More

    ಹುಲಿಮಂಗಲದಲ್ಲಿ ಬಾಂಗ್ಲಾ ಅಕ್ರಮ ವಲಸಿಗರ ಹಾವಳಿ?, ಚಿಂದಿ ಆಯುವ ನೆಪದಲ್ಲಿ ಗುಂಪು ಗುಂಪಾಗಿ ಆಗಮನ, ಜಿಗಣಿ ಕೆರೆ ಬಳಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸ

    ನವೀನ್‌ಚಂದ್ರ ಶೆಟ್ಟಿ ಆನೇಕಲ್
    ತಾಲೂಕಿನ ಹುಲಿಮಂಗಲದ ಜಿಗಣಿ ಕೆರೆ ದಡದಲ್ಲಿ ನೋಡು ನೋಡುತ್ತಿದ್ದಂತೆ 350ಕ್ಕೂ ಹೆಚ್ಚು ತಾತ್ಕಾಲಿಕ ಟೆಂಟ್‌ಗಳು ತಲೆಯೆತ್ತಿವೆ. ಚಿಂದಿ ಆಯುವ ನೆಪ ಮಾಡಿಕೊಂಡು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರೆನ್ನಲಾದ ಕುಟುಂಬಗಳು ಈ ಟೆಂಟ್‌ಗಳಲ್ಲಿ ವಾಸವಾಗಿವೆ. ಆರೇಳು ತಿಂಗಳಲ್ಲಿ ಆಗಿರುವ ಈ ಬೆಳವಣಿಗೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿರುವ ಜತೆಗೆ ದೇಶದ ಭದ್ರತೆಯ ಬಗ್ಗೆಯೂ ಆತಂಕ ಮಡುಗಟ್ಟಿದೆ.

    ಟೆಂಟ್‌ಗಳಲ್ಲಿ ವಾಸವಾಗಿರುವ ಜನರ ಪೂರ್ವಾಪರ ತಿಳಿಯದೆ ಸ್ಥಳೀಯರು ಆತಂಕಗೊಂಡಿದ್ದಾರೆ. ಹಣದ ಆಸೆಗಾಗಿ ಕೆಲ ಜಮೀನ್ದಾರರು ಅಕ್ರಮ ವಲಸಿಗರಿಗೆ ಎಕರೆಗಟ್ಟಲೆ ಭೂಮಿಯನ್ನು ಬಾಡಿಗೆಗೆ ನೀಡಿದ್ದಾರೆ. ಇವರೆಲ್ಲರ ಬಳಿ ಹುಲಿಮಂಗಲ ವ್ಯಾಪ್ತಿಯ ಶಿಕಾರಿಪಾಳ್ಯದ ನಿವಾಸಿಗಳು ಎಂದು ಬಿಂಬಿಸುವ ನಕಲಿ ಮತದಾರ ಚೀಟಿಗಳೂ ಇವೆ. ಇವೆಲ್ಲವನ್ನೂ ಗಮನಿಸಿದಾಗ, ವೋಟ್ ಬ್ಯಾಂಕ್ ಆಸೆಗಾಗಿ ಸ್ಥಳೀಯರೇ ನಕಲಿ ದಾಖಲಾತಿಗಳನ್ನು ಕೊಡಿಸಿಕೊಟ್ಟಿರುವ ಅನುಮಾನವೂ ವ್ಯಕ್ತವಾಗುತ್ತಿದೆ.

    ಪ್ಲಾಸ್ಟಿಕ್, ಹಳೇ ಕಬ್ಬಿಣ ಆಯುವ ಕೆಲಸ: ಜಿಗಣಿ ಕೆರೆಯ ದಂಡೆಯಲ್ಲಿ ವಾಸ್ತವ್ಯ ಹೂಡಿರುವ ಬಾಂಗ್ಲಾ ಅಕ್ರಮ ವಲಸಿಗರು ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ಲಾಸ್ಟಿಕ್ ಹಾಗೂ ಹಳೇ ಕಬ್ಬಿಣ ಆಯುವ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಅಪಾಯಕಾರಿ ರಾಸಾಯನಿಕ ವಸ್ತು ಮತ್ತು ದ್ರಾವಣಗಳಿರುವ ಕಬ್ಬಿಣದ ಡಬ್ಬಿಗಳನ್ನು ಸಂಗ್ರಹಿಸಿ ತಂದು, ಜಿಗಣಿ ಕೆರೆಯಲ್ಲೇ ಅವನ್ನು ತೊಳೆಯುತ್ತಿದ್ದಾರೆ. ಇದರಿಂದಾಗಿ ಮೊದಲೇ ಕಲುಷಿತಗೊಂಡಿರುವ ಜಿಗಣಿ ಕೆರೆಯ ನೀರು, ವಿಷಕಾರಿಯಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ದಿನವೂ ಹತ್ತಿಪ್ಪತ್ತು ಜನರ ಆಗಮನ: ಈ ಪ್ರದೇಶಕ್ಕೆ ನಿತ್ಯವೂ ಹತ್ತಿಪ್ಪತ್ತು ಕುಟುಂಬಗಳು ಬಂದು ಸೇರಿಕೊಳ್ಳುತ್ತಿವೆ. ಇದರಿಂದಾಗಿ ನಾಯಿಕೊಡೆಗಳಂತೆ ತಾತ್ಕಾಲಿಕ ಟೆಂಟ್‌ಗಳ ಸಂಖ್ಯೆ ಹೆಚ್ಚುತ್ತಲೇ ಇವೆ.

    ಒಬ್ಬೊಬ್ಬರಿಗೆ ಒಂದೊಂದು ಮಾಹಿತಿ: ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸವಾಗಿರುವ ಇವರ ಹಿನ್ನೆಲೆ ಅರಿತುಕೊಳ್ಳಲು ಪ್ರಯತ್ನಿಸಿದರೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶ, ಕೋಲ್ಕತಾ ಮೂಲದವರು ಎಂದೆಲ್ಲ ಒಬ್ಬೊಬ್ಬರಿಗೆ ಒಂದೊಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಖರವಾದ ಮಾಹಿತಿ ಕೊಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಪ್ರವಾಹದಲ್ಲಿ ಊರೇ ಮುಳುಗಿತು!: ಒತ್ತಾಯಪೂರ್ವಕವಾಗಿ ಕೆಲವರನ್ನು ವಿಚಾರಿಸಿದಾಗ ತಾವು ಪಶ್ಚಿಮ ಬಂಗಾಳದ ಗಡಿ ಭಾಗದ ಗ್ರಾಮದವರು. ಅಲ್ಲಿ, ಪ್ರವಾಹ ಬಂದು ಇಡೀ ಊರೇ ಮುಳುಗಿ ಹೋಯಿತು. ಜೀವನೋಪಾಯಕ್ಕೆ ಅನ್ಯ ಮಾರ್ಗ ಇಲ್ಲದೆ, ಇಲ್ಲಿಗೆ ಬಂದಿದ್ದೇವೆ. ಪ್ಲಾಸ್ಟಿಕ್ ಚಿಂದಿ ಆಯುವ ಮೂಲಕ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುತ್ತಿದ್ದೇವೆ ಎಂದು ಕೆಲವರು ಹೇಳಿದ್ದಾಗಿ ಸ್ಥಳೀಯರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    ವಿಷಕಾರಿ ನೀರು ಎಲ್ಲದಕ್ಕೂ ಬಳಕೆ: ಹುಲಿಮಂಗಲದ ಸುತ್ತಮುತ್ತಲಿರುವ ಕೈಗಾರಿಕೆಗಳು ಹರಿಸುತ್ತಿರುವ ತ್ಯಾಜ್ಯ ಹಾಗೂ ಒಳಚರಂಡಿ ನೀರು ಜಿಗಣಿ ಕೆರೆ ಸೇರಿ ಈಗಾಗಲೆ ಕಲುಷಿತಗೊಂಡಿದೆ. ಸಾಲದ್ದಕ್ಕೆ, ದಡದಲ್ಲಿ ನೆಲೆಸಿರುವ ವಲಸಿಗರು ರಾಸಾಯನಿಕಯುಕ್ತ ಡಬ್ಬಗಳನ್ನು ಸ್ವಚ್ಛಗೊಳಿಸಿ ನೀರನ್ನು ವಿಷಕಾರಿಯಾಗಿಸಿದ್ದಾರೆ. ಇಷ್ಟಾದರೂ, ಕುಡಿಯಲು, ಶೌಚ ಮತ್ತು ಇತ್ಯಾದಿ ಕೆಲಸಗಳಿಗೆ ಟೆಂಟ್‌ಗಳಲ್ಲಿ ಇರುವವರು ಇದೇ ನೀರನ್ನು ಬಳಸುತ್ತಿದ್ದಾರೆ. ಜತೆಗೆ, ಇಲ್ಲಿರುವವರು ಯಾರೂ ಕರೊನಾ ಲಸಿಕೆಯನ್ನೂ ಪಡೆದುಕೊಂಡಿಲ್ಲ. ಇದರಿಂದಾಗಿ, ಸುತ್ತಮುತ್ತ ಕರೊನಾ ಸೇರಿ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಭೀತಿ ಉಂಟಾಗಿದೆ.

    ಅವರೆಲ್ಲರೂ ನೆಲೆಸಿರುವ ಜಾಗ ರೆವಿನ್ಯೂ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಪಂಚಾಯಿತಿಯವರ ಬಳಿ ನೀವೇಕೆ ಇದನ್ನು ಕೇಳಲು ಬರುತ್ತೀರಿ ಎಂದು ಜಮೀನ್ದಾರರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಸೂಚನೆ ನೀಡಿದರೂ ಜಮೀನ್ದಾರರು ಎಚ್ಚ್ಚೆತ್ತುಕೊಳ್ಳುತ್ತಿಲ್ಲ.
    ಕೃಷ್ಣಪ್ಪ, ಹುಲಿಮಂಗಲ ಪಿಡಿಒ

    ಇವರು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂಬ ಬಗ್ಗೆ ದೂರು ಬಂದಿತ್ತು. ಪರಿಶೀಲನೆಗೆ ಮುಂದಾದಾಗ ಆ ಸ್ಥಳ ಹುಲಿಮಂಗಲ ಗ್ರಾಪಂ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಾಯಿತು. ಆದರೂ ನಾವು ಈ ಬಗ್ಗೆ ಜಿಗಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ.
    ಅಮರನಾಥ್, ಜಿಗಣಿ ಪುರಸಭೆ ಮುಖ್ಯಾಧಿಕಾರಿ

    ಟೆಂಟ್ ವಾಸಿಗಳು ಬಾಂಗ್ಲಾ ಮೂಲದವರೇ ಎಂಬ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ಹಲವು ಬಾರಿ ಜಮೀನ್ದಾರರ ಬಳಿ ಚರ್ಚಿಸಿ, ಅವರನ್ನು ತೆರವುಗೊಳಿಸುವಂತೆ ಸೂಚಿಸಿದ್ದೇವೆ. ಒಂದೆರಡು ದಿನಗಳಲ್ಲಿ ತೆರವುಗೊಳಿಸುವುದಾಗಿ ನಮಗೆ ಹೇಳುತ್ತಾರೆ. ಆದರೆ, ಅವರನ್ನು ತೆರವುಗೊಳಿಸುವ ಗೋಜಿಗೇ ಹೋಗಿಲ್ಲ.
    ಬಿ.ಕೆ. ಶೇಖರ್, ಜಿಗಣಿ ಠಾಣೆ ಸಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts