More

    ಹುಬ್ಬಳ್ಳಿಯಲ್ಲಿ ಆರಂಭವಾಗಲಿದೆ ವಿಧಿ ವಿಜ್ಞಾನ ಲ್ಯಾಬ್

    ಹುಬ್ಬಳ್ಳಿ: ಅಪರಾಧ ಪ್ರಕರಣಗಳ ಶೀಘ್ರ ಇತ್ಯರ್ಥ್ಯಕ್ಕೆ ಸಹಕಾರಿಯಾಗಲೆಂದು ರಾಜ್ಯ ಸರ್ಕಾರವು ಹುಬ್ಬಳ್ಳಿಯಲ್ಲಿ ಅಂದಾಜು 15 ಕೋಟಿ ರೂ. ವೆಚ್ಚದ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಆರ್​ಎಫ್​ಎಸ್​ಎಲ್) ಪ್ರಾರಂಭಿಸಲು ಮುಂದಾಗಿದೆ. ಉತ್ತರ ಕರ್ನಾಟಕದಲ್ಲಿ ಈಗಾಗಲೇ ಬೆಳಗಾವಿ, ಕಲಬುರಗಿಯಲ್ಲಿ ಆರ್​ಎಫ್​ಎಸ್​ಎಲ್ ಕೇಂದ್ರಗಳಿದ್ದು, ಇದು ಮೂರನೇ ಕೇಂದ್ರವಾಗಲಿದೆ.

    ಕೊಲೆ, ದರೋಡೆ, ಸುಲಿಗೆ, ಕಳ್ಳತನ, ಅತ್ಯಾಚಾರ ಮತ್ತಿತರ ಪ್ರಕರಣಗಳ ಸಂದರ್ಭದಲ್ಲಿ ಪೊಲೀಸರು ಸಾಕ್ಷ್ಯಳನ್ನು ಸಂಗ್ರಹಿಸುತ್ತಾರೆ. ಈ ಸಾಕ್ಷ್ಯಳ ಖಚಿತತೆಗಾಗಿ ಪರೀಕ್ಷೆಗೆ ಒಳಪಡಿಸಲು ಎಫ್​ಎಸ್​ಎಲ್​ಗೆ ಕಳುಹಿಸುತ್ತಾರೆ. ಸ್ಥಳೀಯವಾಗಿ ಆರ್​ಎಫ್​ಎಸ್​ಎಲ್ ಆರಂಭವಾಗುವುದರಿಂದ ಶೀಘ್ರವೇ ವರದಿ ಕೈಸೇರುತ್ತದೆ. ಇದು ಪೊಲೀಸರ ತನಿಖೆಗೆ ಸಹಕಾರಿಯಾಗಲಿದೆ.

    ಹುಬ್ಬಳ್ಳಿಯಲ್ಲಿ ಗೃಹ ಇಲಾಖೆ ಈಗಾಗಲೇ ಇದಕ್ಕಾಗಿ ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಲ್ಲಿನ ಗೋಕುಲ ರಸ್ತೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕ್ರೀಡಾ ಭವನದ ಪಕ್ಕದ ಕಟ್ಟಡದಲ್ಲಿ ಆರ್​ಎಫ್​ಎಸ್​ಎಲ್ ಕಚೇರಿ ಆರಂಭಿಸಲು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಇಲಾಖೆಯಿಂದ ಸ್ಥಳ ಪರಿಶೀಲನೆ ಬಾಕಿ ಇದೆ ಎನ್ನುತ್ತಾರೆ ಡಿಸಿಪಿ ಆರ್.ಬಿ. ಬಸರಗಿ.

    ರಾಜಧಾನಿ ಬೆಂಗಳೂರಿನ ಮಡಿವಾಳದಲ್ಲಿ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಯ (ಎಫ್​ಎಸ್​ಎಲ್) ಇದೆ. ಉಳಿದಂತೆ ರಾಜ್ಯದಲ್ಲಿ ಮೈಸೂರು, ಮಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿಯಲ್ಲಿ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳಿವೆ. ಹೊಸದಾಗಿ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಆರ್​ಎಫ್​ಎಸ್​ಎಲ್ ಆರಂಭಿಸಲಾಗುತ್ತಿದೆ.

    ಬೆಂಗಳೂರಿನ ಎಫ್​ಎಸ್​ಎಲ್ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ. ಪ್ರತಿ ವರ್ಷ ಸಾವಿರಾರು ಪ್ರಕರಣಗಳು ಬರುತ್ತವೆ. ಪ್ರಸ್ತುತ ಆದ್ಯತೆ ಮೇರೆಗೆ ಪರಿಣತರು ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದಾರೆ. ಹೊಸ ಕೇಂದ್ರಗಳ ಆರಂಭದಿಂದ ಶೀಘ್ರವೇ ಪ್ರಕರಣಗಳ ತನಿಖೆ ಕೈಗೊಂಡು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಸಹಕಾರಿಯಾಗಲಿದೆ.

    ವೈಶಿಷ್ಟ್ಯ ಏನು?

    ಹುಬ್ಬಳ್ಳಿ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ 15 ಪರಿಣತ ತಜ್ಞರು ಹಾಗೂ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಇಲ್ಲಿ ವೈಜ್ಞಾನಿಕ ವಿಶ್ಲೇಷಣೆಯೂ ನಡೆಯಲಿದೆ. ಡ್ರಗ್ಸ್​ಗೆ ಸಂಬಂಧಿಸಿದ ವಿಭಾಗವೂ ಆರಂಭವಾಗುವ ಸಾಧ್ಯತೆ ಇದೆ. ಹಾಗಾಗಿ, ಇಲ್ಲಿಗೆ ರಾಜ್ಯದ ಎಲ್ಲ ಭಾಗಗಳಿಂದ ಪ್ರಕರಣಗಳು ಪರೀಕ್ಷೆಗೆ ಬರಲಿವೆ. ಒಂದು ತಿಂಗಳೊಳಗೆ ಪರೀಕ್ಷೆ ನಡೆಸಿ ವರದಿ ನೀಡುವ ಪ್ರಯತ್ನ ಇಲಾಖೆಯದ್ದಾಗಿದೆ.

    ಬಳ್ಳಾರಿ ವಲಯಕ್ಕೆ ಪ್ರಥಮ ಕೊಡುಗೆ

    ರಾಜ್ಯದ ಪೊಲೀಸ್ ಇಲಾಖೆಯ ಬಳ್ಳಾರಿ ವಲಯ ಬಿಟ್ಟು ಎಲ್ಲ ವಲಯಗಳಲ್ಲಿ ಆರ್​ಎಫ್​ಎಸ್​ಎಲ್ ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಬಳ್ಳಾರಿ ವಲಯದಲ್ಲಿ ಪ್ರಥಮ ಆರ್​ಎಫ್​ಎಸ್​ಎಲ್ ಆರಂಭಿಸಲಾಗುತ್ತಿದೆ ಎನ್ನುತ್ತಾರೆ ಎಫ್​ಎಸ್​ಎಲ್ ನಿರ್ದೇಶಕ ವಿನಾಯಕ ಪಾಟೀಲ.

    ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಆರ್​ಎಫ್​ಎಸ್​ಎಲ್ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕಾಗಿ ಕೆಲ ಕಟ್ಟಡಗಳನ್ನೂ ಗುರುತಿಸಲಾಗಿದೆ. ಸರ್ಕಾರದ ಒಪ್ಪಿಗೆ ಸಿಕ್ಕ ಕೂಡಲೆ ಕಾರ್ಯಾರಂಭ ಮಾಡಲಾಗುವುದು.

    | ವಿನಾಯಕ ಪಾಟೀಲ, ನಿರ್ದೇಶಕ, ಎಫ್​ಎಸ್​ಎಲ್

    ಹುಬ್ಬಳ್ಳಿಯಲ್ಲಿ ಆರ್​ಎಫ್​ಎಸ್​ಎಲ್ ಆರಂಭವಾಗುತ್ತಿದ್ದು, ಸ್ಥಳ ಪರಿಶೀಲನೆ ಬಾಕಿ ಇದೆ. ಶೀಘ್ರವೇ ಸ್ಥಳ ಅಂತಿಮಗೊಳ್ಳಲಿದೆ. ಈ ಕೇಂದ್ರದಿಂದ ಉತ್ತರ ಕರ್ನಾಟಕ ಭಾಗದ ಅಪರಾಧ ಪ್ರಕರಣಗಳ ತನಿಖೆಗೆ ಬಹಳಷ್ಟು ಅನುಕೂಲವಾಗಲಿದೆ.

    | ಆರ್.ಬಿ. ಬಸರಗಿ, ಡಿಸಿಪಿ, ಅಪರಾಧ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts