More

    ಹೊರಗಿನವರ ಕ್ವಾರಂಟೈನ್​ಗೆ ಸ್ಥಳೀಯರ ವಿರೋಧ

    ಕುಮಟಾ: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬಂದಿರುವ ಭಟ್ಕಳ ಹಾಗೂ ಅಂಕೋಲಾದ ಇಬ್ಬರನ್ನು ತಾಲೂಕಿನ ಬಾಡದ ಓಂಬೋಧಿ ರೆಸಾರ್ಟ್​ನಲ್ಲಿ ಸೋಮವಾರ ರಾತ್ರಿ ತಂದು ಕ್ವಾರಂಟೈನ್ ಮಾಡಿದ್ದನ್ನು ವಿರೋಧಿಸಿ ಸ್ಥಳೀಯರು ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

    ಭಟ್ಕಳ ಅಥವಾ ಅಂಕೋಲಾದ ವ್ಯಕ್ತಿಯನ್ನು ಕುಮಟಾದಲ್ಲಿ ಕ್ವಾರಂಟೈನ್ ಮಾಡುವ ಅವಶ್ಯಕತೆ ಏನಿದೆ? ಸ್ಥಳೀಯವಾಗಿ ಯಾವುದೇ ಜನಪ್ರತಿನಿಧಿಗಾಗಲಿ, ಗ್ರಾಮ ಪಂಚಾಯಿತಿ, ಗ್ರಾಮಸ್ಥರಿಗಾಗಲಿ ಯಾವುದೇ ಮಾಹಿತಿ ನೀಡದೇ ರಾತ್ರೋರಾತ್ರಿ ರೆಸಾರ್ಟ್​ಗೆ ತಂದು ಬಿಟ್ಟಿದ್ದು ಸರಿಯಲ್ಲ. ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಕ್ವಾರಂಟೈನ್​ಗೆ ಒಳಗಾಗಿರುವವರು ಬೆಳಗ್ಗೆ ರೆಸಾರ್ಟ್ ಹೊರಗೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಆಗಮಿಸಿದ ಸಿಪಿಐ ಪರಮೇಶ್ವರ ಗುನಗಾ ಮಾತನಾಡಿ, ದುಬೈ ಸೇರಿ ವಿವಿದೆಡೆಯಿಂದ ನೂರಾರು ಗಣ್ಯರು ಊರಿಗೆ ಮರಳುತ್ತಿದ್ದಾರೆ. ಅಂತವರಿಗೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳ ಆಹಾರ ಇತರ ವ್ಯವಸ್ಥೆ ಸರಿಹೊಂದದೇ ಇರಬಹುದು. ಅಂಥವರಿಗೆ ಹೋಟೆಲ್, ರೆಸಾರ್ಟ್​ಗಳಲ್ಲಿ ಕ್ವಾರಂಟೈನ್​ಗೆ ಸರ್ಕಾರವೇ ಅವಕಾಶ ಕಲ್ಪಿಸಿದೆ. ಇಲ್ಲಿನ ಓಂಬೋಧಿ ರೆಸಾರ್ಟ್​ನಲ್ಲಿ ಈಗಾಗಲೇ ಇರುವ ಇಬ್ಬರನ್ನು ಹೊರತುಪಡಿಸಿ ಬೇರೆಯವರನ್ನು ತಂದಿಡುವುದಿಲ್ಲ. ಕ್ವಾರಂಟೈನ್​ನಲ್ಲಿರುವವರು ರೆಸಾರ್ಟ್ ಆಚೆ ಬಾರದಂತೆ ಪೊಲೀಸ್ ಇಲಾಖೆ ಒಬ್ಬ ಸಿಬ್ಬಂದಿಯನ್ನು ಕಾವಲಿಟ್ಟು ಜವಾಬ್ದಾರಿ ವಹಿಸುತ್ತದೆ ಎಂದು ಹೇಳಿ ಪ್ರತಿಭಟನಾನಿರತರ ಮನವೊಲಿಸಿದರು. ಜಿಪಂ ಸದಸ್ಯ ರತ್ನಾಕರ ನಾಯ್ಕ, ವಕೀಲ ಆರ್.ಜಿ. ನಾಯ್ಕ, ತಾಪಂ ಸದಸ್ಯ ಜಗನ್ನಾಥ ನಾಯ್ಕ ಇತರರು ಇದ್ದರು.

    ಸಾಂಸ್ಥಿಕ ಕ್ವಾರಂಟೈನ್
    ದುಬೈನಿಂದ ಕುಮಟಾಕ್ಕೆ ಸೋಮವಾರ ಹಾಗೂ ಮಂಗಳವಾರ ಒಟ್ಟು 40 ಮಂದಿ ಮಹಿಳೆಯರು ಬಂದಿದ್ದಾರೆ. ಇವರೆಲ್ಲರೂ ತಾಲೂಕಿನ ನಿವಾಸಿಗಳೇ ಆಗಿದ್ದು ಊರಿಗೆ ಮರಳಿದ ನಂತರ ಕ್ವಾರಂಟೈನ್ ಆಗಲು ಹೋಟೆಲ್, ವಸತಿ ಗೃಹಗಳಿಗೆ ಬೇಡಿಕೆ ಇಟ್ಟಿದ್ದರು. ಆದರೆ, ಲಭ್ಯತೆ ಕೊರತೆಯಿಂದ ಅವರನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts