More

    ಹೆದ್ದಾರಿ ಮೇಲೆ ಉರುಳಿದ ಬಂಡೆ

    ಹೊನ್ನಾವರ: ಚತುಷ್ಪಥ ಕಾಮಗಾರಿಗಾಗಿ ಗುಡ್ಡ ಕೊರೆದಿದ್ದರಿಂದ ಕಲ್ಲುಬಂಡೆಯೊಂದು ಹೆದ್ದಾರಿಯ ಮೇಲೆ ಉರುಳಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಗುರುವಾರ ತಾಲೂಕಿನ ಕೆಳಗಿನೂರು ಗ್ರಾಮದ ಹೊಸಪಟ್ಟಣ ಕ್ರಾಸ್​ನಲ್ಲಿ ಸಂಭವಿಸಿದೆ.

    ಹೊಸಪಟ್ಟಣದ ಗಿರೀಶ ಬುಧವಂತ ನಾಯ್ಕ ಹಾಗೂ ಕೃಷ್ಣ ಶಿವಪ್ಪ ನಾಯ್ಕ ಎಂದು ಅಪಘಾತದಲ್ಲಿ ಗಾಯಗೊಂಡವರಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ಬೈಕ್​ನಲ್ಲಿ ತೆರಳುತ್ತಿದ್ದಾಗ ಹೊಸಪಟ್ಟಣ ತಿರುವಿನ ಸಮೀಪ ಈ ಅವಘಡ ನಡೆದಿದೆ. ರಾಷ್ಟಿಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಐಆರ್​ಬಿ ಕಂಪನಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆದಿರುವುದರಿಂದ ಗುಡ್ಡದಿಂದ ಉರುಳಿ ಬಂದ ಬೃಹತ್ ಬಂಡೆಗಲ್ಲು ಬೈಕ್​ಗೆ ಅಪ್ಪಳಿಸಿದ ಪರಿಣಾಮ ಬೈಕ್ ಸವಾರ ಗಿರೀಶ ನಾಯ್ಕ ಅವರ ಕೈ, ಕಾಲುಗಳಿಗೆ ಗಾಯವಾಗಿದೆ. ಬೈಕ್ ಸಂಪೂರ್ಣ ಜಖಂಗೊಂಡಿದೆ.

    ಘಟನಾ ಸ್ಥಳಕ್ಕೆ ಹೊನ್ನಾವರ ತಹಸೀಲ್ದಾರ್ ವಿವೇಕ ಶೇಣ್ವಿ, ಸಿಪಿಐ ವಸಂತ ಆಚಾರಿ, ಮಂಕಿ ಪಿಎಸ್​ಐ. ಪರಮಾನಂದ ಕೊಣ್ಣೂರ್ ಸ್ಥಳ ಪರಿಶೀಲಿಸಿದರು.

    ಗುಡ್ಡ ಕುಸಿತದ ಆತಂಕ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ಐಆರ್​ಬಿ ಕಂಪನಿಯವರು ಗುಡ್ಡವನ್ನು ಬೃಹತ್ ಯಂತ್ರಗಳನ್ನು ಬಳಸಿ ಕೊರೆದಿದ್ದರು. ಗುಡ್ಡದಲ್ಲಿನ ಸಡಿಲ ಮಣ್ಣು ಮಳೆಗಾಲದಲ್ಲಿ ಕುಸಿಯದಂತೆ ತಡೆಯುವುದಕ್ಕೆ ಅನೇಕ ಕಡೆ ಕಬ್ಬಿಣದ ಜಾಲರಿ ಹೊದೆಸಿ ಕಾಂಕ್ರೀಟ್​ನಿಂದ ಮುಚ್ಚುವ ಮೂಲಕ ಗುಡ್ಡ ಕುಸಿಯದಂತೆ ತಡೆಯೊಡ್ಡಲಾಗಿತ್ತು. ಆದರೆ, ಕಳೆದೆರಡು ವರ್ಷದಲ್ಲಿ ಅನೇಕ ಕಡೆ ಕಾಂಕ್ರೀಟ್ ಸಮೇತ ಗುಡ್ಡ ಕುಸಿಯುತ್ತಿದೆ. ಕೆಳಗಿನೂರಿನ ನಾಜಗಾರ ಕ್ರಾಸ್​ನಿಂದ ಚರ್ಚ್​ವರೆಗೆ ಸುಮಾರು 500 ಮೀಟರ್ ಉದ್ದಕ್ಕೂ ಬೃಹತ್ ಬಂಡೆಗಳಿಂದ ಆವೃತ್ತವಾದ ಗುಡ್ಡವಿದೆ. ಗುಡ್ಡದಲ್ಲಿ ಸಡಿಲವಾದ ಜೇಡಿ ಮಣ್ಣಿದ್ದು, ಗುಡ್ಡದ ಬುಡದಲ್ಲಿ ಸದಾ ನೀರು ಒಸರುತ್ತಿರುವುದರಿಂದ ಮೇಲಿರುವ ಬಂಡೆಗಳು ಉರುಳುವ ಆತಂಕ ಜನರನ್ನು ಕಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts