More

    1 ಕೋಟಿ ರೂ. ಹೆಚ್ಚುವರಿ ಪ್ರೋತ್ಸಾಹಧನ

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 1ಕೋಟಿ ರೂ. ಹೆಚ್ಚುವರಿ ಪ್ರೋತ್ಸಾನಧನ ನೀಡಲಾಗುವುದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಘೋಷಣೆ ಮಾಡಿದರು.

    ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಅವಳಿ ಜಿಲ್ಲೆಯ 194 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆನ್‌ಲೈನ್ ಗಣೀಕರಣಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಸಂಪೂರ್ಣ ಗಣಕೀಕರಣ ಮಾಡಬೇಕೆಂಬ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಶಯಗಳನ್ನು ದೇಶದಲ್ಲೇ ಮೊದಲ ಬಾರಿಗೆ ಅನುಷ್ಠಾನಗೊಳಿದ ಕೀರ್ತಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ಸಲ್ಲುತ್ತದೆ ಎಂದರು.

    ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕಿಗೆ ಕಾಯಕಲ್ಪ ನೀಡಿದ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ತಂಡವನ್ನು ಎಷ್ಟು ಪ್ರಶಂಸಿದರೂ ಸಾಲದು, ಆಲ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ, ಮಂಗಳೂರು ಮತ್ತು ಬೀದರ್ ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಆನ್‌ಲೈನ್ ಗಣಕೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆಯಾದರೂ ಸಂಪೂರ್ಣ ಸಾಧನೆಯಾಗಿಲ್ಲ, ಆಡಳಿತ ನಡೆಸುವವರಲ್ಲಿ ಬದ್ಧತೆ ಮತ್ತು ಇಚ್ಛಾಶಕ್ತಿ ಇದ್ದರೆ ಪ್ರಗತಿ ಸಾಧಿಸಬಹುದೆಂಬುದಕ್ಕೆ ಡಿಸಿಸಿ ಬ್ಯಾಂಕ್ ಸಾಧನೆಯೇ ಸಾಕ್ಷಿ ಎಂದರು.

    ಸಹಕಾರ ಸಂಘಗಳು ಸದೃಢವಾಗಿದ್ದರೆ ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ, ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳ ಅಭಿವೃದ್ಧಿ ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕಿಗೆ ಅಪೆಕ್ಸ್‌ನಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

    ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ಮಾತನಾಡಿ, ಗೋವಿಂದಗೌಡರು ಗಾಣದ ಎತ್ತಿನಂತೆ ಈ ಬ್ಯಾಂಕಿಗಾಗಿ ದುಡಿದಿದ್ದಾರೆ, ಹಗಲು-ರಾತ್ರಿ ಶ್ರಮಪಟ್ಟು ಈ ಬ್ಯಾಂಕನ್ನು ಆರ್ಥಿಕ ಹಾದಿಯಲ್ಲಿ ಓಡಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೆ ತಂದಿದ್ದಾರೆ ಎಂದರು.
    ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ರಾಜ್ಯದ 21 ಸಹಕಾರಿ ಬ್ಯಾಂಕ್‌ಗಳ ಪೈಕಿ ನಮ್ಮ ಬ್ಯಾಂಕ್ ಎಲ್ಲ ಸೌಲಭ್ಯ ಒಳಗೊಂಡಿದೆ ಎಂದರು.

    ಸಹಕಾರ ಸೇವೆಯನ್ನು ದೇವರ ಸೇವೆಯೆಂದು ಪರಿಗಣಿಸಬೇಕು. ಬಡವರ ಆಶೀರ್ವಾದವು ಶಕ್ತಿಯಾಗಲಿದೆ. ಸಹಕಾರ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಇತಿಹಾಸ ಸೃಷ್ಟಿಸಿದೆ ಎಂದು ಶಾಸಕಿ ಎಂ.ರೂಪಕಲಾ ಮೆಚ್ಚುಗೆ ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಅಪೆಕ್ಸ್ ಬ್ಯಾಂಕ್ ನೀಡಿದ ಉತ್ತೇಜನದಿಂದ ಈ ಸಾಧನೆ ಸಾಧ್ಯವಾಯಿತು. ಬಡವರ ಕ್ಷೇತ್ರವಾದ ಸಹಕಾರ ಕ್ಷೇತ್ರದಲ್ಲಿ ಲೋಪವಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಗಣಕೀಕರಣ ಸಹಕಾರಿ ಎಂದು ಭಾವಿಸಿದ್ದೇನೆ. ಪಾರದರ್ಶಕತೆ ಮೂಡಲಿದೆ ಎಂದರು.
    ಗಣಕೀಕರಣ ಲೋಪ ಸರಿಪಡಿಸಿಕೊಳ್ಳಲು ಹೆಲ್ಪ್‌ಡೆಸ್ಕ್ ಸ್ಥಾಪಿಸಿದ್ದು, ಸಹಕಾರ ಸಂಘಗಳು ಸದುಪಯೋಗಪಡಿಸಿಕೊಳ್ಳಬೇಕು. ಶೀಘ್ರ 15 ಹೊಸಶಾಖೆ ತೆರೆದು ಜನರಿಗೆ ಬ್ಯಾಂಕ್ ಹತ್ತಿರವಾಗುವಂತೆ ಮಾಡಲಾಗುವುದು ಎಂದರು.

    ಶಾಸಕ ಕೆ. ಶ್ರೀನಿವಾಸಗೌಡ, ಹೈದರಬಾದ್ ವಿಸಾಫ್ಟ್ ಸಂಸ್ಥೆಯ ಛೇರ‌್ಮನ್ ಮೂರ್ತಿ, ಬ್ಯಾಂಕ್ ಎಂಡಿ ಶಿವಕುಮಾರ್, ಎಜಿಎಂ ಬೈರೇಗೌಡ, ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ನೀಲಕಂಠೇಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಹನುಮಂತ ರೆಡ್ಡಿ, ಸೊಣ್ಣೇಗೌಡ, ವೆಂಕಟರೆಡ್ಡಿ, ಚನ್ನರಾಯಪ್ಪ, ಗೋವಿಂದರಾಜು, ಮೋಹನ್ ರೆಡ್ಡಿ, ನಾಗಿರೆಡ್ಡಿ, ನಾಗರಾಜ್, ಅಶ್ವಥಪ್ಪ, ಎಸ್.ವಿ.ಸುಧಾಕರ್, ಸಿ.ಕೆ. ವೇದಾ, ಎಚ್.ವಿ. ನಾಗರಾಜ್. ವೆಂಕಟಶಿವಾರೆಡ್ಡಿ, ವಿಸಾಫ್ಟ್ ಸಂಸ್ಥೆ ರಾಜ್ಯ ಉಸ್ತುವಾರಿ ಜಗದೀಶ್, ಶಿರೀಷ್ ಇದ್ದರು.

    ಸಹಕಾರ ಸಂಘಗಳ ಗಣಕೀಕರಣ ವ್ಯವಸ್ಥೆಗೆ ಒಂದು ಸಂಘಕ್ಕೆ 4.35 ಲಕ್ಷ ರೂ. ವೆಚ್ಚ ಭರಿಸಬೇಕಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.60 ತಮ್ಮ ಪಾಲು ಘೋಷಿಸಿದರೆ ಉಳಿದ ಶೇ.40ರಷ್ಟು ಪಾಲನ್ನು ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಭರಿಸಲಿದೆ.
    ದೇವರಾಜ್, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts