More

    ಹುಬ್ಬಳ್ಳಿಯಲ್ಲಿ ಕರೊನಾ ಸೋಂಕು ದೃಢಪಟ್ಟ ವ್ಯಕ್ತಿ ತಿರುಗಾಡಿದ್ದು ಕೇಳಿದರೆ ತಲೆ ತಿರುಗೀತು

    ಧಾರವಾಡ: ಜಿಲ್ಲೆಯಲ್ಲಿ ಮೇ 1ರಂದು ಕರೊನಾ ಸೋಂಕು ದೃಢಪಟ್ಟ ಪಿ 589 ವ್ಯಕ್ತಿಯು ಹುಬ್ಬಳ್ಳಿ ಶಹರದ ಕೇಶ್ವಾಪುರದ ಶಾಂತಿ ನಗರ ಬಳಿಯ ನಿವಾಸಿಯಾಗಿದ್ದು, ಲಾಕ್​ಡೌನ್ ಘೊಷಣೆಯಾದ ಮೇಲೆ ಆತ ತಿರುಗಾಡಿರುವ ಮಾಹಿತಿ ಬೆಚ್ಚಿ ಬೀಳಿಸುವಂತಿದೆ.

    ವ್ಯಕ್ತಿಯು ಮಾ. 27ರಂದು ಮಗನ ಜೊತೆ ಹುಬ್ಬಳ್ಳಿಯ ತುಳಜಾ ಭವಾನಿ ದೇವಸ್ಥಾನದಲ್ಲಿ ಹಾಗೂ ನಂತರದ ದಿನಗಳಲ್ಲಿ ತೊರವಿ ಹಕ್ಕಲ, ಆನಂದನಗರ, ಅರವಿಂದನಗರ, ಹಳೇ ಹುಬ್ಬಳ್ಳಿ, ಟಿಪ್ಪುನಗರ, ನೇಕಾರನಗರ ಮತ್ತು ಕೇಶ್ವಾಪುರದಲ್ಲಿ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದಾರೆ.

    ಲಾಕ್​ಡೌನ್ ಘೊಷಣೆಯಾದ ನಂತರ ಹುಬ್ಬಳ್ಳಿಯ ಕಮರಿಪೇಟೆಯಲ್ಲಿರುವ ಮಟನ್ ಶಾಪ್​ಗಳಿಗೆ ಭೇಟಿ ನೀಡಿರುತ್ತಾರೆ. ಏಪ್ರಿಲ್​ನಲ್ಲಿ ಹುಬ್ಬಳ್ಳಿಯ ಶಾಂತಿನಗರ, ಬೆಂಗೇರಿ, ಮಹಾವೀರ ಗಲ್ಲಿ, ಬೆಳಗಾವಿ ಗಲ್ಲಿ, ಮರಾಠಾ ಗಲ್ಲಿ, ಶಕ್ತಿನಗರ, ವಿಕಾಸ ನಗರ, ಗೋಕುಲ ರಸ್ತೆ, ಜನತಾ ಬಜಾರ್, ಸುರಭಿನಗರ, ಹೊಸೂರ, ಸ್ಟೇಷನ್ ರಸ್ತೆ ತಬೀಬ್ ಲ್ಯಾಂಡ್, ಕಲ್ಯಾಣ ನಗರ, ವೆಂಕಟೇಶ ಕಾಲನಿ,ದೇಶಪಾಂಡೆ ನಗರ, ದಾಜಿಬಾನಪೇಟ, ಸಿಬಿಟಿ, ರೈಲ್ವೆ ವರ್ಕ್ ಶಾಪ್, ಗಣೇಶಪೇಟ, ಗೂಡ್ಸ್ ಶೆಡ್ ರೋಡ್, ತಾಡಪತ್ರಿ ಗಲ್ಲಿ, ಚೇತನಾ ಕಾಲನಿ, ಬೂಸಪೇಟ ಹಾಗೂ ಹುಬ್ಬಳ್ಳಿಯ ಇನ್ನಿತರ ಸ್ಥಳಗಳಲ್ಲಿ ಸಂಚರಿಸಿದ್ದಾರೆ.

    ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇವರನ್ನು ಸಂರ್ಪಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಕೂಡಲೆ ಜಿಲ್ಲಾಡಳಿತದ ಸಹಾಯವಾಣಿ 1077 ಇದಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಿಮ್ಸ್​ನಲ್ಲಿ ಇಸಿಜಿ ಮಾಡಿಸಿಕೊಂಡಿದ್ದನೆ? : ಶಾಂತಿನಗರದ ಕರೊನಾ ಸೋಂಕಿತ ವ್ಯಕ್ತಿ (ಪಿ-589) ಕೆಲವು ದಿನ ಹಿಂದೆ ಇಲ್ಲಿಯ ಕಿಮ್ಸ್​ನಲ್ಲಿ ಇಸಿಜಿ (ಇಲೆಕ್ಟ್ರೋ ಕಾರ್ಡಿಯೋಗ್ರಾಮ್ ಮಾಡಿಸಿಕೊಂಡು ಹೋಗಿದ್ದ ಎನ್ನಲಾಗುತ್ತಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ತರಿಸಿದೆ. ಅನಾರೋಗ್ಯ ಉಂಟಾಗಿದ್ದರಿಂದ ಕಿಮ್ಸ್​ಗೆ ಹೋಗಿದ್ದ ಆತ, ಅಲ್ಲಿಯೇ ಹೊರರೋಗಿಗಳ ವಿಭಾಗದಲ್ಲಿ ಸರತಿಯಲ್ಲಿ ನಿಂತು ಚೀಟಿ ಮಾಡಿಸಿ, ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಯಾವ ವೈದ್ಯರು, ಸಿಬ್ಬಂದಿ ಯಾರಿದ್ದರು ಎನ್ನುವುದರ ಕುರಿತು ಆಡಳಿತ ಮಂಡಳಿ ಮಾಹಿತಿ ಕಲೆಹಾಕುತ್ತಿದೆ. ಮೊದಲಿಗೆ ಆತ, ಯಾವ ವೈದ್ಯರ ಬಳಿ ಹೋಗಬೇಕು ಎಂದು ಸೆಕ್ಯೂರಿಟಿ ಗಾರ್ಡ್​ಗಳನ್ನು ಕೇಳಿದ್ದ. ಅವರು ಹೇಳಿದ ವಾರ್ಡ್​ಗೆ ತೆರಳಿದ್ದ. ನಂತರ ವೈದ್ಯರು ತಪಾಸಣೆ ನಡೆಸಿಕೊಟ್ಟ ಔಷಧ ಚೀಟಿ ಪಡೆದು ಹೊರ ಹೋಗಿದ್ದ. ಆದರೆ, ಯಾವ ಔಷಧ ಅಂಗಡಿಯಲ್ಲಿ ಖರೀದಿ ಮಾಡಿದ್ದಾನೆ ಎಂಬುದು ಗೊತ್ತಿಲ್ಲ. ಹಾಗಾಗಿ ಇದರ ಪತ್ತೆ ಕಾರ್ಯವೂ ಚುರುಕುಗೊಂಡಿದೆ ಎಂದು ತಿಳಿದು ಬಂದಿದೆ.

    ಮೂರೂ ರಾಜಕೀಯ ಪಕ್ಷದವರೊಂದಿಗೆ ಸಂಬಂಧ: ಸಮಾಜವೊಂದರ ಪ್ರತಿಷ್ಠಿತ ವ್ಯಕ್ತಿಯಾಗಿರುವ ಸೋಂಕಿತ, ಮೂರೂ ಪ್ರಮುಖ ರಾಜಕೀಯ ಪಕ್ಷದಲ್ಲಿರುವ ತನ್ನದೇ ಸಮಾಜದ ಗಣ್ಯರೊಂದೊಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಸೋಂಕಿತನೊಂದಿಗೆ ಪ್ರಾಥಮಿಕ ಹಂತದಲ್ಲಿದ್ದ ವ್ಯಕ್ತಿಗಳು ಸರ್ಕಾರಿ ಕ್ವಾರಂಟೈನ್​ಗೆ ಒಳಗಾಗುವುದು ಖಚಿತ. ಇದರಿಂದಾಗಿ ಅನೇಕ ರಾಜಕಾರಣಿಗಳು, ಅಧಿಕಾರಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಆತನ ಸಮಾಜದ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಕೆಲ ರಾಜಕಾರಣಿಗಳು ಹಾಗೂ ಸಮಾಜದವೊಂದರ ಕೆಲ ಪ್ರಮುಖರನ್ನು ಮನೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮೂಲಗಳ ಪ್ರಕಾರ ಸೋಂಕಿತನೊಂದಿಗೆ ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದ 20ಕ್ಕೂ ಹೆಚ್ಚಿನ ಜನರ ಪಟ್ಟಿಯನ್ನು ಇದುವರೆಗೆ ಸಿದ್ಧಪಡಿಸಲಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸೋಂಕಿತನೊಂದಿಗೆ ಸುತ್ತಾಡಿದ್ದ ರಾಜಕಾರಣಿಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸಮಾಜದ ಪ್ರಮುಖರು ಹಾಗೂ ಸ್ನೇಹಿತರು ಶನಿವಾರ ಬೆಳಗ್ಗೆ ಕಿಮ್ಸ್​ಗೆ ಭೇಟಿ ನೀಡಿ, ಕರೊನಾ ತಪಾಸಣೆಗೆ ಒಳಗಾಗಿದ್ದಾರೆ.

    ಕಿಟ್ ವಿತರಿಸಲು ಸುತ್ತಾಡಿದ್ದ: ಲಾಕ್​ಡೌನ್ ನಂತರ ತೊಂದರೆಗೀಡಾದ ತನ್ನ ಸಮಾಜದ ಬಡವರಿಗೆ ಸಹಾಯ ಮಾಡಲೆಂದು ಪ್ರಮುಖರೊಂದಿಗೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಆಹಾರ ಸಾಮಗ್ರಿಯ ಕಿಟ್ ವಿತರಿಸಿದ್ದ ಸೋಂಕಿತ ವ್ಯಕ್ತಿ, ವಿವಿಧ ಬಡಾವಣೆಗಳಲ್ಲಿಯೂ ಸುತ್ತಾಡಿದ್ದ.

    ಕರೊನಾಪೀಡಿತ ಮಕ್ಕಳಿಬ್ಬರು ಗುಣಮುಖ: ಕರೊನಾ ಸೋಂಕಿನಿಂದ ಗುಣಮುಖರಾದ ಹುಬ್ಬಳ್ಳಿ ಮುಲ್ಲಾ ಓಣಿಯ ಇಬ್ಬರು ಮಕ್ಕಳನ್ನು ಕಿಮ್್ಸ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಬಿಡುಗಡೆ ಮಾಡಲಾಗಿದೆ. ಪಿ-234 (3.6 ವರ್ಷದ ಬಾಲಕ), ಪಿ-235 (7 ವರ್ಷದ ಬಾಲಕಿ) ಗುಣಮುಖರಾದವರು. 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಿದಾಗ ಕೋವಿಡ್-19 ನೆಗೆಟಿವ್ ಬಂದಿದೆ. ಎಕ್ಸ್​ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನೂ ವೈದ್ಯರು ದೃಢಪಡಿಸಿದ್ದರಿಂದ ಈ ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಕ್ಕಳ ಆರೈಕೆಯಲ್ಲಿದ್ದ ತಾಯಿಗೆ ಕೋವಿಡ್ ತಗುಲಿದ್ದಿಲ್ಲ. ಆದರೂ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ಮಾಡಿದ್ದು, ಅವರ ವರದಿಯೂ ನೆಗೆಟಿವ್ ಬಂದಿದೆ. ಹಾಗಾಗಿ ಮಕ್ಕಳೊಂದಿಗೆ ತಾಯಿಯನ್ನೂ ಮನೆಗೆ ಕಳುಹಿಸಿಕೊಡಲಾಗಿದೆ. ಕಿಮ್ಸ್​ನಲ್ಲಿ ಇನ್ನೂ ಇದೇ ಕುಟುಂಬದ 5 ವರ್ಷದ ಮಗು ಹಾಗೂ ಅವರ ತಂದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರಾಡಿ ಓಣಿಯ 63 ವರ್ಷದ ವೃದ್ಧ, ಆಜಾದ್ ಕಾಲನಿಯ ಮಹಿಳೆ ಹಾಗೂ ಬಾಲಕಿ ಸೇರಿ ಸದ್ಯ 6 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಜಿಲ್ಲೆಯಲ್ಲಿ ಇದುವರೆಗೆ ನಾಲ್ವರು ಕೋವಿಡ್​ನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಈಗಾಗಲೇ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 101 ಶಂಕಿತರು ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 101 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಇದ್ದ 3236 ಶಂಕಿತರ ಸಂಖ್ಯೆ ಶನಿವಾರ 3342ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 2781 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 2669 ಜನರ ವರದಿ ನೆಗೆಟಿವ್ ಬಂದಿವೆ. 10 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 6 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ರಾತ್ರಿ ಇಬ್ಬರು ಮಕ್ಕಳು ಸೇರಿ ಒಟ್ಟು 4 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 106 ವರದಿಗಳು ಬರಬೇಕಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts