More

    ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 8ರಿಂದ

    ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಡಿ. 8ರಿಂದ 10ರವರೆಗೆ ಕರ್ನಾಟಕ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಎಂ.ಎ. ಮುಮ್ಮಿಗಟ್ಟಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ, ಕೀನ್ಯಾ, ಮಾಲ್ಡೀವ್ಸ್ ಹಾಗೂ ದೇಶದ ವಿವಿಧ ಭಾಷೆಯ ಚಲನಚಿತ್ರ, ಕಿರುಚಿತ್ರ, ಟೆಲಿಚಿತ್ರ ಹಾಗೂ ಅಲ್ಬಮ್ ಹಾಡುಗಳು ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಒಟ್ಟು 186 ಚಿತ್ರಗಳು ನೋಂದಾಯಿಸಿದ್ದು, 75-80 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಿದ್ದೇವೆ ಎಂದು ಹೇಳಿದರು.

    ಸವಾಯಿ ಗಂಧರ್ವ ಸಭಾಭವನದಲ್ಲಿ 3 ಪರದೆಗಳಲ್ಲಿ ಹಾಗೂ ಧಾರವಾಡದ ವಿದ್ಯಾವರ್ಧಕ ಸಂಘ ಹಾಗೂ ರಂಗಾಯಣದಲ್ಲಿ ತಲಾ 1 ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿವೆ. ಡಿ. 8ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಇರಲಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ, ಹಿರಿಯ ನಟರಾದ ದೊಡ್ಡಣ್ಣ, ಭವ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾ.ಮಾ. ಹರೀಶ ಅವರನ್ನು ಆಹ್ವಾನಿಸಿದ್ದೇವೆ. ಅಂದು ಮಧ್ಯಾಹ್ನ 2ರಿಂದ 10ರವರೆಗೆ, 9ರಂದು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಹಾಗೂ 10ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಗೆಯವರೆಗೆ ಚಿತ್ರಗಳ ಪ್ರದರ್ಶನ ಇರಲಿದೆ. 10ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಉಪಾಧ್ಯಕ್ಷ ಎಂ.ಎಸ್. ಮುಳಮುತ್ತಲ, ನಿರ್ದೇಶಕರಾದ ಡಾ. ವಿಶ್ವನಾಥ ಪಲ್ಲೇದ, ರವೀಂದ್ರ ಪೋಸ್ಕರ್, ಸಂಗೀತಾ ದೇವಿದಾಸ, ಅರುಣಾ ಹಾಗೂ ಬಶೀರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts