More

    ಹೊಲದಲ್ಲೇ ಒಣಗುತ್ತಿದೆ ಕಬ್ಬು!

    ಡಂಬಳ: ಡಂಬಳ ವ್ಯಾಪ್ತಿಯ ನೂರಾರು ಎಕರೆ ಯಲ್ಲಿ ಬೆಳೆಯಲಾದ ಕಬ್ಬು ಕಟಾವಿಗೆ ಬಂದು ಮೂರ್ನಾಲ್ಕು ತಿಂಗಳು ಕಳೆದರೂ ಸಕ್ಕರೆ ಕಾರ್ಖಾನೆಯವರು ಇನ್ನೂ ಕಟಾವು ಮಾಡಿಲ್ಲ..!

    ಗಂಗಾಪುರ ಸಕ್ಕರೆ ಕಾರ್ಖಾನೆ ಯವರ ವಿಳಂಬ ಧೋರಣೆಯಿಂದಾಗಿ ಕಬ್ಬು ಇದೀಗ ಹೂವು ಬಿಟ್ಟು ಒಣಗುತ್ತಿದೆ. ಹೀಗಾಗಿ ಇಳುವರಿ ಕುಂಠಿತವಾಗಿ ಮಾಡಿದ ಖರ್ಚು ಕೂಡ ವಾಪಸ್ ಬಾರದಂತಾಗುತ್ತದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.

    ಕಬ್ಬನ್ನು 12 ತಿಂಗಳ ಒಳಗಾಗಿ ಕಟಾವು ಮಾಡುಬೇಕು. ಆದರೆ, 15, 16 ತಿಂಗಳು ಕಳೆದರೂ ಇನ್ನೂ ಕಟಾವು ಮಾಡಿಲ್ಲ. ಎಕರೆಗೆ 40-45 ಟನ್ ಇಳುವರಿ ಬರುವ ಕಬ್ಬು ಸದ್ಯದ ಸ್ಥಿತಿ ನೋಡಿದರೆ 20 ಟನ್ ಬರುವಂತೆ ಗೋಚರಿಸುತ್ತಿದೆ. ಸತತ ಬರಗಾಲದಿಂದ ಬೆಳೆ ಕೈಕೊಟ್ಟರೆ ಕಳೆದ ವರ್ಷ ಅತಿವೃಷ್ಟಿಯಿಂದ ತೇವಾಂಶ ಹೆಚ್ಚಳವಾಗಿ ಬೆಳೆ ನಾಶವಾಗಿತ್ತು. ಇದೀಗ ಕಟಾವು ವಿಳಂಬ ಮಾಡುತ್ತಿರುವುದರಿಂದ ಈ ಬಾರಿಯೂ ಮತ್ತೆ ಸಂಕಷ್ಟ ಎದುರಾಗಿದೆ. ಒಂದು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲು ಉತ್ತಮ ಬೀಜ, ಗೊಬ್ಬರ, ಕೂಲಿ ಆಳುಗಳ ಪಗಾರ ಸೇರಿ 30ರಿಂದ 35 ಸಾವಿರ ರೂ. ಖರ್ಚಾಗುತ್ತದೆ. ಬೆಳೆಗೆ ಖರ್ಚು ಮಾಡಿದಷ್ಟೂ ಇಳುವರಿ ಬರದಂತಹ ಸ್ಥಿತಿ ಉಂಟಾಗಿದೆ.

    ಸರಿಯಾಗಿ 12 ತಿಂಗಳಿಗೆ ನಿಮ್ಮ ಹೊಲಗಳಿಗೆ ಬಂದು ಕಬ್ಬು ಕಟಾವು ಮಾಡಿಕೊಳ್ಳುತ್ತೇವೆ ಎಂದು ಸಕ್ಕರೆ ಕಾರ್ಖಾನೆಯವರು ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದಂತೆ ಕಬ್ಬು ತೆಗೆದುಕೊಂಡು ಹೋಗಿ ಎಂದು ಕಂಪನಿಯವರಿಗೆ ಹೇಳಿ ಹೇಳಿ ಸಾಕಾಗಿದೆ. ಆದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.

    | ಸಿದ್ದಪ್ಪ ಹಾದಿಮನಿ ಕಬ್ಬು ಬೆಳೆಗಾರ

    ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಕಬ್ಬು ಕಟಾವು ಸಾಧ್ಯವಾಗಿಲ್ಲ. ಶೀಘ್ರವೇ ಕಟಾವಿಗೆ ಬಂದ ಕಬ್ಬನ್ನು ಒಂದು ವಾರದ ಒಳಗಾಗಿ ಕಟಾವು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

    | ಮುರಳೀಧರ

    ವಿಭಾಗೀಯ ಮ್ಯಾನೇಜರ್ ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts