More

    ಹೆಚ್ಚಿನ ರೈತರು ವಿಮಾ ಮಾಡಿಸಿ

    ಬೀದರ್: ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪ ಸೇರಿ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಜಿಲ್ಲೆಯ ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸದ ಭಗವಂತ ಖೂಬಾ ಕರೆ ನೀಡಿದರು.
    ಯೋಜನೆ ಜನಜಾಗೃತಿ ಸಂಚಾರಿ ವಾಹನಕ್ಕೆ ಶುಕ್ರವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿ, ಯೋಜನೆ ಕುರಿತು ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಪ್ರತಿ ತಾಲೂಕಿನಲ್ಲಿ 150 ಹಳ್ಳಿಗಳು ಬರುತ್ತವೆ. ತಲಾ 75 ಹಳ್ಳಿಗಳಂತೆ ವಿಂಗಡಿಸಿ ವಾಹನಗಳು ಸಂಚರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಿಮೆ ಮಾಡಿಸಿಕೊಳ್ಳಬೇಕು ಎಂದರು.
    ಯೋಜನೆ ಕುರಿತು ಜನಜಾಗೃತಿ ಮೂಡಿಸುವ ವಾಹನಗಳು ಎಲ್ಲ ಹಳ್ಳಿಗಳಲ್ಲಿ ಸಂಚರಿಸಿದ ಬಗ್ಗೆ ಸರಿಯಾದ ಮೇಲ್ವಿಚಾರಣೆ ಮಾಡಬೇಕು. ಅಗತ್ಯವಿದ್ದರೆ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ವಾಹನಗಳು ಎರಡು ಸುತ್ತು ಸಂಚರಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ಜಂಟಿ ಕೃಷಿ ನಿರ್ದೇಶಕ ವಿದ್ಯಾನಂದ ಸಿ. ಮಾತನಾಡಿ, ಆಲಿಕಲ್ಲು, ಭೂಕುಸಿತ ಮತ್ತು ಜಲಾವೃತ ಕಾರಣಗಳಿಂದ ಬಿತ್ತನೆಯಿಂದ ಕೊಯ್ಲಿನತನಕ ಇರುವ ಬೆಳೆಗೆ ವಿಮಾ ಪರಿಹಾರ ಪಾವತಿಸಲಾಗುತ್ತದೆ. ಸಾಲ ಪಡೆಯದ ರೈತರು ವಿಮೆ ಮಾಡಿಸಿಕೊಳ್ಳಲು ಕಂಪನಿಯ ಪ್ರತಿನಿಧಿ, ಏಜೆಂಟ್, ಸಿಎಸ್ಸಿ ಸೆಂಟರ್ ಅಥವಾ ಬ್ಯಾಂಕ್​ಗಳ ಶಾಖೆಯನ್ನು ಸಂಪರ್ಕಿಸಬೇಕು. ವಿಮೆ ಮಾಡಿಸಲು 31 ಕೊನೆಯ ದಿನವಾಗಿದೆ ಎಂದರು.
    ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ.ಕಮತಗಿ, ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ, ಸಹಾಯಕ ನಿರ್ದೇಶಕ ಕೆ.ಎಂ. ಅನ್ಸಾರಿ, ಡಿಸಿಸಿ ಬ್ಯಾಂಕಿನ ಸಿಇಒ ಮಲ್ಲಿಕಾರ್ಜುನ ಮಹಾಜನ, ಜಿಎಂ ಚನ್ನಬಸಯ್ಯ ಸ್ವಾಮಿ, ಎಜಿಎಂ ಬಸವರಾಜ ಕಲ್ಯಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts