More

    ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ಮಳಿಗೆದಾರರ ಸಂಕಷ್ಟ

    ಸಂತೋಷ ವೈದ್ಯ ಹುಬ್ಬಳ್ಳಿ

    ಹಳೇ ಬಸ್ ನಿಲ್ದಾಣದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಮಳಿಗೆಯ ಪರವಾನಗಿ ರದ್ದು ಪಡಿಸಿ ಎಂದು ಕೋರಿದರೆ 4 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಾವತಿಸಿ ಎಂದು ಹೇಳುವ ಮೂಲಕ ವಾಕರಸಾ ಸಂಸ್ಥೆ, ಮಳಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಂಸ್ಥೆಯ ಈ ನಡೆ ಮಳಿಗೆದಾರರ ಲಕ್ಷಾಂತರ ರೂ. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹುನ್ನಾರದಂತೆ ಕಾಣಿಸುತ್ತಿದೆ.

    ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ 32 ವಾಣಿಜ್ಯ ಮಳಿಗೆಗಳಿವೆ. 30 ಸಾವಿರದಿಂದ 7 ಲಕ್ಷ ರೂ. ವರೆಗೆ ಮಾಸಿಕ ಬಾಡಿಗೆ (ಪರವಾನಗಿ ಶುಲ್ಕ) ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಇತ್ತೀಚೆಗೆ ಕರೊನಾದಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವುದರ ಜತೆಗೆ ಹಳೇ ಬಸ್ ನಿಲ್ದಾಣವನ್ನು ಗ್ರಾಮೀಣ ಸಾರಿಗೆ ಬಸ್​ಗಳ ಓಡಾಟಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿ ಕೆಲ ಮಳಿಗೆದಾರರಿಗೆ ನಿತ್ಯ 2 ಸಾವಿರ ರೂ. ವಹಿವಾಟು ಸಹ ನಡೆಯುವುದಿಲ್ಲ.

    ಮಳಿಗೆದಾರರು ಮಾಸಿಕ ಬಾಡಿಗೆಯ 10 ಪಟ್ಟು ಹಣವನ್ನು ಸಂಸ್ಥೆಗೆ ಭದ್ರತಾ ಠೇವಣಿಯಾಗಿ ನೀಡಿದ್ದಾರೆ. ಅಂಥವರು ವ್ಯಾಪಾರ ಏನೂ ನಡೆಯುತ್ತಿಲ್ಲ, ಮಳಿಗೆ ಪರವಾನಗಿಯನ್ನು ರದ್ದುಪಡಿಸಿ ಭದ್ರತಾ ಠೇವಣಿ ವಾಪಸ್ ಕೊಡಿ ಎಂದು ಕೇಳಿದರೆ, ನಾಲ್ಕು ತಿಂಗಳ ಬಾಡಿಗೆ ಹಾಗೂ ಇತರೇ ಶುಲ್ಕಗಳನ್ನು ಮುಂಗಡವಾಗಿ ಪಾವತಿಸಿ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮೀಣ ವಿಭಾಗದ ನಿಯಂತ್ರಣಾದಿಕಾರಿ ಎಚ್. ರಾಮನಗೌಡರ್ ಹಿಂಬರಹ ಕಳುಹಿಸಿದ್ದಾರೆ.

    ಈಗ 1 ಮಳಿಗೆಯ ಬಾಡಿಗೆ 1 ಲಕ್ಷ ರೂ. ಎಂದಿಟ್ಟುಕೊಳ್ಳಿ. ಕರೊನಾ ಸಂಕಷ್ಟದ ಕಾಲದಲ್ಲಿ 4 ಲಕ್ಷ ರೂ. ಮೊತ್ತವನ್ನು ಮುಂಗಡವಾಗಿ ಕೊಡಲು ಎಲ್ಲಿಂದ ಸಾಧ್ಯ? ಒಂದು ಕಡೆ 4 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಕೊಡಲು ಸಾಧ್ಯವಿಲ್ಲ. ಇನ್ನೊಂದೆಡೆ ಮಳಿಗೆಯಲ್ಲಿ ವ್ಯಾಪಾರ ಮುಂದುವರಿಸಿಕೊಂಡು ಹೋಗಲು ಆಗುತ್ತಿಲ್ಲ. ಹೀಗೆ ಮಳಿಗೆದಾರರ ಜೀವ ಹಿಂಡುತ್ತಿದೆ ವಾಕರಸಾ ಸಂಸ್ಥೆ. ಇದರಿಂದ ಬೇಸತ್ತು ಮಳಿಗೆಯನ್ನು ಬಿಟ್ಟು ಹೋದರೆ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಲ್ಲವೇ?

    10ಕ್ಕೂ ಹೆಚ್ಚು ಮಳಿಗೆದಾರರು ಸಂಸ್ಥೆಯಿಂದ ಭದ್ರತಾ ಠೇವಣಿ ವಾಪಸ್ ಪಡೆಯಲು ನಿರ್ಧರಿಸಿದ್ದರು. ಇವರಲ್ಲಿ ಒಬ್ಬರಾದ ಪ್ರಶಾಂತ ಪಟ್ಟಣಶೆಟ್ಟಿ ಎಂಬುವರು ಮಳಿಗೆಯ ಪರವಾನಗಿ ರದ್ದು ಪಡಿಸುವಂತೆ ಲಿಖಿತವಾಗಿ ಕೋರಿದ್ದರು. ಅವರಿಗೆ ಸಂಸ್ಥೆ 4 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ನೀಡಲು ಕೋರುತ್ತಿದ್ದಂತೆ ಉಳಿದವರು ಲಿಖಿತವಾಗಿ ಮನವಿ ಸಲ್ಲಿಸುವ ಧೈರ್ಯ ತೋರಲಿಲ್ಲ.

    ಸ್ಮಾರ್ಟ್ ಸಿಟಿ ಕಿರಿಕ್: ಸ್ಮಾರ್ಟ್ ಸಿಟಿ ಯೋಜನೆಯ 30 ಕೋ. ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಹೊಸ ರೂಪ ಪಡೆಯಲಿದೆ. ಇದರಿಂದ ಹಳೇ ಬಸ್ ನಿಲ್ದಾಣ ಕಟ್ಟಡ ಕೆಡವಿ ಹೊಸ ಬಸ್ ನಿಲ್ದಾಣ ನಿರ್ವಿುಸುವುದು ಖಚಿತವಾಗುತ್ತಿದ್ದಂತೆ ‘ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ತಾವು ಸಿದ್ಧರಿರುವುದಾಗಿ ಹಾಗೂ ತಮ್ಮದು ಯಾವುದೇ ಆಕ್ಷೇಪಣೆಗಳಿಲ್ಲ’ ಎಂದು ವಿಭಾಗೀಯ ನಿಯಂತ್ರಣಾದಿಕಾರಿ ಎಚ್. ರಾಮನಗೌಡರ್ ಜೂ. 19ರಂದು ಒಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದರು. ಹಳೇ ಬಸ್ ನಿಲ್ದಾಣ ಹಸ್ತಾಂತರಿಸುವಂತೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ, ಈವರೆಗೆ ಲಿಖಿತವಾಗಿ ವಾಕರಸಾ ಸಂಸ್ಥೆಯನ್ನು ಕೋರಿಲ್ಲ. ಅದಿನ್ನು ಡಿಪಿಆರ್, ವಿನ್ಯಾಸದಲ್ಲಿ ಮುಳುಗಿದೆ. ಸಾರಿಗೆ ಸಂಸ್ಥೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿಳಂಬ ಧೋರಣೆಯಿಂದ ಮಳಿಗೆದಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಸಂಸ್ಥೆಯೊಂದಿಗೆ ಮಾಡಿಕೊಂಡ ಕರಾರು ನಿಯಮಗಳಂತೆ ಮಳಿಗೆಯ ಪರವಾನಗಿಯನ್ನು ಅವಧಿ ಪೂರ್ವ ರದ್ದುಪಡಿಸಬೇಕಾದರೆ ಮಳಿಗೆದಾರರು 4 ತಿಂಗಳುಗಳ ಪರವಾನಗಿ ಶುಲ್ಕ (ಮಾಸಿಕ ಬಾಡಿಗೆ) ಹಾಗೂ ಇತರೇ ಶುಲ್ಕಗಳನ್ನು ಮುಂಗಡವಾಗಿ ಪಾವತಿಸಬೇಕು. | ಎಚ್. ರಾಮನಗೌಡರ್, ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ

    ದಿನಕ್ಕೆ 2 ಸಾವಿರ ರೂ. ಸಹ ವ್ಯಾಪಾರ ಆಗುತ್ತಿಲ್ಲ. ನಮ್ಮ ಪರಿಸ್ಥಿತಿ ಗಂಭೀರವಿದೆ. ಭದ್ರತಾ ಠೇವಣಿ ಕೊಟ್ಟು ಬಿಟ್ಟರೆ ಮಳಿಗೆ ಬಿಟ್ಟು ಕೊಡಲು ಬಹಳಷ್ಟು ಮಳಿಗೆದಾರರು ರೆಡಿ ಇದ್ದಾರೆ. ನಿಲ್ದಾಣದ ಮುಂದುಗಡೆ ಇರುವ 3-4 ಮಳಿಗೆಗಳಿಗೆ ಒಂದಿಷ್ಟು ವ್ಯಾಪಾರ ಆಗುತ್ತಿದೆ. ಉಳಿದವರಿಗೆ ಏನೂ ಇಲ್ಲ. ಹೀಗಿರುವಾಗ 4 ತಿಂಗಳ ಬಾಡಿಗೆಯನ್ನು ಮುಂಗಡ ಕೊಡಲು ಹೇಗೆ ಸಾಧ್ಯ? | ಪ್ರಶಾಂತ ಪಟ್ಟಣಶೆಟ್ಟಿ, ಮಳಿಗೆದಾರ

    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts