More

    ಹೊಸಕೋಟೆ ಇನ್ಮುಂದೆ ಸ್ಯಾಟಲೈಟ್ ಟೌನ್, ಸಿಎಂ ಬೊಮ್ಮಾಯಿ ಭರವಸೆ, 140 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ

    ಹೊಸಕೋಟೆ: ರಾಜ್ಯ ರಾಜಧಾನಿಯ ಹೆಬ್ಬಾಗಿಲಾಗಿರುವ ಹೊಸಕೋಟೆಯನ್ನು ಸ್ಯಾಟಲೈಟ್ ಟೌನ್‌ಆಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಹೊಸಕೋಟೆಯಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ, ಸುಗಮ ವಾಹನ ಸಂಚಾರ ಸೇರಿ ಮಾದರಿ ನಗರಕ್ಕೆ ಬೇಕಾಗುವ ಎಲ್ಲ ಮೂಲಸೌಕರ್ಯಗಳೊಂದಿಗೆ ಹೊಸಕೋಟೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು.

    ಇಲ್ಲಿ ಕೈಗಾರಿಕೆ, ವೇರ್‌ಹೌಸ್, ಇ-ಕಾಮರ್ಸ್ ಸೇರಿ ಆರ್ಥಿಕ ಚಟುವಟಿಕೆಗಳಿಗೆ ಅಪಾರ ಅವಕಾಶಗಳಿವೆ. ಆದ್ದರಿಂದ ದೂರದೃಷ್ಟಿ ಇಟ್ಟುಕೊಂಡು ಹೊಸಕೋಟೆ ಯೋಜನಾ ಪ್ರಾಧಿಕಾರ ಸೂಕ್ತ ಯೋಜನೆ ರೂಪಿಸಬೇಕು ಎಂದರು.

    ರಾಜ್ಯ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದು, 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಿದೆ. ಜತೆಗೆ 100 ಹಾಸಿಗೆಗಳ 7 ಆಸ್ಪತ್ರೆ ನಿರ್ಮಿಸಲಿದ್ದು, ಇದು ತಾಲೂಕಿನ ಜನತೆಗೂ ಉಪಯೋಗವಾಗಲಿದೆ ಎಂದರು.

    ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ಬಿಡುಗಡೆಯಾಗಿದ್ದು, ಕೆಲವೇ ವರ್ಷಗಳಲ್ಲಿ ಜಿಲ್ಲೆ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಕೋಲಾರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

    ಕರೊನಾ ವೇಳೆ ರಾಜ್ಯ ಬಜೆಟ್ ಗಾತ್ರ ಕಡಿಮೆಯಾಗಲಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿದ್ದವು. ಆಗಲೇ 16 ಸಾವಿರ ಕೋಟಿ ರೂ.ಹೆಚ್ಚುವರಿ ಬಜೆಟ್ ಮಂಡಣೆ ಮಾಡಿ ಅಭಿವೃದ್ಧಿ ಪರ್ವ ಮುಂದುವರಿಸಿದ್ದೇನೆ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹೆಚ್ಚಿನ ಅನುದಾನದೊಂದಿಗೆ ಜನರ ಸಂಕಷ್ಟ ನಿವಾರಣೆಗೆ ಬಿಜೆಪಿ ಸರ್ಕಾರ ಸದಾ ಕೆಲಸ ಮಾಡಲಿದೆ ಎಂದರು.

    ಮೆಟ್ರೋ ವಿಸ್ತರಣೆಗೆ ಎಂಟಿಬಿ ಮನವಿ: ಹೊಸಕೋಟೆ ತಾಲೂಕಿಗೆ ತನ್ನದೇ ಆದ ಪರಂಪರೆ, ಇತಿಹಾಸವಿದೆ. ಜತೆಗೆ ಕೋಲಾರ, ಮಾಲೂರು, ನರಸಾಪುರದವರೆಗೂ ದೊಡ್ಡಮಟ್ಟದಲ್ಲಿ ಕೈಗಾರಿಕೋದ್ಯಮ ವಿಸ್ತರಣೆಯಾಗಿರುವುದರಿಂದ ಹೊಸಕೋಟೆಯವರೆಗೂ ಮೆಟ್ರೋ ರೈಲು ಸಂಚಾರ ವಿಸ್ತರಿಸಬೇಕೆಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದರು.

    ಈ ಹಿಂದಿನಿಂದಲೂ ಈ ಬಗ್ಗೆ ಸರ್ಕಾರಗಳ ಗಮನಸೆಳೆಯುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಬೇಡಿಕೆ ಸಾಕಾರಗೊಳ್ಳುವ ನಿರೀಕ್ಷೆ ಇದೆ ಎಂದರು. ಕೇಂದ್ರ ಸರ್ಕಾರ 15 ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಿದೆ, ಜಲಜೀವನ್ ಮಿಷನ್ ಯೋಜನೆಯಡಿ ಕೊಳವೆಬಾವಿ ಕೊರೆಸಿ, ಪ್ರತಿ ಮನೆಗಳಿಗೂ ಕುಡಿಯುವ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
    ಸರ್ಕಾರದ ವಸತಿ ಯೋಜನೆಯಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 100 ಮನೆಗಳಂತೆ ತಾಲೂಕಿನಲ್ಲಿ 2500 ಮನೆ ನಿರ್ಮಾಣ ಮಾಡಿ ವಸತಿ ಹಂಚಿಕೆ ಮಾಡಲಾಗುವುದು ಎಂದರು.

    ತಾಯಿ ಮಗು ಆಸ್ಪತ್ರೆ: ತಾಲೂಕಿಗೆ 38 ಕೋಟಿ ರೂ.ಅನುದಾನದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಮಂಜೂರು ಮಾಡಲಾಗಿದ್ದು, ಶೀಘ್ರವೇ ಭೂಮಿ ಪೂಜೆ ನೇರವೇರಿಸಲಾಗುವುದು ಎಂದು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸಂಸದರಿಂದ ಮೋದಿ ಗುಣಗಾನ: ರಾಜ್ಯ ಸರ್ಕಾರ ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು. ವಿಶ್ವಕ್ಕೆ ಮೋದಿ ಅತ್ಯಂತ ಪ್ರಭಾವಿ ನಾಯಕರಾಗಿದ್ದಾರೆ. ದೇಶದಲ್ಲಿ ಎಲ್ಲ ವಯೋಮಾನದವರಿಗೆ ಕರೊನಾ ಲಸಿಕೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮೈಲಿಗಲ್ಲು ನೆಟ್ಟಿದ್ದಾರೆ ಎಂದರು.

    ಶಾಸಕರಿಂದ ಮನವಿ ಸಲ್ಲಿಕೆ: ನಗರ ಅಥವಾ ಕಸಬಾ ಭಾಗದಲ್ಲಿ ಡಿಪ್ಲೊಮಾ ಕಾಲೇಜು ಮಂಜೂರು ಮಾಡಿ, ವಿದ್ಯಾರ್ಥಿಗಳು ಕೌಶಲಯುತ ಶಿಕ್ಷಣ ಪಡೆಯಲು ಸಹಕರಿಸಬೇಕು, ತಾಲೂಕಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕು, ಸುಸಜ್ಜಿತವಾದ ಹೈಸ್ಪೀಡ್ ಟರ್ಮಿನಲ್, ಎಲಿವೇಟೆಡ್ ಕಾರಿಡಾರ್ ಜಂಕ್ಷನ್ ಸೇರಿ 10 ಬೇಡಿಕೆಗಳನ್ನು ಶಾಸಕ ಶರತ್‌ಬಚ್ಚೇಗೌಡ ಸಿಎಂಗೆ ಸಲ್ಲಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವ ಸಂದರ್ಭದಲ್ಲಿ ಸಮರ್ಪಕ ಮಾಹಿತಿ ನೀಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts