More

    ಹಿಂದು ಧರ್ಮದ ಪದ್ಧತಿಯಂತೆ ಅಂತಿಮ ಸಂಸ್ಕಾರ

    ಕುಂದಗೋಳ: ಧಾರವಾಡ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟ ಪಟ್ಟಣದ ಶಿವಾನಂದ ಮಠದ ಪೀಠಾಧಿಪತಿ, ಯೋಗ ಗುರು ಬಸವೇಶ್ವರ ಸ್ವಾಮೀಜಿ ಅಂತಿಮ ಸಂಸ್ಕಾರವನ್ನು ಜಿಎಸ್​ಎಸ್ ವಿದ್ಯಾಪೀಠದ ಆವರಣದಲ್ಲಿ ಭಾನುವಾರ ರಾತ್ರಿ 12ಕ್ಕೆ ಹಿಂದು ಧರ್ಮದ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು.

    ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಗೋಕಾಕ ತಾಲೂಕಿನ ಘೊಡಗೇರಿಯ ಶಿವಾನಂದ ಮಠದ ಪರಂಪಂರೆಯ ಶ್ರೀ ಮಲ್ಲಯ್ಯ ಸ್ವಾಮಿಗಳ ಮಾರ್ಗದರ್ಶನ ಹಾಗೂ ಎಲ್ಲ ಶ್ರೀಗಳ ಸಮ್ಮುಖದಲ್ಲಿ ಬಸವೇಶ್ವರ ಶ್ರೀಗಳ ಪಾರ್ಥಿವ ಶರೀರಕ್ಕೆ ಶಿವಲಿಂಗ ಕ್ರಿಯಾ ಸಂಸ್ಕಾರ ವಿಭೂತಿ, ಬಿಲ್ವಪತ್ರಿ ಮುಖಾಂತರ ಅಂತ್ಯ ಸಂಸ್ಕಾರ ನೆರವೇರಿತು.

    ಮಲ್ಲಯ್ಯ ಸ್ವಾಮೀಜಿ ತಾತ್ಕಾಲಿಕ ಉತ್ತರಾಧಿಕಾರಿ: ಕುಂದಗೋಳ ಶಿವಾನಂದ ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ನೇಮಿಸುವವರೆಗೂ ಗೋಕಾಕ ತಾಲೂಕಿನ ಘೊಡಗೇರಿಯ ಶಿವಾನಂದ ಮಠದ ಪರಂಪರೆಯ ಶ್ರೀ ಮಲ್ಲಯ್ಯ ಸ್ವಾಮಿಗಳು ಮಠ ಹಾಗೂ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರು ವಿನಂತಿಸಿದರು. ಪೂಜ್ಯರ ಸೂಚನೆ ಮೇರೆಗೆ ನೂತನ ಉತ್ತರಾಧಿಕಾರಿ ನೇಮಿಸುವವರೆಗೆ ಮಠದ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಶ್ರೀ ಮಲ್ಲಯ್ಯ ಸ್ವಾಮಿಗಳು ಒಪ್ಪಿಗೆ ಸೂಚಿಸಿದರು. ಫೆ. 24ರಂದು ಶ್ರೀಗಳ ಪುಣ್ಯಾರಾಧನೆ ಮಾಡಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.

    ಶ್ರೀಮಠಕ್ಕೆ ಹರಿದು ಬಂದ ಭಕ್ತ ಸಾಗರ: ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಮಠಕ್ಕೆ ಭಕ್ತ ಸಮೂಹ, ಗಣ್ಯರು ಧಾವಿಸಿ ಬಂದರು. ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಕುಂದಗೋಳ ಪಟ್ಟಣದ ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಸ್ವಾಮೀಜಿ, ಶಿರಹಟ್ಟಿಯ ಶ್ರೀ ಫಕೀರೇಶ್ವರ ಸ್ವಾಮೀಜಿ, ಕಲ್ಯಾಣಪುರದ ಶ್ರೀ ಬಸವಣ್ಣಜ್ಜ, ಇಬ್ರಾಹಿಂಪುರದ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ, ಶಿಶಿವಿನಹಳ್ಳಿಯ ಶಾಂತಮ್ಮ ತಾಯಿ, ಗದಗಿನ ಶ್ರೀ ಕೈವಲ್ಯಾನಂದ ಸ್ವಾಮೀಜಿ, ಅಣ್ಣಿಗೇರಿಯ ಶ್ರೀ ಶಿವಕುಮಾರ ಸ್ವಾಮೀಜಿ, ಹನುಮನಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ ಪಾಲ್ಗೊಂಡಿದ್ದರು. ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್. ಅಕ್ಕಿ, ವಿನಯ ಕುಲಕರ್ಣಿ, ಪಿ.ಸಿ. ಸಿದ್ದನಗೌಡ್ರ, ಮುಖಂಡರಾದ ಅರವಿಂದ ಕಟಗಿ, ಸದಾನಂದ ಡಂಗನವರ, ಎಂ.ಆರ್. ಪಾಟೀಲ, ಈಶ್ವರಯ್ಯ ನಾವಳ್ಳಿಮಠ, ಗಂಗಾಧರ ಕುನ್ನೂರ, ಬಾಬಣ್ಣ ಧಾರವಾಡಶೆಟ್ಟರ, ಎ.ಬಿ. ಉಪ್ಪಿನ, ಪ್ರಕಾಶಗೌಡ ಪಾಟೀಲ, ಬಸನಗೌಡ ಕರೆಹೊಳಲಪ್ಪಗೌಡ್ರ, ಚಂದ್ರಶೇಖರ ಜುಟ್ಟಲ್, ರಮೇಶ ಕೊಪ್ಪದ, ಮಲ್ಲಿಕಾರ್ಜುನ ಕಿರೇಸೂರ, ವೀರೇಶ ಸೊಬರದಮಠ, ಶಿವಾನಂದ ಬೆಂತೂರ ಮತ್ತಿತರ ಗಣ್ಯರು ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts