More

    ಹುಲಗೂರ ಗ್ರಾಮದಲ್ಲಿ ಭೂಕಂಪನ!

    ಪರಶುರಾಮ ಕೆರಿ ಹಾವೇರಿ
    ಅನುಮತಿ ಇಲ್ಲದೆ ಇದ್ದರೂ ರಾಜಾರೋಷವಾಗಿ ಬ್ಲಾಸ್ಟಿಂಗ್ ಮೂಲಕ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪ್ರಕರಣ ಗೃಹ ಸಚಿವರ ತವರು ಕ್ಷೇತ್ರವಾಗಿರುವ ಜಿಲ್ಲೆಯ ಶಿಗ್ಗಾಂವಿ ತಾಲೂಕು ಹುಲಗೂರ ಗ್ರಾಮದ ಬಳಿ ಬೆಳಕಿಗೆ ಬಂದಿದೆ.
    ಕಲ್ಲು ಗಣಿಗಾರಿಕೆಯಲ್ಲಿ ಬಳಸಲಾಗುವ ಸ್ಪೋಟಕಗಳಿಂದ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಹುದೊಡ್ಡ ಪ್ರಮಾಣದ ಅನಾಹುತಗಳು ಸಂಭವಿಸಿವೆ. ಈ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಅನಧಿಕೃತ ಕಲ್ಲು ಕ್ವಾರಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಮುಚ್ಚಲು ಸರ್ಕಾರ ಸೂಚನೆ ನೀಡಿತು. ಅಲ್ಲದೆ, ಅನುಮತಿಯಿರುವ ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಸಮಯದಲ್ಲಿ ಕಟ್ಟುನಿಟ್ಟಾಗಿ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿತ್ತು. ಆದರೆ, ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಗೂರ ಬಳಿಯ ಕಲ್ಲು ಕ್ವಾರಿಯಲ್ಲಿ ಬ್ಲಾಸ್ಟಿಂಗ್​ಗೆ ಯಾವುದೇ ಅನುಮತಿ ಇಲ್ಲ. ಆದರೂ ಸಂಜೆಯಾಗುತ್ತಲೇ ಭಾರಿ ಪ್ರಮಾಣದ ಸ್ಪೋಟಕ ಉಪಯೋಗಿಸಿ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುವ ರೈತರು ಈ ಶಬ್ದಕ್ಕೆ ಭಯಭೀತರಾಗಿ ಸಂಜೆಯಾದರೆ ಸಾಕು ಜಮೀನು ಬಳಿಯೂ ಸುಳಿಯದಂತಹ ಆತಂಕದ ವಾತಾವರಣ ನಿರ್ವಣವಾಗಿದೆ. ಈ ಕಲ್ಲು ಕ್ವಾರಿಯಿಂದ ಕೂಗಳತೆ ದೂರದಲ್ಲಿ ಹುಲಗೂರಿನ ಐತಿಹಾಸಿಕ ಪ್ರಸಿದ್ಧ ದರ್ಗಾವಿದೆ. ಅಲ್ಲಿಯೂ ಭೂಮಿ ಕಂಪಿಸುವ ಅನುಭವವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಐತಿಹಾಸಿಕ ದರ್ಗಾಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ದೂರಿದ್ದಾರೆ.
    ಇತ್ತೀಚೆಗೆ ಬ್ಲಾಸ್ಟಿಂಗ್ ಹೆಚ್ಚಳ: ಹುಲಗೂರ ಗ್ರಾಮದಿಂದ ಕ್ಯಾಲಕೊಂಡಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸರ್ವೆ ನಂಬರ್ 268/3 ರಲ್ಲಿ ಕಲ್ಲು ಗಣಿಗಾರಿಕೆ ಬಹು ವರ್ಷದಿಂದ ನಡೆಯುತ್ತಿದೆ. ಆದರೆ, ಈವರೆಗೆ ಅಲ್ಲಿ ದೊಡ್ಡ ಪ್ರಮಾಣದ ಸ್ಪೋಟಕಗಳನ್ನು ಉಪಯೋಗಿಸಿ ಬ್ಲಾಸ್ಟಿಂಗ್ ನಡೆಸುತ್ತಿರಲಿಲ್ಲ. ಇತ್ತೀಚೆಗೆ ಈ ಕಲ್ಲುಕ್ವಾರಿಯಲ್ಲಿ ಸ್ಥಳೀಯರ ಜತೆಗೆ ಮಂಗಳೂರು ಮೂಲದವರೊಬ್ಬರು ಸೇರಿಕೊಂಡ ನಂತರ ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟಿಂಗ್ ಆರಂಭವಾಗಿದೆ. ರಾತ್ರಿಯಾದರೆ ಸಾಕು ಬಾಂಬ್ ಸ್ಪೋಟದ ಮಾದರಿಯಲ್ಲಿ ಶಬ್ದವಾಗುತ್ತದೆ. ಇದು ರಾತ್ರಿಯಿಡೀ ನಿರಂತರವಾಗಿರುತ್ತದೆ. ಈ ಶಬ್ದದಿಂದ ನೆಮ್ಮದಿಯಾಗಿ ನಿದ್ರೆ ಮಾಡಲಾಗುತ್ತಿಲ್ಲ. ಮಕ್ಕಳು ಬೆಚ್ಚಿ ಬೀಳುತ್ತಿದ್ದಾರೆ. ಭೂಮಿಯು ಕಂಪನವಾದ ಅನುಭವ ಆಗುತ್ತಿರುವುದರಿಂದ ಮನೆಗಳು ಬೀಳುತ್ತವೆಯೋ ಏನೋ ಎಂಬ ಭೀತಿ ಮೂಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟ ಮಾಡಬೇಡಿ. ಮೊದಲಿನಂತೆ ಸಣ್ಣ ಪ್ರಮಾಣದಲ್ಲಿ ಮಾಡಿ ಎಂದು ವಿನಂತಿಸಿ ಬಂದಿದ್ದೇವೆ. ಆದರೂ ಅವರು ಕ್ಯಾರೇ ಎನ್ನುತ್ತಿಲ್ಲ ಎನ್ನುತ್ತಾರೆ ಹುಲಗೂರ ಗ್ರಾಮಸ್ಥರಾದ ಸೈಯದ್​ಯುೂನಿಸ್ ಖಾದ್ರಿ.
    ಸ್ಪೋಟಿಸಲು ಇಲ್ಲ ಅನುಮತಿ
    ಇಲ್ಲಿ ಕಲ್ಲು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿಯಿದೆ. ಆದರೆ, ಬ್ಲಾಸ್ಟಿಂಗ್​ಗೆ ಅನುಮತಿಯಿಲ್ಲ. ಆದರೂ ರಾಜಾರೋಷವಾಗಿ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿರುವ ಸಾಧ್ಯತೆಗಳಿವೆ. ಈಗಾಗಲೇ ಸಾರ್ವಜನಿಕರ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಕೆ. ಶ್ರೀನಿವಾಸ ಅವರು ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಅನುಮತಿ ಇಲ್ಲದೇ ಇದ್ದರೂ ಬ್ಲಾಸ್ಟಿಂಗ್ ಮಾಡಿರುವುದನ್ನು ಗಮನಿಸಿ ಏಳು ದಿನಗಳೊಳಗೆ ಸೂಕ್ತ ಸಮಜಾಯಿಷಿ ನೀಡಬೇಕೆಂದು ಸೂಚಿಸಿದ್ದಾರೆ. ಇಲ್ಲವಾದರೆ, ‘ನಿಮ್ಮ ಕಲ್ಲು ಗಣಿ ಗುತ್ತಿಗೆ ರದ್ದುಪಡಿಸುತ್ತೇವೆ. ಅಲ್ಲಿಯವರೆಗೆ ಇಲ್ಲಿ ಯಾವುದೇ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡಬಾರದು’ ಎಂದು ಕಲ್ಲು ಗಣಿ ಗುತ್ತಿಗೆದಾರ ಎಸ್.ಎಸ್. ಖಾದ್ರಿ ಎಂಬುವರಿಗೆ ಜು. 2ರಂದು ನೋಟಿಸ್ ಜಾರಿಗೊಳಿಸಿದ್ದಾರೆ. ಆದರೂ ಇಲ್ಲಿ ಜೆಸಿಬಿಯಿಂದ ಕೆಲಸ ನಡೆಯುತ್ತಿರುವ ದೃಶ್ಯ ಮಂಗಳವಾರ ಕಂಡುಬಂತು.
    ಮಂಗಳೂರಿನವರ ಕೈವಾಡ?
    ಈ ಕಲ್ಲು ಗಣಿಯಲ್ಲಿ ದಶಕಗಳಿಂದ ಗಣಿಗಾರಿಕೆ ನಡೆದರೂ ಇದರಿಂದ ಯಾವುದೇ ದೊಡ್ಡ ಸಮಸ್ಯೆ ಆಗಿರಲಿಲ್ಲ. ಇತ್ತೀಚೆಗೆ ಮಂಗಳೂರು ಮೂಲದವರೊಬ್ಬರು ಮೂಲ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಬೃಹತ್ ಪ್ರಮಾಣದಲ್ಲಿ ಕಲ್ಲು ಗಣಿಕಾರಿಕೆ ಆರಂಭಿಸಿದ್ದಾರೆ. ಎಲ್ಲಿಂದಲೋ ಬಂದಿರುವ ಅವರು ಇಲ್ಲಿರುವ ಕಲ್ಲುಗಳನ್ನೆಲ್ಲ ಒಂದೆರಡು ತಿಂಗಳಲ್ಲಿ ಖಾಲಿ ಮಾಡಿ ದುಡ್ಡು ಮಾಡಿಕೊಳ್ಳುವ ದುರಾಸೆಯಿಂದ ದೊಡ್ಡಮಟ್ಟದ ಬ್ಲಾಸ್ಟಿಂಗ್ ಆರಂಭಿಸಿದ್ದಾರೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.

    ಅಧಿಕೃತವಾಗಿ ಪರವಾನಗಿ ಪಡೆದು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದೇವೆ. ಇಲ್ಲಿ ಯಾವುದೇ ಅಕ್ರಮವಿಲ್ಲ. ಅಲ್ಲದೆ, ಕಳೆದ ಕೆಲ ದಿನಗಳ ಹಿಂದೆ ಅಧಿಕಾರಿಗಳು ಹೇಳಿದ್ದರಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಯಾವುದೇ ಬ್ಲಾಸ್ಟಿಂಗ್ ನಡೆಸುತ್ತಿಲ್ಲ.
    | ಎಸ್.ಎಸ್. ಖಾದ್ರಿ ಕಲ್ಲು ಗಣಿ ಗುತ್ತಿಗೆದಾರ

    ಹುಲಗೂರನಲ್ಲಿ ಕಲ್ಲು ಗಣಿ ಗುತ್ತಿಗೆ ನೀಡಲಾಗಿದೆ. ಆದರೆ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟಿಂಗ್ ಮಾಡಿರುವ ಕುರಿತು ದೂರು ಬಂದಿದೆ. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿದಾಗ ಬ್ಲಾಸ್ಟಿಂಗ್​ಗೆ ಅನುಮತಿ ಪಡೆದಿರುವ ಯಾವುದೇ ದಾಖಲೆಗಳನ್ನು ಅವರು ಒದಗಿಸಿಲ್ಲ. ಹೀಗಾಗಿ, ಏಳು ದಿನಗಳ ಅವಕಾಶ ನೀಡಿ ನೋಟಿಸ್ ನೀಡಲಾಗಿದೆ. ಅಷ್ಟರೊಳಗೆ ದಾಖಲೆ ಸಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
    | ಕೆ. ಶ್ರೀನಿವಾಸ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts