More

    ಹೋಳೂರು ಗ್ರಾಪಂ ಪಿಡಿಒ, ಸಿಬ್ಬಂದಿಗೆ ದಿಗ್ಬಂಧನ

    ಕೋಲಾರ: ತಾಲೂಕಿನ ಹೋಳೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಮೂಲಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷೆ ಪ್ರಿಯಾಂಕಾ ನೇತೃತ್ವದಲ್ಲಿ ಅಧಿಕಾರಿಗಳನ್ನು ಕಚೇರಿ ಕೊಠಡಿಯಲ್ಲಿ ಕೂಡಿಹಾಕಿ ಮಂಗಳವಾರ ಪ್ರತಿಭಟನೆ ವ್ಯಕ್ತಪಡಿಸಿದರು.

    ಪಿಡಿಒ ಲಕ್ಷ್ಮೀಶ ಕಾಮತ್ ಹಾಗೂ ಕಚೇರಿ ಸಿಬ್ಬಂದಿಯನ್ನು ಮಧ್ಯಾಹ್ನ 12ರಿಂದ ಸಂಜೆ 5.30ರವರೆಗೆ ಕಚೇರಿಯೊಳಗೆ ಕೂಡಿ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ ಗ್ರಾಮಸ್ಥರು ಜಿಪಂ ಸಿಇಒ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.

    ಗ್ರಾಪಂನಲ್ಲಿ ಅನೇಕ ತಿಂಗಳಿಂದ ಕಾಯಂ ಪಿಡಿಒ, ಕಾರ್ಯದರ್ಶಿಗಳಿಲ್ಲ. ಈ ಸಂಬಂಧ ಜಿಪಂ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೂ ಆಯಿತು, ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಇಲ್ಲ. ಕಾಯಂ ಅಧಿಕಾರಿ ಇಲ್ಲದೆ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ಗಟ್ಟಹಳ್ಳಿ ಹಾಗೂ ಅಣ್ಣೇನಹಳ್ಳಿಯಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದ ಕೆರೆಗೆ ನೀರು ಬಂದು ಪೈಪ್‌ಲೈನ್‌ನಲ್ಲಿ ಕೆಂಪುನೀರು ಸರಬರಾಜಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಕಾರ್ಯನಿರ್ವಹಿಸುತ್ತಿಲ್ಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ದೂರು ನೀಡಿದ್ದರೂ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

    ಪಿಡಿಒ ಆಗಿ ಪ್ರಭಾರ ವಹಿಸಿಕೊಂಡಿರುವ ಲಕ್ಷ್ಮೀಶ ಕಾಮತ್ ತಿಂಗಳು ಕಳೆದರೂ ಬೆರಳಚ್ಚು ಎನ್‌ರೋಲ್ ಮಾಡದೆ ಪಂಚಾಯಿತಿಯ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧ್ಯಕ್ಷೆ ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಇಂಜಿನಿಯರ್ ಶಿವಕುಮಾರ್ ಭೇಟಿ ನೀಡಿ ಆರ್‌ಒ ಘಟಕ ಸರಿಪಡಿಸುವ ಭರವಸೆ ನೀಡಿದರಾದರೂ ಜಿಪಂ ಸಿಇಒ ಬರಬೇಕೆಂದು ಪಟ್ಟು ಹಿಡಿದರು. ಸಂಜೆ ತಾಪಂ ಇಒ ಎನ್.ವಿ.ಬಾಬು ಭೇಟಿ ನೀಡಿ ಸಮಸ್ಯೆ ಆಲಿಸಿದಾಗ ಗ್ರಾಮಸ್ಥರು ಹಿಗ್ಗಾಮಗ್ಗ ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಶೀಘ್ರ ಬಗೆಹರಿಸಲು ಕ್ರಮ ವಹಿಸುವುದಾಗಿ ಇಒ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು. ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಶ್ರೀರಾಮಪ್ಪ, ಶಿವಾನಂದ, ತಾಪಂ ಮಾಜಿ ಸದಸ್ಯ ಗೋಪಾಲಗೌಡ, ಗ್ರಾಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ವಿಶ್ವನಾಥ್, ಬಾಬು, ಎಚ್.ಎಸ್.ರೆಡ್ಡಿ, ಮೋಹನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts