More

    ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕೊರತೆ

    ಹೊಳೆನರಸೀಪುರ: ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ವಿಸ್ತೀರ್ಣಗೊಳ್ಳುವುದರ ಜತೆಗೆ ನವೀಕರಣಗೊಂಡು 6 ತಿಂಗಳು ಕಳೆಯುತ್ತಿದ್ದರೂ ಮೂಲ ಸೌಲಭ್ಯವಿಲ್ಲದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ.

    ಈ ಮೊದಲು ಫ್ಲಾಟ್‌ಫಾರಂನಲ್ಲಿ 15ರಿಂದ 20 ಬಸ್‌ಗಳು ನಿಲ್ಲಲು ಸ್ಥಳಾವಕಾಶವಿತ್ತು. ನಿಲ್ದಾಣ ವಿಸ್ತೀರ್ಣಗೊಂಡ ನಂತರ 25 ರಿಂದ 30 ಬಸ್ ನಿಲ್ಲಬಹುದಾಗಿದೆ. ಅಲ್ಲದೆ ಯಾವುದೇ ಫ್ಲಾಟ್‌ಫಾರಂನಲ್ಲಿ ಮಾರ್ಗಸೂಚಿ ಫಲಕ, ಫ್ಲಾಟ್‌ಫಾರಂ ಸಂಖ್ಯೆ ಇಲ್ಲದ ಕಾರಣ ಪ್ರಯಾಣಿ ಕರು ಯಾವ ಮಾರ್ಗದ ಬಸ್‌ಗಳು ಎಲ್ಲಿ ನಿಲ್ಲುತ್ತವೆ ಎಂದು ತಿಳಿಯದೆ ಪರದಾಡುವಂತಾಗಿದೆ.

    ಅಲ್ಲದೆ ಪ್ರಯಾಣಿಕರು ಪ್ರತಿ ಬಾರಿ ಯಾವ ಬಸ್ ಎಲ್ಲಿ ನಿಲ್ಲತ್ತದೆ ಎಂದು ಕೇಳಿದರೂ ನಿಲ್ದಾಣಾಧಿಕಾರಿಯಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ. ಇನ್ನು ಬೇರೆ ಬೇರೆ ಘಟಕಗಳಿಂದ ಬರುವ ಬಸ್‌ಗಳ ಚಾಲಕರಿಗೂ ಬಸ್ ಎಲ್ಲಿ ನಿಲುಗಡೆ ಮಾಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರಿಗೆ ಅಗತ್ಯಕ್ಕೆ ತಕ್ಕಂತೆ ಆಸನಗಳಿಲ್ಲದ ಪರಿಣಾಮ ಬಸ್ ಬರುವವರೆಗೂ ನಿಲ್ಲಬೇಕಾದ ಪರಿಸ್ಥಿತಿ ಇದೆ.

    ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ನೆನಪು ಮಾತ್ರ. ವಿಸ್ತಾರಗೊಂಡ ಸ್ಥಳದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹವಿದ್ದರೂ ಯಾರಿಗೂ ಉಪಯೋಗಕ್ಕೆ ಬಾರದಂತಿದೆ. ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸುವ ದ್ವಾರ ಹಾಗೂ ಒಳಾವರಣ ಗುಂಡಿ ಬಿದ್ದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬುದು ಪ್ರಯಾಣಿಕರ ದೂರು.

    ಪಟ್ಟಣದ ಕೆಎಸ್‌ಆರ್‌ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಗೃಹದ ಕೆಲಸ ಪೂರ್ಣಗೊಳ್ಳಬೇಕಿದೆ. ನಿಲುಗಡೆ ಸೂಚಿಸುವ ನಾಮಫಲಕಗಳು ಸಿದ್ಧವಾಗಿದ್ದು ಅಳವಡಿಸಬೇಕಾಗಿದೆ. ಅಂತೆಯೇ ಉಳಿದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮೇಲಧಿಕಾರಿಗಳ ಗಮನ ಸೆಳೆಯ ಲಾಗಿದೆ.
    ಪಾಪನಾಯಕ, ಘಟಕ ವ್ಯವಸ್ಥಾಪಕ ಕೆಎಸ್‌ಆರ್‌ಟಿಸಿ ಹೊಳೆನರಸೀಪುರ

    ಪಟ್ಟಣದ ಬಸ್ ನಿಲ್ದಾಣದಲ್ಲಿ ನಾಮಫಲಕವಿಲ್ಲದ ಕಾರಣ ಪ್ರಯಾಣಿಕರು ಬಸ್‌ಗಳನ್ನು ಹುಡುಕುವ ಪರಿಸ್ಥಿತಿ ಇದೆ. ನಿಲ್ದಾಣದಲ್ಲಿ ನಿರ್ವಹಣೆ ಉತ್ತಮವಾಗಿಲ್ಲ.
    ಎಚ್.ಎಸ್.ಹರೀಶ್ ಹೊಳೆನರಸೀಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts