More

    ಹೊಸಕೋಟೆ ಅಭಿವೃದ್ಧಿಗೆ ಎಂಟಿಬಿ ಕಂಟಕ

    ವಿಜಯವಾಣಿ ಸುದ್ದಿಜಾಲ ಹೊಸಕೋಟೆ
    ಮುಖ್ಯಮಂತ್ರಿಗಳ ವಿಶೇಷ ಕಾರ್ಯಕ್ರಮದಡಿ ನೀಡಲಾದ 10 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು 2022-23 ರ ಜೂನ್‌ನಲ್ಲಿ ಅನುಮೋದಿಸಿ ಆರ್ಥಿಕ ಇಲಾಖೆಯಿಂದ ಪತ್ರ ಬರೆಯಲಾಗಿತ್ತು. ಅಂದಿನಿಂದ ಇಂದಿನವರೆಗೆ ಹಣ ಬಿಡುಗಡೆ ಮಾಡದಂತೆ ಸಚಿವ ಎಂಟಿಬಿ ನಾಗರಾಜ್ ಸಿಎಂ ಮೇಲೆ ಒತ್ತಡ ಹೇರುವ ಮೂಲಕ ಹೊಸಕೋಟೆ ಅಭಿವೃದ್ಧಿಗೆ ಕಂಟಕವಾಗಿದ್ದಾರೆ ಎಂದು ಶಾಸಕ ಶರತ್‌ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.
    ನಗರದ ಶಾಸಕರ ಕಚೇರಿಯಲ್ಲಿ ಬುಧವಾರ ದಾಖಲೆ ಬಿಡುಗಡೆ ಮಾಡಿ ಮಾತನಾಡಿದರು. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದೇನೆ, ಅಭಿವೃದ್ಧಿಗೆ ತಡೆಯೊಡ್ಡಿದ ಸಚಿವರಿಗೆ ಈ ಬಾರಿ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
    ಆಪರೇಷನ್ ಮಾಡಿಸಿಕೊಂಡವರಿಗೆ ತಕ್ತ ಉತ್ತರ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತದಾರರ ಅಭಿಪ್ರಾಯ ಕೇಳದೆ ಅಧಿಕಾರದ ಆಸೆಗೆ ಬಾಂಬೆಗೆ ತೆರಳಿ ಪಕ್ಷಾಂತರದ ಆಪರೇಷನ್‌ಗೊಳಗಾಗಿ ಉಪಚುನಾವಣೆ ಎದುರಿಸುವಂತಹ ಪರಿಸ್ಥಿತಿಯನ್ನು ಹೊಸಕೋಟೆಗೆ ತಂದರು, ಮತದಾರರು ತಕ್ಕ ಪಾಠ ಕಲಿಸಿದರೂ ಹಿಂಬಾಗಿಲಿನಿಂದ ವಿಧಾನಸಭೆ ಪ್ರವೇಶಿಸಿ ಮತ್ತೆ ಸಚಿವರಾದ ಎಂಟಿಬಿ, ಹೊಸಕೋಟೆಗೆ ಯಾವ ಶಾಶ್ವತ ಅಭಿವೃದ್ಧಿಯನ್ನು ಮಾಡಲಿಲ್ಲ ಎಂದು ದೂರಿದರು. ಅಭಿವೃದ್ಧಿಗೆ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಶಾಸಕರಿಗೆ ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೊಸಕೋಟೆಗೆ ಬಿಡುಗಡೆ ಮಾಡಿದರೆ ಶಾಸಕರಿಗೆ ಜನಮನ್ನಣೆ ದೊರೆಯಲಿದೆ ಎಂಬ ಕಾರಣಕ್ಕೆ ಹಣ ಬಿಡುಗಡೆ ಮಾಡದಂತೆ ಒತ್ತಡ ಹೇರುವ ಮೂಲಕ ಹೊಸಕೋಟೆ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಶಾಸಕರು ದೂರಿದರು.
    ಆಣೆ-ಪ್ರಮಾಣಕ್ಕೆ ಬರಲಿ: ಎಂಟಿಬಿ ಮೆಚ್ಚಿನ ದೈವ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಅವರು ಬರಲಿ ನಾನೂ ಬರುತ್ತೇನೆ. ದೇವರ ಮುಂದೆ ಕರ್ಪೂರ ಹಚ್ಚಿ ಸತ್ಯ ಹೇಳುತ್ತೇನೆ. ಅವರೂ ಹೇಳಲಿ ಎಂದು ಶರತ್ ಸವಾಲು ಹಾಕಿದರು. ರಾಜ್ಯದ ಪೌರಾಡಳಿತ ಮಂತ್ರಿಯಾಗಿ ರಾಜ್ಯದ ಎಷ್ಟು ಪುರಸಭೆಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿದ್ದಾರೆ, ತಾಲೂಕಿನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ ಎಂಬುದರ ಬಗ್ಗೆ ರಾಜ್ಯದ ಜನತೆಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
    ನಾಲಿಗೆ ಸಂಸ್ಕೃತಿ ತೋರಿಸುತ್ತದೆ: ಸಚಿವರ ಪುತ್ರ ರಾಜೇಶ್ ಬಿಜೆಪಿ ಆಕಾಂಕ್ಷಿ ಅಷ್ಟೇ, ಅಭ್ಯರ್ಥಿ ಅಲ್ಲ, ಆದರೂ ತಾಲೂಕಿನ ಸಭೆ ಸಮಾರಂಭಗಳಲ್ಲಿ ತಾಲೂಕಿನ ಜನತೆಯಿಂದ ಆಯ್ಕೆಯಾಗಿರುವ ಒಬ್ಬ ಶಾಸಕನಿಗೆ ಏಕವಚನದಲ್ಲಿ ಮಾತನಾಡುವ ಅವರ ಸಂಸ್ಕೃತಿಯನ್ನು ಜನ ನೋಡಿದ್ದಾರೆ ಎಂದು ಶಾಸಕರು ಹರಿಹಾಯ್ದರು.
    ಉಪವಾಸ ಸತ್ಯಾಗ್ರಹ: ರಾಜ್ಯದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದು ಕೂಡಲೆ ಹಣ ಬಿಡುಗಡೆ ಮಾಡಿಡುವಂತೆ ಒತ್ತಡ ಹೇರಲಾಗುವುದು, ಬಿಡುಗಡೆ ಮಾಡದಿದ್ದರೆ ಚುನಾವಣೆ ನೀತಿ ಸಂಹಿತೆ ಜಾರಿಯ ಕೊನೇ ಕ್ಷಣದವರೆಗೆ ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಶರತ್ ತಿಳಿಸಿದರು.

    ಶರತ್ ಧರಣಿ ಮೊಟಕು
    ಬೆಂ. ಗ್ರಾಮಾಂತರ: ಮುಖ್ಯಮಂತ್ರಿಗಳ ವಿಶೇಷ ಕಾರ್ಯಕ್ರಮದಡಿ ಹೊಸಕೋಟೆಗೆ ನೀಡಲಾದ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡದಂತೆ ಸಚಿವ ಎಂಟಿಬಿ ನಾಗರಾಜ್ ಒತ್ತಡ ಹಾಕಿ ತಡೆಹಿಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಗುರುವಾರ ಸಂಜೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಶಾಸಕ ಶರತ್‌ಬಚ್ಚೇಗೌಡ ಆರಂಭಿಸಿದ್ದ ಧರಣಿ ಕೆಲ ತಾಸಿನ ಬಳಿಕ ಕಾಂಗ್ರೆಸ್ ವರಿಷ್ಠರ ಆಣತಿಯಂತೆ ಮೊಟಕುಗೊಳಿಸಿದರು. 2022-23ರ ಜೂನ್‌ನಲ್ಲಿ ಅನುಮೋದಿಸಿ ಆರ್ಥಿಕ ಇಲಾಖೆಯಿಂದ ಪತ್ರ ಬರೆಯಲಾಗಿತ್ತು. ಅಂದಿನಿಂದ ಇಂದಿನವರೆಗೆ ಹಣ ಬಿಡುಗಡೆ ಮಾಡದಂತೆ ಸಚಿವ ಎಂಟಿಬಿ ನಾಗರಾಜ್ ಸಿಎಂ ಮೇಲೆ ಒತ್ತಡ ಹೇರುವ ಮೂಲಕ ಹೊಸಕೋಟೆ ಅಭಿವೃದ್ಧಿಗೆ ಕಂಟಕವಾಗಿದ್ದಾರೆ ಎಂದು ಆರೋಪಿಸಿದ್ದ ಶಾಸಕರು ಇದಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ಧರಣಿ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಿಯಾಂಕ ಖರ್ಗೆ ಕೆಲಹೊತ್ತು ಶರತ್‌ಗೆ ಜತೆಯಾಗಿದ್ದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರ ಮುಖಂಡರು ಧರಣಿ ಕೈಬಿಡುವಂತೆ ಸೂಚಿಸಿದರು. ಕ್ಷೇತ್ರದಲ್ಲಿ ಈ ಬಗ್ಗೆ ಜನರಿಗೆ ಮನವರಿಕೆೆ ಮಾಡಿಕೊಡುವಂತೆ ಸಲಹೆ ರವಾನೆಯಾಯಿತು ಎನ್ನಲಾಗಿದೆ.
    ಚುನಾವಣೆ ಹೊಸ್ತಿಲಿನಲ್ಲಿ ಸದ್ದು: ಹೊಸಕೋಟೆಯಲ್ಲಿ ಸಚಿವ ಎಂಟಿಬಿ ಹಾಗೂ ಶಾಸಕ ಶರತ್‌ಬಚ್ಚೇಗೌಡ ನಡುವಿನ ಚಟಾಪಟಿ ತೀವ್ರ ಸ್ಪರೂಪ ಪಡೆದುಕೊಳ್ಳುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ಆರೋಪ ಪ್ರತ್ಯಾರೋಪದ ಮೂಲಕ ಸದಾ ಸದ್ದು ಮಾಡುವ ಇವರಿಬ್ಬರ ನಡುವಿನ ರಾಜಕೀಯ ಚದುರಂಗದಾಟ ಚುರುಕು ಪಡೆಯುತ್ತಿರುವ ನಡುವೆ ಶರತ್ ಆರಂಭಿಸಿದ್ದ ಧರಣಿ ಗಮನ ಸೆಳೆದಿತ್ತು. ಏತನ್ಯಧ್ಯೆ ಇದೇ ವಿಚಾರ ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಧರಣಿ ನಡೆಸುವ ಬಗ್ಗೆ ಶಾಸಕರು ಯೋಚಿಸಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts