More

    ಹುಡಾದಿಂದ ಅನಧಿಕೃತ ಲೇಔಟ್ ತೆರವು

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಕಾನೂನು, ನಿಯಮಾವಳಿಗಳನ್ನು ಗಾಳಿಗೆ ತೂರಿ ದರ್ಪದಿಂದ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಲೇಔಟ್​ಗಳ ವಿರುದ್ಧ ಕೊನೆಗೂ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಾರ್ಯಾಚರಣೆಗೆ ಇಳಿದಿದೆ.

    ತೋಳ್ಬಲ, ಹಣಬಲ ಬಳಸಿಕೊಂಡು ನಮ್ಮನ್ಯಾರು ಕೇಳೋರು… ಎಂದು ಜಂಬ ಕೊಚ್ಚಿಕೊಂಡು ಬೇಕಾಬಿಟ್ಟಿ ಲೇಔಟ್ ಮಾಡಿ ದುಡ್ಡು ಮಾಡಿಕೊಳ್ಳುವ ಹುನ್ನಾರ ನಡೆಸಿದ್ದವರಿಗೆ ಬಿಸಿ ಮುಟ್ಟಿಸಲಾಗುತ್ತಿದೆ.

    ಈ ಹಿಂದೆಯೂ ಅನೇಕ ಸಲ ಅನಧಿಕೃತ ಲೇಔಟ್​ಗಳನ್ನು ಮುಲಾಜಿಲ್ಲದೇ ಕಿತ್ತೊಗೆಯಲಾಗಿತ್ತು. ಆದರೂ, ಬುದ್ಧಿ ಕಲಿಯದ ಜನರು ಅವಳಿ ನಗರದಲ್ಲಿ ಮತ್ತೆ ಅಕ್ರಮಕ್ಕೆ ಕೈಹಾಕಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಒಟ್ಟು 57 ಅಕ್ರಮ ಲೇಔಟ್​ಗಳನ್ನು ಪ್ರಾಧಿಕಾರ ಗುರುತು ಮಾಡಿ, ಇದೀಗ ಮತ್ತೆ ಕಾರ್ಯಾಚರಣೆಗೆ ಇಳಿದಿದೆ.

    ಅನಧಿಕೃತ ಲೇಔಟ್​ಗಳನ್ನು ಮಾಡಿದವರಿಗೆ ಸಾಕಷ್ಟು ಸಲ ತಿಳಿವಳಿಕೆ ನೀಡಿ ಕಾನೂನು ಬದ್ಧ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ, ಅವರು ಸೊಪ್ಪು ಹಾಕದಿರುವುದರಿಂದ ಸಮರ ಸಾರಲಾಗಿದೆ.

    2 ಜೆಸಿಬಿಗಳ ಮೂಲಕ ಇಲ್ಲಿಯ ಗಬ್ಬೂರ ಹಾಗೂ ರಾಯನಾಳ ಸರಹದ್ದಿನಲ್ಲಿ ಬರುವ 6 ಲೇಔಟ್​ಗಳನ್ನು 2 ದಿನದಲ್ಲಿ ಕಿತ್ತು ಹಾಕಲಾಗಿದೆ. ಅಲ್ಲಿ ಕಚ್ಚಾ ರಸ್ತೆ, ಗಟಾರು, ನೀರಿನ ಪೈಪ್​ಲೈನ್ ಹಾಕಿ ವ್ಯವಸ್ಥೆ ಕಲ್ಪಿಸಲಾಗಿತ್ತು. ನಿಯಮಾವಳಿ ಪ್ರಕಾರ ರಸ್ತೆ, ಗಾರ್ಡನ್, ಸಿಎ ನಿವೇಶನ ಬಿಟ್ಟಿರಲಿಲ್ಲ. ಅಲ್ಲದೆ, ಯಾವುದೇ ಪರವಾನಗಿ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ. ಹಾಗಾಗಿ ಅಂತಹ ಅಕ್ರಮ ಲೇಔಟ್​ಗಳ ವಿರುದ್ಧ ಕಾರ್ಯಾಚರಣೆ ಶುರು ಮಾಡಿದ್ದೇವೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ‘ವಿಜಯವಾಣಿ’ಗೆ ತಿಳಿಸಿದರು.

    ಇನ್ನೂ 15 ದಿನ ಅಕ್ರಮ ಲೇಔಟ್ ತೆರವು ಕಾರ್ಯಾಚರಣೆ ನಡೆಯಲಿದೆ. ಆಯುಕ್ತ ಎನ್.ಎಚ್. ಕುಮ್ಮನ್ನವರ, ನಗರ ಯೋಜನಾ ಸದಸ್ಯ ವಿವೇಕ ಕಾರೇಕರ ಹಾಗೂ ಅಧಿಕಾರಿಗಳೊಂದಿಗೆ ನಿತ್ಯ ಸಭೆ ಮಾಡಿ ಎಲ್ಲೆಲ್ಲಿ ಕಾರ್ಯಾಚರಣೆ ನಡೆಸಬೇಕು ಎಂಬ ಪೂರ್ವಸಿದ್ಧತೆ ಮಾಡಿಕೊಂಡು ಮುಂದಡಿ ಇಡುತ್ತೇವೆ. 10 ದಿನ ಧಾರವಾಡದಲ್ಲಿಯೇ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದರು.

    ಧಾರವಾಡದಲ್ಲೇ ಹೆಚ್ಚು: ಧಾರವಾಡದಲ್ಲಿ ಅಕ್ರಮ ಲೇಔಟ್​ಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಧಾರವಾಡ ಸುತ್ತಮುತ್ತ ಹಾಗೂ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಲೇಔಟ್ ಮಾಡಲು ಕೆಲವರು ಹೊಂಚು ಹಾಕಿಕೊಂಡು ಕಲ್ಲು ನೆಟ್ಟಿದ್ದಾರೆ. ಆದರೆ, ಅವರ್ಯಾರೂ ಪರವಾನಗಿ ಪಡೆದುಕೊಂಡಿಲ್ಲ.

    ಅಪಾಯಕಾರಿ: ಅಕ್ರಮ, ಅನಧಿಕೃತ ಲೇಔಟ್​ನಲ್ಲಿ ನಿವೇಶನ ಕೊಳ್ಳುವುದು ಬಹಳ ಅಪಾಯಕಾರಿ. ಕೇವಲ 50- 100 ರೂ. ಬಾಂಡ್ ಪೇಪರ್​ನಲ್ಲಿ ಬರೆದುಕೊಡುವ ಮಾಲೀಕರು, ಖರೀದಿದಾರರಿಗೆ ನೋಂದಣಿ ಮಾಡಿಕೊಡುವುದಿಲ್ಲ. ನಿವೇಶನ ಪಡೆದವರೂ ನಿಷ್ಕಾಳಜಿ ತೋರುತ್ತಾರೆ. ಮುಂದೊಂದು ದಿನ ಅದೇ ಜಾಗವನ್ನು ಮೂಲ ಮಾಲೀಕರು ಅಥವಾ ಅವರ ಮನೆಯ ಸದಸ್ಯರು ಬೇರೊಬ್ಬರಿಗೆ ಮಾರಾಟ ಮಾಡಬಹುದು. ಹಾಗಾಗಿ ನಿವೇಶನ ಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ಹುಡಾ ಅಧ್ಯಕ್ಷರು ಮನವಿ ಮಾಡಿದ್ದಾರೆ.

    ಮನವಿ ಮಾಡಿದ ಮಾಲೀಕರು: ಅನಧಿಕೃತ ಲೇಔಟ್ ವಿರುದ್ಧ ಹುಡಾ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಅವುಗಳ ಮಾಲೀಕರು ಓಡಿ ಬಂದಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ ಲೇಔಟ್​ಗಳನ್ನು ಸಕ್ರಮ ಮಾಡಿಕೊಳ್ಳುತ್ತೇವೆ. ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಯನಾಳ ಸರಹದ್ದಿನಲ್ಲಿ ಅರ್ಧಕ್ಕೆ ಕೈಬಿಟ್ಟು ಅವಕಾಶ ನೀಡಲಾಗಿದೆ. ಕಾನೂನುಬದ್ಧ ಮಾಡಿಕೊಳ್ಳಲು ಅವಕಾಶ ಇರುವ ಕಡೆಗಳಲ್ಲಿ ಕಾರ್ಯಾಚರಣೆ ನಿಲ್ಲಿಸಿ ಒಂದಿಷ್ಟು ದಿನ ಕಾಯುತ್ತೇವೆ ಎಂದು ಕಲಬುರ್ಗಿ ಹೇಳಿದರು.

    ಅನಧಿಕೃತ ಲೇಔಟ್ ವಿರುದ್ಧ ಎರಡು ಜೆಸಿಬಿಯೊಂದಿಗೆ ನಮ್ಮ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿದೆ. ಈಗಾಗಲೇ ಗುರುತಿಸಲಾಗಿರುವ 57 ಅಕ್ರಮ ಲೇಔಟ್​ಗಳಲ್ಲಿ ನೆಟ್ಟ ಕಲ್ಲು, ನಿರ್ವಿುಸಿದ ಗಟಾರು, ರಸ್ತೆ, ಪೈಪ್​ಲೈನ್ ಎಲ್ಲ ತೆಗೆದು ಹಾಕುತ್ತೇವೆ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಸಕ್ರಮ ಮಾಡಿಕೊಳ್ಳುವವರಿಗೆ ಈಗಲೂ ಅವಕಾಶ ಇದೆ. | ನಾಗೇಶ ಕಲಬುರ್ಗಿ ಹುಡಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts