More

    ಹಿಂದುಗಳು ಶಾಂತಿಪ್ರಿಯರು

    ಆಳಂದ: ಹಿಂದು ಕಾರ್ಯಕರ್ತರು ಶಾಂತಿಪ್ರಿಯರಾಗಿದ್ದು, ಯಾವತ್ತೂ ಅಶಾಂತಿ ಮೂಡಿಸುವ ಕೆಲಸ ಮಾಡಲ್ಲ. ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀರಾಮ ಉತ್ಸವಕ್ಕೆ ಇಷ್ಟೆಲ್ಲ ಭದ್ರತೆ ಬೇಕಿರಲಿಲ್ಲ ಎಂದು ಶಾಸಕ ಸುಭಾಷ ಗುತ್ತೇದಾರ್ ಅಭಿಪ್ರಾಯಪಟ್ಟರು.

    ಪಟ್ಟಣದ ಶ್ರೀರಾಮ ಮಾರ್ಕೇಟ್​ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀರಾಮ ನವಮಿ ಉತ್ಸವದ ಮೆರವಣಿಗೆಗೆ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ವಿನಾಕಾರಣ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದರು.

    ಹಿಂದುಪರ ಸಂಘಟನೆ ಕಾರ್ಯಕರ್ತರು ಕಾನೂನು ಉಲ್ಲಂಘನೆ ಮಾಡುವವರಲ್ಲ. ಆದರೆ ಪೊಲೀಸ್ ಇಲಾಖೆಯವರು ತಮ್ಮ ಅನುಕೂಲಕ್ಕಾಗಿ ಸಿಸಿ, ಡ್ರೋನ್ ಕ್ಯಾಮರಾ ಅಳವಡಿಸುವುದರ ಜತೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಿದ್ದಾರೆ. ಪಟ್ಟಣದಲ್ಲಿ ಪ್ರಥಮ ಬಾರಿಗೆ ಈ ಉತ್ಸವ ಆಯೋಜಿಸಲಾಗಿದೆ. ಶ್ರೀರಾಮ ಪ್ರತಿಮೆ ಮೆರವಣಿಗೆ ನಡೆದಿದೆ ಹೊರತು, ಯಾವುದೇ ಬಹಿರಂಗ ಸಭೆ ನಡೆಯುತ್ತಿಲ್ಲ ಎಂದರು.

    ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಪ್ರಮುಖರಾದ ಹರ್ಷಾನಂದ ಗುತ್ತೇದಾರ್, ಆನಂದರಾವ ಪಾಟೀಲ್, ಶ್ರೀಶೈಲ ಖಜೂರಿ, ಮಲ್ಲಿಕಾರ್ಜುನ ಕಂದಗೂಳೆ, ಸಿದ್ದು ಹಿರೋಳ್ಳಿ, ವಿಜಯಕುಮಾರ ಕೋಥಳಿಕರ್, ಮಹೇಶ ಗೌಳಿ ಇತರರಿದ್ದರು.

    ಅಂಗಡಿಗಳನ್ನು ಬಂದ್ ಮಾಡಿದ ಮುಸ್ಲಿಮರು
    ಶ್ರೀರಾಮನ ಪ್ರತಿಮೆ ಭವ್ಯ ಮೆರವಣಿಗೆ ನಿಮಿತ್ತ ಆಳಂದದಲ್ಲಿರುವ ಮುಸ್ಲಿಮ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿದ್ದರು. ಇದರಿಂದಾಗಿ ಮಾರ್ಕೇಟ್​ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡುಬಂದಿತು. ಯಾವುದೇ ಅವಘಡ ಸಂಭವಿಸದಿರಲಿ ಎಂಬ ಉದ್ದೇಶದಿಂದ ಲಾಡ್ಲೆ ಮಶಾಕ್ ದರ್ಗಾ ಸೇರಿ ಹಲವು ಮಸೀದಿಗಳ ಮುಂದೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

    ಕಾರ್ಯಕತರೊಂದಿಗೆ ಗುತ್ತೇದಾರ್ ಹೆಜ್ಜೆ
    ಶಾಸಕ ಸುಭಾಷ ಗುತ್ತೇದಾರ್ ಹಿಂದು ಕಾರ್ಯಕರ್ತರ ಜತೆ ಕೆಲ ಕ್ಷಣ ಕುಣಿದು ಸಂಭ್ರಮಿಸಿದರು. ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ ಕಾರ್ಯಕರ್ತರ ಮಧ್ಯೆ ಬಂದ ಅವರು, ಎಲ್ಲರೊಂದಿಗೆ ಹೆಜ್ಜೆ ಹಾಕಿದರು. ಇದೇ ವೇಳೆ ಕೆಲವರು ಶಾಸಕರನ್ನು ಹೆಗಲ ಮೇಲೆ ಹೊತ್ತುಕೊಂಡು ಖುಷಿ ಪಟ್ಟರು.

    ಈ ಹಿಂದೆ ಆಳಂದದಲ್ಲಿ ದೊಡ್ಡ ಗಲಾಟೆ ಆಗಿತ್ತು, ಮತ್ತೊಮ್ಮೆ ಅಹಿತಕರ ಘಟನೆ ಆಗಬಾರದು ಎಂಬ ಕಾರಣಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮೆರವಣಿಗೆಗೆ ಮಾತ್ರ ಅವಕಾಶ ಕೊಟ್ಟಿದ್ದೇವೆ.
    | ಇಶಾ ಪಂತ್
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


    ಕ್ಯಾಮರಾ ಕಣ್ಗಾವಲು
    ಭದ್ರತೆಯಲ್ಲಿ ಒಂದಿಷ್ಟೂ ಲೋಪವಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಪಟ್ಟಣದ ವಿವಿಧೆಡೆ 85 ಸಿಸಿ ಕ್ಯಾಮರಾ ಅಳವಡಿಸುವುದರ ಜತೆಗೆ ಹೆಚ್ಚಿನ ನಿಗಾ ಇರಿಸಲು 5 ಡ್ರೋನ್ ಕ್ಯಾಮರಾಗಳನ್ನು ಮೆರವಣಿಗೆ ಮಾರ್ಗದಲ್ಲಿ ಹಾರಿ ಬಿಡಲಾಗಿತ್ತು. ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಮಂಜುನಾಥ ನೇತೃತ್ವದಲ್ಲಿ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಐವರು ಡಿವೈಎಸ್ಪಿ, 15 ಸಿಪಿಐ, 25 ಪಿಎಸ್ಐ, 750 ಪಿಸಿ, 5 ಕೆಎಸ್ಆರ್ಪಿ ತುಕಡಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ದಾಖಲೆಗಳೊಂದಿಗೆ ಆರೋಪ ಮಾಡುವುದನ್ನು ಕಲಿಯಿರಿ
    ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ಶಾಸಕ ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು. ಶ್ರೀರಾಮ ನವಮಿ ಉತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ನೇಮಕಾತಿ ಹಗರಣದಲ್ಲಿ ಸೇನೆ ಕಾರ್ಯಕರ್ತರು ಒಳಗೊಂಡಿದ್ದಾರೆ ಎಂದು ಆರೋಪಿಸಿರುವುದರಲ್ಲಿ ಹುರುಳಿಲ್ಲ. ದಾಖಲೆಗಳೊಂದಿಗೆ ಆರೋಪ ಮಾಡಬೇಕೆ ಹೊರತು, ಮನಬಂದಂತೆ ಮಾತನಾಡಿದರೆ ಸಾಲದು ಎಂದು ತಿರುಗೇಟು ನೀಡದರು. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಶಾಸಕ ಎಂ.ವೈ.ಪಾಟೀಲ್ ಅವರ ಗನ್​ಮ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್ ಹಾಗೂ ಆತನ ಸಹೋದರ ಆರ್.ಡಿ.ಪಾಟೀಲ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಶಾಸಕ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts