More

    ಹೆದ್ದಾರಿ ವಾಹನ ಸಂಚಾರ ತಡೆದು ಪ್ರತಿಭಟನೆ

    ಪಾಂಡವಪುರ: ಕಬ್ಬಿನ ಬೆಲೆ ನಿಗದಿ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಡ್ಯದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತರನ್ನು ಪೊಲೀಸರು ಬಂಧಿಸಿರುವ ಕ್ರಮ ಖಂಡಿಸಿ ರೈತಸಂಘ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

    ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ 50 ದಿನಗಳಿಂದ ಕಬ್ಬಿನ ಬೆಲೆ ನಿಗದಿಗಾಗಿ ರೈತರು ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು ರೈತರ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರ ಕಲ್ಪಿಸಲು ವಿಫಲರಾಗಿದ್ದಾರೆ. ರೈತರ ಭಾವನೆಗಳು ಮತ್ತು ಹೋರಾಟಕ್ಕೆ ಬಿಜೆಪಿ ಸರ್ಕಾರ ಬೆಲೆ ಕೊಡದೆ, ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ರೈತ ವಿರೋಧಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

    ರೈತ ಮುಖಂಡ ಎಣ್ಣೆಹೊಳೆಕೊಪ್ಪಲು ವೈ.ಜಿ. ಮಂಜುನಾಥ್ ಮಾತನಾಡಿ, ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ತದ್ರೂಪಿ ಗೊಂಬೆಗೆ ರೈತರ ರಕ್ತ ಸುರಿಸಿ ‘ರಕ್ತ ಬೇಕಾದರೂ ಕೊಟ್ಟೇವೂ ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ’ ಎಂಬ ಸಂದೇಶ ರವಾನಿಸಲು ಮುಂದಾಗಿದ್ದೆವು. ಆದರೆ, ಪೊಲೀಸರು ಪ್ರತಿಭಟನಾನಿರತ ರೈತರನ್ನು ಬಂಧಿಸುವ ಮೂಲಕ ದಮನ ನೀತಿ ಅನುಸರಿಸಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಷಾ ಅವರು ಡಿ.30ಕ್ಕೆ ಮಂಡ್ಯಕ್ಕೆ ಆಗಮಿಸುವ ವೇಳೆ ರೈತರ ಶಕ್ತಿ ಏನೂ ಎಂದು ತೋರಿಸುವ ಜತೆಗೆ ಕಪ್ಪು ಬಾವುಟ ಪ್ರದರ್ಶಿಸಿ ಸರ್ಕಾರದ ನಡೆಯನ್ನು ಖಂಡಿಸಲಾಗುವುದು ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಕ್ಯಾತನಹಳ್ಳಿ ವಿಶ್ವನಾಥ್, ಚಂದ್ರಣ್ಣ, ಡಾಮಡಹಳ್ಳಿ ಜೈರಾಮ್, ಶ್ಯಾದನಹಳ್ಳಿ ಚೆಲುವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts