More

    ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

    ಮದ್ದೂರು: ಮಂಡ್ಯದಲ್ಲಿ ರೈತರು ನಡೆಸುತ್ತಿದ್ದ ಧರಣಿಗೆ ಅಡ್ಡಿಪಡಿಸಿ, ಪೆಂಡಾಲ್ ತೆರವುಗೊಳಿಸಿದ್ದ ಪೊಲೀಸರ ಕ್ರಮ ಖಂಡಿಸಿ ಪಟ್ಟಣದ ಕೊಪ್ಪ ಸರ್ಕಲ್ ಬಳಿ ಗುರುವಾರ ಮಧ್ಯಾಹ್ನ ರೈತಸಂಘದ ಕಾರ್ಯಕರ್ತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮೈಸೂರು- ಬೆಂಗಳೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಘಟನೆ ಸಂಬಂಧ ಜಿಲ್ಲಾಡಳಿತ ಹಾಗೂ ಸರ್ಕಾರ ಈ ಕೂಡಲೇ ರೈತರಲ್ಲಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ರೈತಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ದೇಶದ ಬೆನ್ನೆಲುಬಾದ ರೈತರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅಸಡ್ಡೆ ಮಿತಿ ಮೀರಿದೆ, ಮಂಡ್ಯಕ್ಕೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡುತ್ತಾರೆ ಎಂಬ ಕಾರಣಕ್ಕೆ ರೈತರು ನಡೆಸುತ್ತಿದ್ದ ಧರಣಿ ನಿರತ ರೈತರನ್ನು ಬಂಧಿಸಿ, ಪೆಂಡಾಲ್ ಅನ್ನು ತೆರವು ಗೊಳಿಸಿದ್ದಲ್ಲದೆ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಗಳನ್ನು ಬಿಸಾಡಿ ಅಗೌರವ ತೋರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಈ ಘಟನೆಗೆ ಕಾರಣರಾದ ಡಿವೈಎಸ್‌ಪಿ ಶಿವಮೂರ್ತಿ ಎಂಬುವರನ್ನು ಕೂಡಲೇ ಅಮಾನತುಗೊಳಿಸಬೇಕು ಹಾಗೂ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ರೈತರ ಬಳಿ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಎಂದು ಶುಕ್ರವಾರ ಬೆಂಗಳೂರು-ಮೈಸೂರು ಹೆದ್ದಾರಿಗೆ ಜಾನುವಾರುಗಳನ್ನು ಕರೆತಂದು ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಹೆದ್ದಾರಿ ತಡೆಯಿಂದ ಸುಮಾರು 45 ನಿಮಿಷ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು,. ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಉಮೇಶ್, ಬೋರಾಪುರ ಶಂಕರೇಗೌಡ, ಸೊ.ಶಿ. ಪ್ರಕಾಶ್, ರಾಜ್ಯ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಉಮಾಶಂಕರ್, ಮುಖಂಡರಾದ ವಳೆಗೆರೆಹಳ್ಳಿ ಶಂಕರೇಗೌಡ, ಮಮತಾ ಶಂಕರೇಗೌಡ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts