More

    ಹಿರೇಕೆರೂರ ಪಟ್ಟಣ ಪಂಚಾಯಿತಿಯಲ್ಲಿ 3.52 ಲಕ್ಷ ರೂಪಾಯಿ ಉಳಿತಾಯ ಮುಂಗಡಪತ್ರ ಮಂಡನೆ

    ಹಿರೇಕೆರೂರ: ಪಟ್ಟಣ ಪಂಚಾಯಿತಿಯ 2021-22ನೇ ಸಾಲಿನ 3. 52 ಲಕ್ಷ ರೂಪಾಯಿ ಉಳಿತಾಯ ಮುಂಗಡಪತ್ರವನ್ನು ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ ಅವರು ಬುಧವಾರ ಮಂಡಿಸಿದರು.

    ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ ವಿವರಣೆ ನೀಡಿದ ಅವರು, ವಿವಿಧ ಆದಾಯ ಮೂಲಗಳಿಂದ ಒಟ್ಟು 12.49ಕೋಟಿ ರೂಪಾಯಿ ಸಂಗ್ರಹದ ನಿರೀಕ್ಷೆಯಿದೆ. ಅದರಲ್ಲಿ 12.46 ಕೋಟಿ ರೂಪಾಯಿ ವ್ಯಯಿಸಲು ಯೋಜಿಸಲಾಗಿದ್ದು, 3,52,200ರೂ. ಉಳಿತಾಯವಾಗುವ ನಿರೀಕ್ಷೆ ಇದೆ ಎಂದ ಅವರು ಆದಾಯ ಮತ್ತು ವೆಚ್ಚದ ವಿವರಣೆ ನೀಡಿದರು.

    ಲೆಕ್ಕಪಾಲಕ ನಾಗರಾಜ ಶ್ಯಾಮನೂರು ಮಾತನಾಡಿ, 2015-16ರಿಂದ ಇಲ್ಲಿಯವರೆಗೆ 30 ಪೌರಕಾರ್ವಿುಕರಿಗೆ ತುರ್ತು ಪರಿಸ್ಥಿತಿಯಲ್ಲಿ ಉಪಯೋಗವಾಗಲು ಪ್ರತಿ ತಿಂಗಳು ನೀಡುವ ವೇತನದಲ್ಲಿ 2 ಸಾವಿರ ರೂಪಾಯಿ ಪಿ.ಎಫ್. ಕಡಿತಗೊಳಿಸಲಾಗಿದೆ. ಪೌರಕಾರ್ವಿುಕರನ್ನು ನೇಮಕ ಮಾಡಿದ ಗುತ್ತಿಗೆದಾರರು ಬರೋಬ್ಬರಿ 33 ಲಕ್ಷ ರೂಪಾಯಿ ಪಿ.ಎಫ್ ತುಂಬದಿರುವುದರಿಂದ ಸಮಸ್ಯೆಯಾಗಿದೆ. ಕೂಡಲೆ ಗಮನಹರಿಸಬೇಕು ಎಂದು ಸಭೆಗೆ ಮಾಹಿತಿ ನೀಡಿದರು.

    ಸಮ್ಮತಿಸಿದ ಅಧ್ಯಕ್ಷ, ಗುತ್ತಿಗೆದಾರರೊಂದಿಗೆ ರ್ಚಚಿಸಿ ಹಣ ಪಾವತಿಸುವಂತೆ ತಿಳಿಸಬೇಕು. ಪಾವತಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು. ಚಾಲಕರಿಲ್ಲದೆ ಕಸ ಸಾಗಿಸುವ ಎರಡು ಹೊಸ ಟಾಟಾ ಮಿನಿ ಗೂಡ್ಸ್, ಒಂದು ಜೆಸಿಬಿ 6 ತಿಂಗಳಿಂದ ನಿಂತಲ್ಲೇ ನಿಂತಿವೆ ಎಂದು ಹನುಮಂತಪ್ಪ ಕುರಬರ, ಕಂಠಾಧರ ಅಂಗಡಿ ಪ್ರಸ್ತಾಪಿಸಿದರು. ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಮೇಲಧಿಕಾರಿಗಳಿಗೆ ತಿಳಿಸಿ ವಾರದೊಳಗೆ ಚಾಲಕರನ್ನು ನೇಮಿಸಲಾಗುವುದು ಎಂದರು.

    ವಿಜಯಶ್ರೀ ಬಂಗೇರ ಮಾತನಾಡಿ, ಪೌರಕಾರ್ವಿುಕರಿಗೆ ಸಮವಸ್ತ್ರ, ರಕ್ಷಣಾ ಸಾಮಗ್ರಿ ನೀಡಿದ್ದರೂ ಉಪಯೋಗಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರತಿಕ್ರಿಯಿಸಿದ ಆರೋಗ್ಯ ಕಿರಿಯ ನಿರೀಕ್ಷಕಿ ಮಮತಾ ಪಾಟೀಲ, ಕೆಲವರು ಸಮವಸ್ತ್ರ, ಬೂಟು, ಕೈಗವಸು ಧರಿಸುತ್ತಿಲ್ಲ. ಈ ಬಗ್ಗೆ ಹಿಂದಿನ ತಹಸೀಲ್ದಾರ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರು. ಧರಿಸದವರಿಗೆ 2 ದಿನಗಳ ವೇತನ ಕಡಿತಗೊಳಿಸುವಂತೆ ತಿಳಿಸಿದ್ದರು. ಅದರಂತೆ ಕೆಲ ಕಾರ್ವಿುಕರ 2 ದಿನಗಳ ವೇತನ ಕಡಿತಗೊಳಿಸಲಾಗಿದೆ. ಗಿಡ, ಹುಲ್ಲು ಕತ್ತರಿಸುವ ಯಂತ್ರ ಕೆಟ್ಟಿದೆ. ಕೂಡಲೆ ದುರಸ್ತಿಗೊಳಿಸಲಾಗುವುದು ಎಂದರು.

    ಮಹೇಂದ್ರ ಬಡಳ್ಳಿ ಮಾತನಾಡಿ, ದುರ್ಗಾದೇವಿ ಜಾತ್ರೆ ಮುಗಿದ ನಂತರ ಪಟ್ಟಣದ ಚರಂಡಿಗಳನ್ನು ಸ್ವಚ್ಛಗೊಳಿಸಿ ಫಾಗಿಂಗ್ ಮಾಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಂತರ ವಿವಿಧ ವಿಷಯ ಕುರಿತು ರ್ಚಚಿಸಲಾಯಿತು. ಪಪಂ ಉಪಾಧ್ಯಕ್ಷೆ ಸುಧಾ ಚಿಂದಿ, ಸದಸ್ಯರಾದ ಅಲ್ತಾಫಖಾನ್ ಪಠಾಣ, ಕುಸುಮಾ ಬಣಕಾರ, ಚಂದ್ರಕಲಾ ಕೋರಿಗೌಡ್ರ, ದಿಲ್​ಶಾದ್ ಬಳಿಗಾರ, ಬಸವರಾಜ ಕಟ್ಟಿಮನಿ, ಹರೀಶ ಕಲಾಲ್, ಪೂಜಾ ತಂಬಾಕದ, ರಾಜು ಕರಡಿ, ಕವಿತಾ ಹಾರ್ನಳ್ಳಿ, ರಮೇಶ ಕೋಡಿಹಳ್ಳಿ, ಸನಾವುಲ್ಲಾ ಮಕಾಂದಾರ, ಶಂಶಾದ ಕುಪ್ಪೇಲೂರ, ಅಧಿಕಾರಿಗಳಾದ ಮಮತಾ ಪಾಟೀಲ, ಎಂ.ಪಿ. ಎಲ್ಲಣ್ಣನವರ, ಹಾಲೇಶ ಎನ್, ಶಂಭು ವಾಳದ, ಗಾಯಿತ್ರಿ ಬಿಳಚಿ, ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts