More

    ಹೈಕೋರ್ಟ್ ತೀರ್ಪಿನ ನಂತರವೇ ನಿರ್ಧಾರ

    ಮುಳಬಾಗಿಲು: ಶುಲ್ಕ ಪಾವತಿ ಬಗ್ಗೆ ಖಾಸಗಿ ಶಾಲೆಗಳು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ತೀರ್ಪು ಹೊರಬಂದ ನಂತರ ಈ ಸರ್ಕಾರದ ಈ ಬಗ್ಗೆ ನಿರ್ಧಾರ ಪ್ರಕಟಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

    ಮುಳಬಾಗಿಲು ನಗರದ ಡಿವಿಜಿ ಶಾಲೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಬಲವಂತದಿಂದ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚಿಸಿದರು. ಕರೊನಾ 2ನೇ ಅಲೆ ದೇಶದಲ್ಲಿ ಆರಂಭವಾಗಿದ್ದರೂ ಹಿರಿಯ ಪ್ರಾಥಮಿಕ ಮತ್ತು ಪಿಯು ತರಗತಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಶಾಲೆಗಳಿಗೆ ವಿದ್ಯಾರ್ಥಿಗಳು ಬರುವುದರಿಂದ ಅವರಿಗೆ ಕರೊನಾ ಜಾಗೃತಿ ಕ್ರಮಗಳ ಅನುಷ್ಠಾನದ ಅರಿವು ಮೂಡಿಸಲಾಗುವುದು ಎಂದರು.

    ರಾಜ್ಯದಲ್ಲಿ ಒಂದರಿಂದ 5ನೇ ತರಗತಿವರೆಗೂ ಶಾಲೆಗಳು ಸದ್ಯಕ್ಕೆ ತೆರೆಯುವುದಿಲ್ಲ. ಶಾಲೆಗಳು ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಡಿಡಿಪಿಐಗೆ ನೀಡಲಾಗಿದೆ ಎಂದರು. ಸರ್ಕಾರದ ನಿರ್ಧಾರ 6ನೇ ತರಗತಿಯಿಂದ 12ನೇ ತರಗತಿವರೆಗೂ ಮಾತ್ರ ಶಾಲೆ ತೆರೆಯಬೇಕೆಂದು ಆಗಿತ್ತು. ಆರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿ ತೆರೆಯಲಾಗಿತ್ತು. ಅದನ್ನು ಎಲ್ಲ ಶಾಲಾ-ಕಾಲೇಜುಗಳು ಪಾಲಿಸಿದ್ದು ಸರ್ಕಾರದ ನಿಯಮ ನಿಬಂಧನೆಗಳನ್ನು ಒಂದು ವೇಳೆ ಉಲ್ಲಂಘಿಸಿದರೆ ಅಂತಹ ವಿದ್ಯಾಸಂಸ್ಥೆಗಳ ಮೇಲೆ ನಿರ್ದಾಕ್ಷ್ಯಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಮತ್ತೆ ಶಾಲೆಗೆ ರಜೆ ಬೇಕಾ?: ಎಸ್.ಸುರೇಶ್‌ಕುಮಾರ್ ಗುರುವಾರ ಬೆಳಗ್ಗೆ ಮುಳಬಾಗಿಲು ನಗರದ ಕುಂಬಾರಪಾಳ್ಯ ಡಾ.ಡಿ.ವಿ.ಗುಂಡಪ್ಪ ಸರ್ಕಾರಿ ಕನ್ನಡ ಹಿರಿಯ ಬಾಲಕ ಬಾಲಕಿಯರ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಗೆ ರಜೆ ಘೋಷಣೆ ಮಾಡಬೇಕೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಎಲ್ಲ ವಿದ್ಯಾರ್ಥಿಗಳೂ ಬೇಡ. ಆನ್‌ಲೈನ್ ತರಗತಿ ನಮಗೆ ಸರಿಹೊಂದುವುದಿಲ್ಲ, ಪಾಠ ಪ್ರವಚನಗಳಲ್ಲಿ ಹಿಂದುಳಿಯಬೇಕಾಗುತ್ತದೆ. ಶೈಕ್ಷಣಿಕ ಚಟುವಟಿಕೆ ಮರೆತು ಹೋಗುತ್ತವೆ ಎಂದರು.

    ಎಸ್‌ಎಂಎಸ್ ಪಾಲಿಸಿ ಕರೊನಾ ಓಡಿಸಿ: ಪ್ರತಿ ವಿದ್ಯಾರ್ಥಿ ಎಸ್‌ಎಂಎಸ್ (ಸ್ಯಾನಿಟೈಸರ್, ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್) ಪಾಲಿಸಬೇಕು, ಇದರಿಂದ ಕರೊನಾ ತಡೆಗಟ್ಟಬಹುದು, ಈ ಬಗ್ಗೆ ವಿದ್ಯಾರ್ಥಿಗಳು ಪಾಲಕರು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಇದರಿಂದ ಕರೊನಾ ತಡೆಗಟ್ಟಬಹುದೇ ವಿನಾ ಲಾಕ್‌ಡೌನ್ ಅಥವಾ ಶಾಲೆ ಮುಚ್ಚುವುದರಿಂದ ತಡೆಗಟ್ಟಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಬರಹ ನೋಡಿ ಖುಷಿ ಪಟ್ಟರು: ಬಾಲಕ, ಬಾಲಕಿಯರ ಶಾಲಾ ಕೊಠಡಿಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಮಂಕುತಿಮ್ಮನ ಕಗ್ಗವನ್ನು ವಾಚಿಸುವ ಮೂಲಕ ಸಚಿವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಗೋಡೆಗಳಿಗೆ ಅಂಟಿಸಿರುವ ಬರಹಗಳನ್ನು ಕಂಡು ಸಚಿವರು ಸಂತೋಷ ವ್ಯಕ್ತಪಡಿಸಿದರು. ಶಾಸಕ ಎಚ್.ನಾಗೇಶ್, ಡಿ.ಸಿ. ಆರ್.ಸೆಲ್ವಮಣಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಡಿಡಿಪಿಐ ಕೃಷ್ಣಮೂರ್ತಿ, ಕೋಲಾರ ಬಿ.ಇ.ಒ. ಕೆ.ಎಸ್.ನಾಗರಾಜಗೌಡ, ಮುಳಬಾಗಿಲು ಪ್ರಭಾರ ಬಿಇಒ ವಿ.ಆನಂದ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts