More

    ಹಿಂದುಳಿದ ಪ್ರವರ್ಗಗಳಲ್ಲಿ ಬಲಾಢ್ಯರ  ಸೇರ್ಪಡೆಗೆ ವಿರೋಧ-26ರಂದು ಧರಣಿ 

    ದಾವಣಗೆರೆ: ವೈಜ್ಞಾನಿಕ ಅಧ್ಯಯನವಿಲ್ಲದೆ ಮುಂದುವರಿದ ಜಾತಿಗಳನ್ನು ಹಿಂದುಳಿದ ಪ್ರವರ್ಗಗಳಲ್ಲಿ ಸೇರ್ಪಡೆ ಮಾಡುವುದನ್ನು ವಿರೋಧಿಸಿ ದಾವಣಗೆರೆ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಡಿ.26ರಂದು ಬೆಳಗಾವಿ ಸುವರ್ಣಸೌಧ ಬಳಿಯ ಕೊಂಡಸ್‌ಕೊಪ್ಪದಲ್ಲಿ ಧರಣಿ ಹಮ್ಮಿಕೊಂಡಿದೆ.
    ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಸಮಾಜದವರು ಈ ಧರಣಿಯಲ್ಲಿ ಭಾಗವಹಿಸಬೇಕೆಂದು ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ ಡಿ. ಗುಬ್ಬಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    ಅನೇಕ ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲನ್ನು ಅಚ್ಚುಕಟ್ಟಾಗಿ ಜಾರಿ ಮಾಡಿದ್ದರೂ ರಾಜಕೀಯ ತೀರ್ಮಾನಗಳಿಂದಾಗಿ ಬಲಾಢ್ಯರು ಮೀಸಲು ಪಡೆದು ಶೋಷಿತರ ಪಾಲನ್ನು ಕಬಳಿಸುವುದು ಸರಿಯಲ್ಲ ಎಂದರು.
    ರಾಜ್ಯದಲ್ಲಿ ಸಾಮಾಜಿಕ ಸ್ಥಿತಿಗತಿ ಆಧರಿಸಿ ಮೀಸಲು ವರ್ಗೀಕರಣ ಆಗಲಿದೆ. ಆದರೆ ಕೆಲವು ಬಲಾಢ್ಯ ಜಾತಿಗಳು ಅತಿ ಹಿಂದುಳಿದ ಪ್ರವರ್ಗ 1, 2ಎ ನಲ್ಲಿ ಕಾನೂನುಬಾಹಿರವಾಗಿ ಮೀಸಲು ಪಡೆಯುತ್ತಿವೆ. ಕೆಲವು ಬಲಾಢ್ಯ ವರ್ಗಗಳಿಗೆ ಶೇ.9ರಷ್ಟು ಮೀಸಲಿದ್ದರೂ ಇತರರ ಬುಟ್ಟಿಗೆ ಕೈ ಹಾಕುವುದು ಸರಿಯಲ್ಲ ಎಂದರು.
    ಪ್ರವರ್ಗ 3ಬಿಯಲ್ಲಿ ಶೇ.5ರಷ್ಟು ಹಾಗೂ ಸಾಮಾನ್ಯ ವರ್ಗದ ಶೇ.50ರಲ್ಲಿ ತಮ್ಮ ಪಾಲನ್ನು ಪಡೆಯುತ್ತಿದ್ದರೂ 104 ಜಾತಿಗಳುಳ್ಳ ಪ್ರವರ್ಗ 2ಎ ಮೇಲೆ ಇತರೆ ಸಮಾಜದವರು ಕಣ್ಣು ಹಾಕುವುದು ಸರಿಯಲ್ಲ. 2ಎ ವ್ಯಾಪ್ತಿಯಲ್ಲಿ ಶೇ.15ರಷ್ಟು ಮೀಸಲಿದೆ. ಇತರೆ ಬಲಾಢ್ಯರ ಸೇರ್ಪಡೆಯಾದಲ್ಲಿ ಈಗಿರುವ ಜಾತಿಗಳಿಗೆ ಸೌಲಭ್ಯ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಸರ್ಕಾರ ಬಿಡುಗಡೆಗೊಳಿಸಬೇಕು. ಅಲ್ಲಿನ ವೈಜ್ಞಾನಿಕ ಅಂಕಿ ಅಂಶ ಆಧರಿಸಿ ನೂತನ ಮೀಸಲು ಪ್ರಕಡಿಸಬೇಕೆಂದು ಆಗ್ರಹಿಸಿ ಈ ಧರಣಿ ನಡೆಸಲಾಗುವುದು ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಡೈಮಂಡ್ ಮಂಜುನಾಥ್, ಪರಶುರಾಂ. ಕೆ. ರೇವಣಸಿದ್ದಪ್ಪ, ಎಸ್.ಎಸ್.ಗಿರೀಶ್, ಗಜೇಶಂದ್ರ ಆರ್. ಜಗನ್ನಾಥ್ ಇದ್ದರು./

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts