More

    ಹೊಸ ಮಾರ್ಗಸೂಚಿ ಅನುಷ್ಠಾನದಲ್ಲಿ ಗೊಂದಲ

    ಧಾರವಾಡ: ಕೋವಿಡ್ 2ನೇ ಅಲೆಯಿಂದ ಕರೊನಾ ಹೆಚ್ಚಳ ತಡೆಗಟ್ಟಲು ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಅಸಮರ್ಪಕ ಅನುಷ್ಠಾನದಿಂದ ನಗರದಲ್ಲಿ ಗುರುವಾರ ಗೊಂದಲ ಉಂಟಾಗಿದ್ದು ಕಂಡುಬಂತು.

    ಜಿಲ್ಲಾಡಳಿತ ಬುಧವಾರ ಹೊರಡಿಸಿದ್ದ ಆದೇಶದಲ್ಲಿ ಶಾಲೆ- ಕಾಲೇಜು, ಕೋಚಿಂಗ್ ಸೆಂಟರ್, ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್ ಯೋಗ ಕೇಂದ್ರ, ಸ್ಪಾ, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಮನರಂಜನೆ, ಮನೋರಂಜನಾ ಉದ್ಯಾನ, ಬಾರ್​ಗಳು, ಸಭಾಂಗಣಗಳು ಹಾಗೂ ಕ್ಲಬ್​ಗಳನ್ನು ಬಂದ್ ಮಾಡುವಂತೆ ಸೂಚಿಸಿತ್ತು.

    ಆದರೆ, ಗುರುವಾರ ಕಾರ್ಯಾಚರಣೆಗೆ ಇಳಿದ ಪೊಲೀಸರು ಪಾತ್ರೆ, ಬಟ್ಟೆ, ಪಾದರಕ್ಷೆ, ಸ್ಟೇಷನರಿ, ಬಂಗಾರದ ಅಂಗಡಿಗಳನ್ನೂ ಬಂದ್ ಮಾಡಿಸಿದರು. ಈ ಬಗ್ಗೆ ವ್ಯಾಪಾರಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಅಂಗಡಿಗಳನ್ನು ಬಂದ್ ಮಾಡಿದ ವ್ಯಾಪಾರಸ್ಥರು ಮಾರುಕಟ್ಟೆ ಪ್ರದೇಶದ ಸುಭಾಸ ರಸ್ತೆಯಲ್ಲಿ ಕೆಲಕಾಲ ಜಮಾವಣೆಗೊಂಡಿದ್ದರು. ಪೊಲೀಸರು ತಿಳಿಹೇಳಿದ ನಂತರ ವ್ಯಾಪಾರಸ್ಥರು ಚದುರಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಶ್ನಿಸಿದರು. ಹೊಸ ಮಾರ್ಗಸೂಚಿಗಳ ಅನ್ವಯ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಅಧಿಕಾರಿಗಳು ತಿಳಿಹೇಳಿ ಸಾಗಹಾಕಿದರು.

    ಉಳಿದಂತೆ ಆಸ್ಪತ್ರೆಗಳು, ಮೆಡಿಕಲ್ ಶಾಪ್​ಗಳು, ಟ್ರಕ್, ಸರಕು ವಾಹನಗಳು, ಆಟೋ, ಸಾರಿಗೆ ಸಂಸ್ಥೆಯ ಬಸ್​ಗಳು, ರೈಲುಗಳ ಸಂಚಾರ ಎಂದಿನಂತಿತ್ತು. ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಸಂಬಂಧಿಸಿದ ಸರಕುಗಳು, ಅಂಗಡಿ- ಮುಂಗಟ್ಟುಗಳು, ಹಾಲಿನ ಡೇರಿ, ವಹಿವಾಟು ನಡೆಯಿತು.

    ನಗರದಾದ್ಯಂತ ಸಭೆ- ಸಮಾರಂಭ, ಕ್ರೀಡೆ, ಮನರಂಜನೆ ಕಾರ್ಯಕ್ರಮ, ಧಾರ್ವಿುಕ ಸಭೆಗಳು ನಿಷಿದ್ಧವಾಗಿದ್ದವು. ಧಾರ್ವಿುಕ ಸ್ಥಳಗಳು ಹಾಗೂ ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗಿತ್ತು. ಸಲೂನ್ ಮತ್ತು ಬ್ಯೂಟಿ ಪಾರ್ಲರ್​ಗಳು ಕೋವಿಡ್ ನಿಯಮ ಅನುಸರಿಸಿ ಕಾರ್ಯನಿರ್ವಹಿಸಿದವು. ಪೆಟ್ರೊಲ್, ಡೀಸೆಲ್, ಸಿಲಿಂಡರ್ ಏಜೆನ್ಸಿಗಳು ಎಂದಿನಂತೆ ತೆರೆದಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts