More

    ಹೃದಯಶ್ರೀಮಂತರಾಗಿದ್ದ ಸಿದ್ದೇಶ್ವರ ಶ್ರೀ  – ಶಿವಾನಂದ ಗುರೂಜಿ – ರಾಷ್ಟ್ರ ಸಂತನಿಗೆ ಗುರುನಮನ 

    ದಾವಣಗೆರೆ: ರಾಜಕಾರಣಿ, ರೈತ, ಶ್ರೀಮಂತ ಎಲ್ಲ ವರ್ಗದವರನ್ನೂ ಸಮಭಾವದಿಂದ ಕಾಣುವ, ಯಾರೇ ಕರೆದರೂ ಹೋಗುವಂತಹ ಹೃದಯಶ್ರೀಮಂತಿಕೆ ಲಿಂ. ಸಿದ್ದೇಶ್ವರ ಸ್ವಾಮೀಜಿ ಅವರಲ್ಲಿತ್ತು ಎಂದು ನಗರದ ಬಸವ ಗುರು ತಪೋವನದ ಸಂಸ್ಥಾಪಕ ಶಿವಾನಂದ ಗುರೂಜಿ ಬಣ್ಣಿಸಿದರು.
    ಇಲ್ಲಿನ ಜಯದೇವ ವೃತ್ತದಲ್ಲಿ ಮಂಗಳವಾರ, ಭಕ್ತರು ಆಯೋಜಿಸಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಲಿಂ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರಥಮ ವರ್ಷದ ಗುರುನಮನ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಮಾತನಾಡಿದರು.
    ಭೂಮಿ, ಆಕಾಶ, ಅಗ್ನಿ, ನೀರು ಮತ್ತು ಗಾಳಿ ಎಲ್ಲ ಪಂಚಮಾತೆಯರೂ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಗಳ ತುಡಿತದಂತೆ ಎಲ್ಲ ಮಾನವರೂ ಸಮಾಜಸೇವೆಯ ಗುಣ ಬೆಳೆಸಿಕೊಂಡಲ್ಲಿ ಜೀವನ ಸಾರ್ಥಕವಾಗಲಿದೆ ಎಂದರು.
    ತನುವಿನಲ್ಲಿ ನಿರ್ಮೋಹಿ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ.. ಎಂಬ ಆದಯ್ಯ ಶರಣರ ವಚನಕ್ಕೆ ಅನ್ವರ್ಥವಾಗಿ ಬದುಕಿದ್ದವರು ಸಿದ್ದೇಶ್ವರ ಸ್ವಾಮೀಜಿ. ಕೃಷ್ಣಾ ನದಿಯಲ್ಲಿ ನೀರಿಗೆ ವಿರುದ್ಧವಾಗಿ ಒಂದೂವರೆ ಕಿಮೀ ಈಜಿ ದಡ ಸೇರಿದ್ದೇ ಅವರಿಗೆ ಜೀವದ ಮೇಲಿದ್ದ ನಿರ್ಭಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.
    ಜಾಗತಿಕ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅಗಡಿ ಮಹಾಂತೇಶ್ ಮಾತನಾಡಿ, ತಮಗೆ ಬಂದ ಎಲ್ಲ ಪ್ರಶಸ್ತಿ, ಬಿರುದುಗಳನ್ನು ನಯವಾಗಿ ನಿರಾಕರಿಸುವ ಮೂಲಕ ಸಿದ್ದೇಶ್ವರ ಸ್ವಾಮೀಜಿ ಬಯಲಲ್ಲಿ ಬಯಲಾದರು. ಯಾವುದೇ ಸ್ಮಾರಕ ಮಾಡದಂತೆಯೂ ಉಯಿಲು ಬರೆದಿಟ್ಟಿದ್ದರು. ಅವರ ನೆನಪೇ ನಿತ್ಯ ನೂತನ ಎಂದು ಹೊಗಳಿದರು.
    ವೈದ್ಯ ಡಾ. ಎಸ್.ಎಂ.ಎಲಿ ಮಾತನಾಡಿ ಶಿಸ್ತಿನ ಬದುಕಿಗೆ ಹೆಸರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಪ್ರವಚನಗಳು ನಮ್ಮ ನಡುವೆ ಇವೆ. ಅವು ಅನೇಕರ ಬದುಕನ್ನೇ ಬದಲಾವಣೆ ಮಾಡಿದೆ. ಅವರ ಆಶಯದಂತೆ ನಾವು ಪ್ರಜ್ಞಾವಂತರು, ನೀತಿವಂತರು ಆಗಬೇಕಿದೆ ಎಂದರು.
    ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಮಾತನಾಡಿ ಸಿದ್ದೇಶ್ವರ ಸ್ವಾಮೀಜಿಗಳ ನಿಸ್ವಾರ್ಥ ಸೇವೆ, ಆದರ್ಶ ಬದುಕು ಹಾಗೂ ಕಾಲಪ್ರಜ್ಞೆ ಎಲ್ಲರ ಜೀವನದ ಪಾಠವಾಗಬೇಕು ಎಂದು ಹೇಳಿದರು.
    ಲಯನ್ಸ್ ಕ್ಲಬ್ ಸದಸ್ಯ ಎಚ್.ಎಂ. ಮಂಜುನಾಥಸ್ವಾಮಿ ಮಾತನಾಡಿ ಕನ್ನಡ, ಹಿಂದಿ ಸೇರಿ ವಿವಿಧ ಭಾಷೆಗಳಲ್ಲಿ ಪ್ರವಚನ ನೀಡುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ, ನಿರಾಡಂಬರ ಹಾಗೂ ನಿರಂಹಕಾರದ ವ್ಯಕ್ತಿತ್ವ ಹೊಂದಿದ್ದರು. ಅವರೊಬ್ಬ ಹೋಲಿಕೆಗೆ ಸಿಗದ ಅಪರೂಪದ ಸಂತ ಆಗಿದ್ದರು ಎಂದು ಹೇಳಿದರು.
    ಕಾವಿಧಾರಿ ಸ್ವಾಮೀಜಿಗಳ ನಡುವೆ ಶ್ವೇತ ವರ್ಷದ ಜೇಬಿಲ್ಲದ ಅಂಗಿ ಧರಿಸುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಸರಳತೆಗೆ ಸಾಕ್ಷಿಯಾಗಿದ್ದರು. ಕೈಯಲ್ಲಿ ವಾಚು ಧರಿಸದಿದ್ದರೂ ಪ್ರವಚನಕ್ಕೆ ನಿಗದಿತ ಸಮಯಕ್ಕೆ ಬರುತ್ತಿದ್ದುದು ಗಮನಾರ್ಹ ಎಂದು ಮುಖಂಡ ಜೆ. ಸೋಮನಾಥ್ ತಿಳಿಸಿದರು.
    ನಾಗಮ್ಮ ಮಾತನಾಡಿ ಪ್ರಾಣಿ-ಪಕ್ಷಿ, ಇತರೆ ಉಪಕಥೆಗಳ ಮೂಲಕ ಬದುಕಿಗೆ ಹತ್ತಿರವಾದ ಸಂದೇಶಗಳನ್ನು ಸಿದ್ದೇಶ್ವರ ಶ್ರೀಗಳು ನೀಡುತ್ತಿದ್ದುದು ಇಂದಿಗೂ ನೆನಪಿನಲ್ಲಿವೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಮೇಣದಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೀರೇಶ್ವರ ಪುಣ್ಯಾಶ್ರಮದ ಅಂಧ ವಿದ್ಯಾರ್ಥಿಗಳು ವಚನಗಾಯನ ನಡೆಸಿಕೊಟ್ಟರು.
    ಮುಖಂಡರಾದ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಅಜ್ಜಂಪುರ ಶೆಟ್ರು ವಿಜಯಕುಮಾರ್, ಮಾಜಿ ಶಾಸಕ ಟಿ.ಜಿ.ಗುರುಸಿದ್ದನಗೌಡ, ಡಾ. ರವಿಕುಮಾರ್, ಜಂಬಗಿ ರಾದೇಶ್, ಸೋಮಲಾಪುರ ಹನುಮಂತಪ್ಪ, ಏಕಬೋಟೆ ಮಂಜುನಾಥ್, ಷಡಾಕ್ಷರಿ, ಜಯಪ್ರಕಾಶ್ ಮಾಗಿ, ಶ್ರೀನಿವಾಸ ಮಹೇಂದ್ರಕರ್, ಸದಾನಂದ ಅಂಗಡಿ, ಟಿ.ಜೆ. ಸುರೇಶ್, ಎಚ್.ಎನ್. ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ಸಿದ್ದೇಶ್, ಎನ್.ಎಸ್.ರಾಜು, ವಸಂತಮ್ಮ ಬ್ಯಾಡಗಿ, ಶಕುಂತಲಾ ಐನಹಳ್ಳಿ, ಸೌಮ್ಯಾ ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts