More

    ಹೆಬ್ಬಾರ ಹೆಗಲಿಗೆ ಉಸ್ತುವಾರಿ ನೊಗ

    ಕಾರವಾರ: ಸಂಕಷ್ಟದ ಸಮಯದಲ್ಲಿ ಶಿವರಾಮ ಹೆಬ್ಬಾರ ಅವರಿಗೆ ಜಿಲ್ಲೆಯ ಉಸ್ತುವಾರಿ ಲಭಿಸಿದೆ. ಯಶಸ್ವಿಯಾಗಿ ನಿಭಾಯಿಸುವ ದೊಡ್ಡ ಸವಾಲು ಅವರ ಮುಂದಿದೆ.

    ಕಾಂಗ್ರೆಸ್ ಶಾಸಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದ ಶಿವರಾಮ ಹೆಬ್ಬಾರ ಜಿಲ್ಲಾ ಕಾಂಗ್ರೆಸ್ ಹೈಕಮಾಂಡ್ ಆರ್.ವಿ.ದೇಶಪಾಂಡೆ ವಿರುದ್ಧ ತೊಡೆ ತಟ್ಟಿದ್ದರು. ಅವರಿಗಿಂತ ಎತ್ತರಕ್ಕೆ ಬೆಳೆಯಬೇಕು ಎಂಬ ಕನಸು ಹೊತ್ತು ಬಿಜೆಪಿ ಸೇರಿ ಉಪ ಚುನಾವಣೆ ಗೆದ್ದಿದ್ದಾರೆ.ದೇಶಪಾಂಡೆ 4 ದಶಕ ಆಳಿದ್ದ ಜಿಲ್ಲೆಯ ಉಸ್ತುವಾರಿ ಭಾರ ಈಗ ಹೆಬ್ಬಾರರಿಗೆ ದಕ್ಕಿದೆ.

    ತಮ್ಮ ಆಡಳಿತ ನೈಪುಣ್ಯವನ್ನು, ನಾಯಕತ್ವವನ್ನು ತೋರಿಸುವ ಮಹತ್ವದ ಘಟ್ಟ ಇದಾಗಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.

    ನಿರ್ಲಕ್ಷ್ಯಾಗಿದ್ದ ಜಿಲ್ಲೆ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ತಿಂಗಳು ಜಿಲ್ಲಾ ಉಸ್ತುವಾರಿಯೇ ಇರಲಿಲ್ಲ. ಆಗಸ್ಟ್ ಬಳಿಕ ಬೆಳಗಾವಿಯ ಶಶಿಕಲಾ ಜೊಲ್ಲೆ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದರೂ ಅವರು ನೆಪ ಮಾತ್ರಕ್ಕೆ ಉಸ್ತುವಾರಿ ಸಚಿವರಾಗಿದ್ದರು. ಶಿಷ್ಟಾಚಾರದಂತೆ ಆಗೊಮ್ಮೆ, ಈಗೊಮ್ಮೆ ಬಂದು ಅಧಿಕಾರಿಗಳ ಸಭೆ ನಡೆಸಿ ಹೋದರೇ ಹೊರತು, ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಗೆ ಬಂದು ಜನರ ಜತೆ ನಿಂತುಕೊಳ್ಳಲೇ ಇಲ್ಲ. ಸಿಎಂ ಮತ್ತು ಮಂತ್ರಿ ಮಂಡಲದಲ್ಲಿ ಜಿಲ್ಲೆಯ ಧ್ವನಿಯಾಗಲೇ ಇಲ್ಲ. ಇದರಿಂದ ಜಿಲ್ಲೆಯ ಜನರಿಗೆ, ಬಿಜೆಪಿ ಕಾರ್ಯಕರ್ತರಿಗೆ ಬೇಸರವಿತ್ತು. ಜಿಲ್ಲೆಯವರಿಗೆ ಉಸ್ತುವಾರಿ ಯಾವಾಗ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಈಗ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

    ಆಗಬೇಕಿದೆ ಹತ್ತಾರು ಕಾರ್ಯ: ಜನರಿಗೆ ತೊಂದರೆಯಾಗದಂತೆ, ಕರೊನಾ ಸಂಖ್ಯೆ ಹೆಚ್ಚಾಗದಂತೆ ಲಾಕ್​ಡೌನ್ ಯಶಸ್ವಿಯಾಗಿ ಜಾರಿ ಮಾಡಿ, ಜನರ ಆತಂಕ ದೂರ ಮಾಡುವ ಮಹತ್ತರ ಜವಾಬ್ದಾರಿ ಇದೆ.

    ನೆರೆಯಿಂದ ಸಂಕಷ್ಟಕ್ಕೊಳಗಾದವರು ಚೇತರಿಸಿಕೊಳ್ಳುವ ಮೊದಲೇ ಕರೊನಾ ಆಘಾತ ಅಪ್ಪಳಿಸಿದೆ. ಪ್ರವಾಹ ಪೀಡಿತರಿಗೆ ಬದುಕು ಕಟ್ಟಿಕೊಳ್ಳಲು ಮಳೆಗಾಲ ಪೂರ್ವದಲ್ಲಿ ನೆರವು ನೀಡಬೇಕಿದೆ.

    ಕರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಬಜೆಟ್ ಮರು ಹೊಂದಾಣಿಕೆ ಯೋಜನೆಯಲ್ಲಿದೆ. ಜಿಲ್ಲೆಗೆ ಘೊಷಣೆಯಾದ ಯೋಜನೆ, ಹಣವನ್ನು ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಬೇಕಿದೆ.

    ಲಾಕ್​ಡೌನ್​ನಿಂದ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ನಿಂತು ಹೋಗಿವೆ. ಮಳೆಗಾಲ ಹತ್ತಿರದಲ್ಲಿದೆ. ತುರ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.

    ಒಂದೆಡೆ ಡೆಂಘೆ ಆತಂಕ, ಇನ್ನೊಂದೆಡೆ ಮಂಗನ ಕಾಯಿಲೆ ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳು ಬಾಧಿಸುತ್ತಿದ್ದು. ಅದೆಲ್ಲದಕ್ಕೆ ತುರ್ತು ಕ್ರಮ ವಹಿಸಬೇಕಿದೆ.

    ಸವಾಲುಗಳು: ಜಿಲ್ಲೆಯ ಭಟ್ಕಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಡೀ ಜಿಲ್ಲೆಯನ್ನು ಏ.30 ರವರೆಗೂ ಸಂಪೂರ್ಣ ಲಾಕ್​ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಶಿವರಾಮ ಹೆಬ್ಬಾರ ಅವರ ಮೇಲಿದೆ.

    ಹಲವು ಬಡವರು, ಕೃಷಿ, ಮೀನುಗಾರಿಕೆ, ಸಣ್ಣ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದ ಕಾರ್ವಿುಕರು ಆಹಾರ, ಔಷಧದಂಥ ಜೀವನಾವಶ್ಯಕ ವಸ್ತುಗಳಿಗೆ ಪರದಾಡುತ್ತಿದ್ದಾರೆ.

    ರೈತರು ಬೆಳೆದ ತೋಟಗಾರಿಕೆ ಬೆಳೆಗಳಿಗೆ ಬೆಲೆಯಿಲ್ಲ. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ. ಸರ್ಕಾರದ ಬಳಿ ಹಣವಿಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲೆಯ ಜನರಿಗೆ ನೆರವು ನೀಡಿ ಮುನ್ನಡೆಸುವುದು ದೊಡ್ಡ ಸವಾಲಾಗಿದೆ.

    ನನ್ನ ಮೇಲೆ ನಂಬಿಕೆ ಇಟ್ಟು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ. ಜಿಲ್ಲೆಗೆ ಆಗಮಿಸಿದ್ದು, ಏ.11 ರಂದು ಕಾರವಾರಕ್ಕೆ ತೆರಳಿ ಅಧಿಕಾರಿಗಳ ಸಭೆ ನಡೆಸಿ, ಪರಿಸ್ಥಿತಿಯನ್ನು ಅರಿತುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇನೆ. | ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts