More

    ಹೊರಗಿನವರ ಮೇಲೆ ನಿಗಾ ವಹಿಸಿ

    ಹಾನಗಲ್ಲ: ಬೆಂಗಳೂರಿನಿಂದ ಜನರು ಸ್ವ ಗ್ರಾಮಗಳಿಗೆ ಮರಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಗುರುತಿಸಿ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ, ವೈದ್ಯಾಧಿಕಾರಿಗಳಿಗೆ ಹಾಗೂ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.

    ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಬೆಂಗಳೂರಿನಲ್ಲಿ ಕರೊನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಕಾರ್ವಿುಕ ಸಮುದಾಯ ಅಲ್ಲಿಂದ ಗ್ರಾಮಗಳಿಗೆ ಬರುತ್ತಿದ್ದಾರೆ. ಇದರೊಂದಿಗೆ ಮದುವೆ ಸಮಾರಂಭಗಳಲ್ಲಿಯೂ ಹೆಚ್ಚು ಜನ ಸೇರುತ್ತಿದ್ದಾರೆ. ಪಿಡಿಒಗಳು ಮದುವೆಗಳಿಗೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹೇರಬೇಕು. ಕಾನೂನು ಉಲ್ಲಂಘಿಸಿದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರುವ ಜನರು ಮದುವೆಯಲ್ಲಿ ಉಡುಗೊರೆ ಕೊಟ್ಟು ಸೋಂಕು ಪಡೆದುಕೊಂಡು ತೆರಳುವಂತಾಗಬಾರದು. ಸೋಂಕು ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂಬುದನ್ನು ಜನತೆಗೆ ಅರ್ಥ ಮಾಡಿಸಬೇಕು. ಎಲ್ಲ ಇಲಾಖೆಯ ಸಿಬ್ಬಂದಿ ಈ ಕಾರ್ಯಕ್ಕೆ ಕೈಜೋಡಿಸಬೇಕು’ ಎಂದು ಸೂಚನೆ ನೀಡಿದರು.

    ತಾಲೂಕು ವೈದ್ಯಾಧಿಕಾರಿ ಡಾ. ಕೆ.ಜಿ. ಲಿಂಗರಾಜ ಮಾತನಾಡಿ, ರ್ಯಾಪಿಡ್ ಕಿಟ್​ಗಳು ಸರಬರಾಜಾಗುತ್ತಿಲ್ಲ. ಲ್ಯಾಬ್ ಟೆಕ್ನಿಷಿಯನ್​ಗಳ ಕೊರತೆ ಇರುವುದರಿಂದ ಕೆಲಸ ವಿಳಂಬವಾಗುತ್ತಿವೆ. ಆಶಾ-ಅಂಗನವಾಡಿ ಸಿಬ್ಬಂದಿ ಎಲ್ಲ ಮನೆಗಳಿಗೂ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಹಾನಗಲ್ಲ ಪಟ್ಟಣದಲ್ಲಿ 5 ಉಪ ಕೇಂದ್ರಗಳನ್ನು ತೆರೆಯಲಾಗಿದ್ದರೂ ಅಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಒಪ್ಪಿಗೆ ನೀಡುತ್ತಿಲ್ಲ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲೇ ನೀಡುವ ಅನಿವಾರ್ಯತೆಯಿದೆ ಎಂದರು.

    ಸಭೆಯಲ್ಲಿ ಸಿಪಿಐ ಶಿವಶಂಕರ ಗಣಾಚಾರಿ, ಇಒ ಸುನೀಲಕುಮಾರ, ಸಿಡಿಪಿಒ ಎಚ್. ಸಂತೋಷಕುಮಾರ, ನೋಡಲ್ ಅಧಿಕಾರಿಗಳಾದ ಜಿ.ಬಿ. ಹಿರೇಮಠ, ಎಸ್.ಆನಂದ, ದೇವೇಂದ್ರಪ್ಪ ಕಡ್ಲೇರ್, ಗಿರೀಶ ರಡ್ಡೇರ, ಶೇಖರ ಹಂಚಿನಮನಿ, ಪಿಎಸ್​ಐ ]ಶ್ರೀಶೈಲ ಪಟ್ಟಣಶೆಟ್ಟಿ ಇತರರು ಇದ್ದರು.

    16 ನೋಡಲ್ ಅಧಿಕಾರಿಗಳ ನೇಮಕ: ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 150 ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದೆ. ಕೆಲವರು ಹೋಂ-ಕ್ವಾರಂಟೈನ್ ಆಗಿದ್ದಾರೆ, ಅವರು ಹೊರಗೆ ಓಡಾಡದಂತೆ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು. ಉಸ್ತುವಾರಿಗಾಗಿ ತಾಲೂಕಿನಲ್ಲಿ 16 ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಯಳವಟ್ಟಿ ಗ್ರಾಮದ ಸಮೀಪ ಕೋವಿಡ್ ರೋಗಿಗಳ ಅಂತ್ಯಕ್ರಿಯೆಗೆ 3 ಎಕರೆ ಪ್ರದೇಶವನ್ನು ಸಿದ್ಧಗೊಳಿಸಲಾಗಿದೆ. ಬೆಳಗ್ಗೆ 10ರ ನಂತರ ಔಷಧ ಅಂಗಡಿಗಳನ್ನು ಹೊರತುಪಡಿಸಿ ಯಾವುದೇ ಮಳಿಗೆಗಳನ್ನು ತೆರೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಸಂತೆ, ಮದುವೆಗಳಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಿ ಎಚ್ಚರಿಕೆ ನೀಡಲಾಗಿದೆ. ಮದುವೆಗೆ ಬರುವವರು ಕಡ್ಡಾಯವಾಗಿ ಪಾಸ್ ಪಡೆದಿರಬೇಕು ಎಂಬ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts