More

    ಹೆಜ್ಜೇನು ದಾಳಿಗೆ 40ಕ್ಕೂ ಹೆಚ್ಚು ಜನರಿಗೆ ಗಾಯ

    ಮುಂಡಗೋಡ: ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕಿನ ಟಿಬೆಟಿಯನ್ ಕ್ಯಾಂಪ್​ನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪದಾಧಿಕಾರಿಗಳ ಎರಡು ದಿನಗಳ ಅಧ್ಯಯನ ಶಿಬಿರ ಉದ್ಘಾಟನೆ ಕಾರ್ಯಕ್ರಮಕ್ಕೂ ಮುನ್ನ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ 40ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.

    ತಾಲೂಕಿನ ಟಿಬೆಟಿಯನ್ ಲಾಮಾ ಕ್ಯಾಂಪ್ ನಂ. 1ರಲ್ಲಿರುವ ಗಾಂದೇನ್ ಜಾಗ್ಸೆ ವಿಶ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳಿಗೆ ಎರಡು ದಿನಗಳ ಕಾಲ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರಕ್ಕೆ ರಾಜ್ಯದ ಮೂವತ್ತು ಜಿಲ್ಲೆಗಳಿಂದ ಮೂನ್ನೂರಕ್ಕೂ ಅಧಿಕ ಪದಾಧಿಕಾರಿಗಳು ಆಗಮಿಸಿದ್ದರು. ಬೆಳಗಿನ ಉಪಹಾರ ಸೇವಿಸಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡು ಶಿಬಿರದಲ್ಲಿ ಭಾಗವಹಿಸುವ ಸಮಯಕ್ಕೆ ಹೆಜ್ಜೇನು ನೊಣಗಳು ದಾಳಿ ನಡೆಸಿವೆ.

    40ಕ್ಕೂ ಅಧಿಕ ಜನರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ್ದು, ಓರ್ವನಿಗೆ ಹೆಚ್ಚಿನ ಪ್ರಮಾಣದಲ್ಲಿ ನೊಣಗಳು ಕಚ್ಚಿದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಇನ್ನುಳಿದ ಜನರಿಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗಾಂದೇನ್ ಜಾಂಗ್ಸೆ ವಿಶ್ವವಿದ್ಯಾಲಯದ ಕಟ್ಟಡ ಒಂದು ಬದಿಯಲ್ಲಿ ಹಲವಾರು ಹೆಜ್ಜೇನುಗಳು ಗೂಡು ಕಟ್ಟಿಕೊಂಡಿವೆ. ಆಕಸ್ಮಿಕವಾಗಿ ಒಂದು ಗೂಡಿನಲ್ಲಿದ್ದ ಹೆಜ್ಜೇನುಗಳು ದಾಳಿ ನಡೆಸಿವೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts