಂಚಿಸಿ ಹಸುಗೂಸನ್ನು ಬೆಂಗಳೂರಿನ ಶ್ರೀಮಂತ ಕುಟುಂಬಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ ಇಬ್ಬರು ಆಶಾ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಆಂಧ್ರ ಗಡಿಗ್ರಾಮ ಪಂಥನಪಲ್ಲಿಯ ನೀಲಮ್ಮ ಮಗು ಕಳೆದುಕೊಂಡವರು. ಮಗು ಮಾರಾಟ ಮಾಡಲು ಆಶಾ ಕಾರ್ಯಕರ್ತೆಯರು ಹಾಗೂ ಕೆಜಿಎ್ ಸಿವಿಲ್ ಆಸ್ಪತ್ರೆ ಸಿಬ್ಬಂದಿಗೆ ನೀಲಮ್ಮನ ಪತಿಯೇ ಸಹಕಾರ ನೀಡಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಮೂವರನ್ನೂ ಬೇತಮಂಗಲ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

    ಘಟನೆ ವಿವರ: ನೀಲಮ್ಮ ಅವರಿಗೆ ಈಗಾಗಲೆ ಒಂದು ಹೆಣ್ಣು, ಒಂದು ಗಂಡು ಮಗುವಿದ್ದು, ಸೆ.6ಂದು ಮನೆಯಲ್ಲೇ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸಂದರ್ಭದಲ್ಲಿ ನೀಲಮ್ಮ ಅವರ ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆ ಸಂಧ್ಯಾರಾಣಿ ಮಗುವಿಗೆ ಜನ್ಮನೀಡಿದ ಮಾಹಿತಿ ತಿಳಿದ ನಂತರ ಆರೈಕೆಗೆ ಮುಂದಾಗಿದ್ದರು. ಇವರ ಜತೆ ಐವಾರಹಳ್ಳಿ ವ್ಯಾಪ್ತಿಯ ಆಶಾ ಕಾರ್ಯಕರ್ತೆ ರೂಪಾ ಸೇರಿ ಮಗುವಿನ ತಂದೆ ಬಾಬುವನ್ನು ಪುಸಲಾಯಿಸಿ ಮಗುವನ್ನು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿಕೊಡುವುದಾಗಿ ಆಸೆ ತೋರಿಸಿದ್ದರು. ಇವರೊಂದಿಗೆ ಒಪ್ಪಂದ ಮಾಡಿಕೊಂಡ ಬಾಬು ಅ.1ರಂದು ಮಗುವಿಗೆ ತಿಂಗಳ ಚುಚ್ಚುಮದ್ದು ಕೊಡಿಸುವ ನೆಪದಲ್ಲಿ ಪತ್ನಿಯೊಂದಿಗೆ ಬಂಗಾರು ತಿರುಪತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚುಚ್ಚುಮದ್ದು ಇಲ್ಲವೆಂದು ಕೆಜಿಎಫ್ ಸಿವಿಲ್ ಆಸ್ಪತ್ರೆಯತ್ತ ತೆರಳಿದ್ದಾನೆ.

    ಅಗ್ರಿಮೆಂಟ್‌ಗೆ ಸಹಿ: ಸರ್ಕಾರದಿಂದ 10 ಸಾವಿರ ರೂ. ಪರಿಹಾರ ಬಂದಿದೆ ಎಂದು ನೀಲಮ್ಮ ಅವರಿಗೆ ಸುಳ್ಳು ಹೇಳಿದ ಆಶಾ ಕಾರ್ಯಕರ್ತೆಯರು, ಮಗು ಮಾರಾಟದ ಅಗ್ರಿಮೆಂಟ್‌ಗೆ ಇಬ್ಬರಿಂದಲೂ ಸಹಿ ಪಡೆದು ತಿಂಗಳ ಇಂಜೆಕ್ಷನ್ ಹಾಕಿಸಿ ಮಗುವನ್ನು ತಂದುಕೊಡುತ್ತೇವೆಂದು ಹೇಳಿ ಮಗು ಪಡೆದು ಅಲ್ಲಿಂದ ಹೊರಟು ಹೋಗಿದ್ದಾರೆ.

    3 ದಿನಗಳಾದರೂ ಮಗು ತಂದುಕೊಡದ ಕಾರಣ ಗಾಬರಿಯಾದ ನೀಲಮ್ಮ ಆಶಾ ಕಾರ್ಯಕರ್ತೆಯನ್ನು ಸಂಪರ್ಕಿಸಿ ಕೇಳಿದರೆ ಹಾರಿಕೆ, ಬೆದರಿಕೆಯ ಉತ್ತರ ಬಂದಿದೆ. ಆತಂಕಗೊಂಡ ನೀಲಮ್ಮ ಗಂಡನ ಬಳಿ ಕೇಳಿದಾಗ ಅವನೂ ನಿರ್ಲಕ್ಷ್ಯವಹಿಸಿದ್ದಾನೆ. ನಂತರ ಈ ಬಗ್ಗೆ ಗ್ರಾಮದ ಮುಖಂಡರೊಬ್ಬರ ಬಳಿ ಹೇಳಿದ್ದು, ಅವರು ಬೇತಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪಿಎಸ್‌ಐ ಜಗದೀಶ್‌ರೆಡ್ಡಿ, ಪೊಲೀಸರನ್ನು ಸ್ಥಳಕ್ಕೆ ಕಳಿಸಿ ಎನ್.ಜಿ.ಹುಲ್ಕೂರು ಪಂಚಾಯಿತಿಯ ಸಂಧ್ಯಾರಾಣಿ, ರೂಪಾ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮಗು ಮಾರಾಟ ಮಾಡಿರುವುದು ನಿಜ. 1 ಲಕ್ಷಕ್ಕೆ ವ್ಯಾಪಾರ ಕುದುರಿಸಿ ಬೆಂಗಳೂರಿನ ದಂಪತಿಯಿಂದ 70 ಸಾವಿರ ರೂ. ಪಡೆದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಕೆಲಸ ಮಾಡುವಂತೆ ನಮಗೆ ಸೆಲ್ವಿ ತಿಳಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಬಾಬು ವಿಚಾರಣೆ: ಬಾಬು ಅವರನ್ನೂ ವಿಚಾರಣೆಗೊಳಪಡಿಸಲಾಗಿದೆ. ಸೆಲ್ವಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಈಕೆ ಮಕ್ಕಳ ಮಾರಾಟ ಮಾಡುವ ಜಾಲದಲ್ಲಿದ್ದಾಳೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಗು ಪಡೆದಿರುವ ಬೆಂಗಳೂರು ಮೂಲದ ಕುಟುಂಬದವರನ್ನು ಕರೆತರಲು ಪೊಲೀಸರು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts