More

    ಹೇಮೆ ನದಿ ಪಾತ್ರದ ಗ್ರಾಮಕ್ಕೆ ಆರ್‌ಸಿ, ಡಿಸಿ ಭೇಟಿ : ಸ್ಥಳ ಪರಿಶೀಲನೆ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹ

    ಮಂಡ್ಯ : ಹೇಮಾವತಿ ನದಿ ಪಾತ್ರದಲ್ಲಿರುವ ಗ್ರಾಮಗಳ ಜನತೆ ಸುರಕ್ಷಿತವಾಗಿರಲು ನೆರವು ನೀಡುವುದು ನಮ್ಮ ಕರ್ತವ್ಯ ಎಂದು ಪ್ರಾದೇಶಿಕ ಆಯುಕ್ತ ಪ್ರಕಾಶ್ ತಿಳಿಸಿದರು.


    ಹೇಮಾವತಿ ನದಿ ಪಾತ್ರದಲ್ಲಿ ಪ್ರವಾಹ ಎದುರಾದರೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಿಕ್ಕೇರಿ ಸಮೀಪದ ಚಿಕ್ಕಮಂದಗೆರೆ, ಬೇವಿನಹಳ್ಳಿಕೊಪ್ಪಲು ಗ್ರಾಮಗಳಿಗೆ ಅಧಿಕಾರಿಗಳ ತಂಡದೊಂದಿಗೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಅವರು ಮಾತನಾಡಿದರು.
    ಹೇಮಾವತಿ ನದಿ ಪಾತ್ರದಲ್ಲಿ ಹಲವು ಗ್ರಾಮಗಳಿವೆ. ಇದರಲ್ಲಿ ಚಿಕ್ಕಮಂದಗೆರೆ, ಬೇವಿನಹಳ್ಳಿ ಗ್ರಾಮ ಕೂಡ ಸೇರಿದೆ. ಈ ಪ್ರದೇಶ ನೆರೆಪೀಡಿತ ಹಾಗೂ ಶೀತ ಪ್ರದೇಶವಾಗಿದ್ದು, ಪ್ರವಾಹ ಸಂದರ್ಭ ಇಲ್ಲಿನ ಜನರನ್ನು ಸ್ಥಳಾಂತರಿಸಲು ಸ್ಥಳ ಪರಿವೀಕ್ಷಣೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.


    ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಹೇಮೆ ಉಕ್ಕಿ ಹರಿಯುವಾಗ ಸಹಜವಾಗಿ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ಗ್ರಾಮ ಕೂಡ ನದಿಯ ಸಮತಟ್ಟಿನಲ್ಲಿದ್ದು, ಹಲವು ಅವಘಡಗಳಿಗೆ ಕಾರಣವಾಗಿದೆ. ಮಂದಗೆರೆ ಬಳಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಬಲದಂಡೆ, ಎಡದಂಡೆ ನಾಲೆ ಇದೆ. ನಾಲೆ ರೈತರಿಗೆ ವರದಾನವಾಗಿದೆ. ಪ್ರವಾಹ ಕಾಲದಲ್ಲಿ ನದಿ ದಂಡೆಗೆ ತೆರಳುವುದು, ಜಾನುವಾರುಗಳಿಗೆ ನೀರು ಕುಡಿಸುವುದು, ಪಾತ್ರೆ, ಬಟ್ಟೆ ಶುಚಿಗೊಳಿಸಲು ತೆರಳಬಾರದು ಎಂದು ಸಲಹೆ ನೀಡಿದರು.


    ಗ್ರಾಮ ಮುಖಂಡ ಮಂಜುನಾಥೇಗೌಡ ಮಾತನಾಡಿ, ಹೇಮಾವತಿ ಎಡ, ಬಲದಂಡೆ ನಾಲೆ ಉಪವಿಭಾಗ ನಂ.5ರಲ್ಲಿರುವ ನಾಲುವೆಯಿಂದ ರೈತರಿಗೆ ಅನುಕೂಲವಾದರೂ ಗ್ರಾಮ ವರ್ಷಪೂರ್ತಿ ಶೀತ ಪ್ರದೇಶದಂತಿದೆ. 1991-92ನೇ ಸಾಲಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಬಂದು ಹೇಮೆ ಗ್ರಾಮದ ಜನರ ಬದುಕು ಕಿತ್ತುಕೊಂಡಿತು. ಅಲ್ಲಿಂದ ಈವರೆಗೆ ಪರಿಹಾರ ಎನ್ನುವುದು ಮರೀಚಿಕೆಯಾಗಿದೆ. ಎಲ್ಲ ಅಧಿಕಾರಿಗಳು ಐದಾರು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಹಲವು ಶಿಥಿಲವಾದ, ಕುಸಿದ ಮನೆಗಳಿಗೆ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಿದ್ದಾರೆ. ಇದುವರೆವಿಗೂ ಶಾಶ್ವತ ಪರಿಹಾರವನ್ನು ಎಲ್ಲ ಗ್ರಾಮಸ್ಥರಿಗೂ ನೀಡಿಲ್ಲ. ಮೊದಲು ಶಾಶ್ವತ ಪರಿಹಾರ ಕೊಡಿ ಎಂದು ಕೋರಿದರು.


    ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖ್‌ತನ್ವೀರ್ ಆಸೀಫ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ನಿಸರ್ಗಪ್ರಿಯಾ, ಹೇಮಾವತಿ ಎಡದಂಡೆ ನಾಲೆ ಉಪವಿಭಾಗ ನೀರಾವರಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಜಿ.ಎಸ್. ಮಂಜುನಾಥ್, ಇಇ ಕಿಜರ್‌ಅಹ್ಮದ್, ಸಹಾಯಕ ಕಾರ್ಯಪಾಲಕ ಕೆ.ಎಸ್.ಆನಂದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts