More

    ಹೊಂಡಗಳ ರಹದಾರಿ ಕುಮಟಾ-ಶಿರಸಿ ಹೆದ್ದಾರಿ

    ಕುಮಟಾ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚಿದ್ದು, ಇಲ್ಲಿ ವಾಹನ ಚಾಲನೆ ಮಾಡುವುದು ತೀರಾ ಅಪಾಯಕಾರಿಯಾಗಿದೆ.

    ಕುಮಟಾದಿಂದ ಶಿರಸಿಯತ್ತ ಸಾಗುವಾಗ ಕತಗಾಲ ಅಂಚೆ ಕಚೇರಿಯಿಂದ ಮುಂದೆ ಕಡಿದಾದ ತಿರುವುಗಳಲ್ಲಿ ಭಾರಿ ಗಾತ್ರದ ಹೊಂಡಗಳ ಸರಣಿಯೇ ಕಾಣುತ್ತದೆ. ಬಳಿಕ ಶಿರಸಿ ತಾಲೂಕು ವ್ಯಾಪ್ತಿಯಲ್ಲೇ ಹೆಚ್ಚು ರಸ್ತೆ ಹಾಳಾಗಿದ್ದು ದೇವಿಮನೆ ಘಟ್ಟ, ಬಂಡಲ ಘಟ್ಟ, ಸಂಪಖಂಡ, ಗದ್ದೆಮನೆ, ಜಾನ್ಮನೆ, ಹೀಪನಳ್ಳಿ ಮುಂತಾದ ಕಡೆಗಳಲ್ಲಿ ಅಪಾಯಕಾರಿ ಹೊಂಡಗಳನ್ನು ಕಾಣಬಹುದಾಗಿದೆ.

    ಮಳೆ ಸುರಿಯುವಾಗಲಂತೂ ಹೊಂಡದ ಆಳದ ಅರಿವಾಗದೇ ಚಾಲಕರು ಕಕ್ಕಾಬಿಕ್ಕಿಯಾಗುತ್ತಾರೆ. ಹೊಂಡಕ್ಕೆ ಮಣ್ಣು ತುಂಬಿ ರಸ್ತೆ ನಿರ್ವಹಣೆಯೂ ಮಾಡದಿರುವುದು ವ್ಯವಸ್ಥೆಯ ನಿಷ್ಕಾಳಜಿಗೆ ಸಾಕ್ಷಿಯಾಗಿದೆ.

    ವರ್ಷದ ಹಿಂದೆಯೇ ಕುಮಟಾ-ಶಿರಸಿ ರಾಜ್ಯ ಹೆದ್ದಾರಿ 69 ಅನ್ನು ಮೇಲ್ದರ್ಜೆಗೇರಿಸಿ ರಾಷ್ಟಿ್ರಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ಜಾರಿಗೆ ತರಲಾಗಿದೆ. ಸಾಗರಮಾಲಾ ಯೋಜನೆಯಡಿ ಹೆದ್ದಾರಿ ಉನ್ನತೀಕರಣಕ್ಕೆ ಪರಿಸರ ಇಲಾಖೆಯೇ ಅಡ್ಡಿಮಾಡಿತ್ತು. ಇದೀಗ ಕೆಲ ದಿನದ ಹಿಂದೆಯಷ್ಟೇ ಹೆದ್ದಾರಿ ವಿಸ್ತರಣೆ ವಿಚಾರದಲ್ಲಿ ಷರತ್ತುಗಳೊಂದಿಗೆ ಅಭಿವೃದ್ಧಿಗೆ ಅನುಮತಿ ನೀಡಿದೆ ಎಂಬ ಮಾಹಿತಿ ಇದೆ.

    ಕಳೆದ ವರ್ಷದ ಮಳೆಗಾಲದಲ್ಲಿ ಕುಮಟಾ- ಶಿರಸಿ ರಸ್ತೆ ತೀರಾ ಹಾಳಾಗಿ ಹತ್ತಾರು ಅಪಘಾತಗಳು ಸಂಭವಿಸಿದ್ದವು. ಸಮಸ್ಯೆ ಬಗೆಹರಿಸಲು ಸಾರ್ವಜನಿಕರು ಕತಗಾಲದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ದಿನಕರ ಶೆಟ್ಟಿ ಹಾಗೂ ಶಿರಸಿ ಶಾಸಕರು ಮುತುವರ್ಜಿ ವಹಿಸಿ ರಸ್ತೆ ದುರಸ್ತಿ ಮಾಡಿಸಿದ್ದರು. ಈಗ ಪುನಃ ರಸ್ತೆಗೆ ಅದೇ ಸ್ಥಿತಿ ಬಂದಿದೆ.

    ಹದಗೆಟ್ಟ ದೇವಿಮನೆ ಘಟ್ಟದ ರಸ್ತೆ: ಸಾಮಾನ್ಯವಾಗಿ ದೇವಿಮನೆ ಘಟ್ಟದ ಭಾಗದಲ್ಲಿ ಮಳೆಯ ಪ್ರಮಾಣ ಜಾಸ್ತಿ. ಜತೆಗೆ ಹಗಲಿನಲ್ಲೂ ವಿಪರೀತ ಮಂಜು ಕವಿದು ರಸ್ತೆ ಕಾಣದಂತಾಗುತ್ತದೆ. ಇದೇ ಕಾರಣಕ್ಕೆ ಹಲವು ಅಪಘಾತಗಳಾಗುತ್ತವೆ. ಮಳೆಗಾಲದ ಮಧ್ಯದಲ್ಲೇ ರಸ್ತೆ ತೀರಾ ಕೆಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

    ಶಿರಸಿ ವ್ಯಾಪ್ತಿಯಲ್ಲೇ ಈ ರಸ್ತೆಯ ಹೆಚ್ಚಿನ ಪ್ರಮಾಣ ಹೊಂಡವಾಗಿದೆ. ಕುಮಟಾ ವ್ಯಾಪ್ತಿಯ ಕತಗಾಲ ಬಳಿ ಒಂದು ಕಡೆ ಮಾತ್ರ ಹಾಳಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ರಸ್ತೆ ಎಲ್ಲೆಲ್ಲಿ ಹಾಳಾಗಿದೆಯೋ ಅಲ್ಲೆಲ್ಲ ಸರಿಪಡಿಸಲಾಗುವುದು.

    | ದಿನಕರ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts