More

    ಹಾವೇರಿ ಜಿಲ್ಲೆಯಲ್ಲಿ ನಾಗರಪಂಚಮಿ ಸಂಭ್ರಮ

    ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಆಚರಿಸಲಾಯಿತು. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಆದರೆ, ಇದು ಹಬ್ಬದಾಚರಣೆಗೆ ಪರಿಣಾಮ ಬೀರಲಿಲ್ಲ. ಶುಕ್ರವಾರ ಬೆಳಗ್ಗೆಯಿಂದಲೇ ಪ್ರಮುಖ ದೇವಸ್ಥಾನ, ನಾಗದೇವರ ಕಟ್ಟೆ, ಅರಳಿಕಟ್ಟೆ, ಬನ್ನಿಮರಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗೆ ಹಾಲೆರೆದು ಭಕ್ತಿ ಸಮರ್ಪಿಸಿದರು. ನಾಗರಪಂಚಮಿ ನಿಮಿತ್ತ ದೇವರಿಗೆ ಉಂಡಿ, ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟಿನ ಉಂಡಿ, ಎಳ್ಳು ಉಂಡಿ, ಜೋಳದ ಅರಳು, ನೆನೆಸಿದ ಕಡಲೆ ಮೊದಲಾದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಿದರು. ಬಹುತೇಕ ಮನೆಗಳಲ್ಲಿ ಮಣ್ಣಿನ ಇಲ್ಲವೇ ಬೆಳ್ಳಿ-ಬಂಗಾರದ ನಾಗಮೂರ್ತಿ ಇಟ್ಟು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಮಕ್ಕಳು ಸಹ ಕೊಬ್ಬರಿ ಬಟ್ಟಲು ತಿರುಗಿಸುವ ಆಟ ಹಾಗೂ ಜೋಕಾಲಿ ಆಟವಾಡಿ ಸಂಭ್ರಮಿಸಿದರು.

    ಬೀಗರು ಬರಲಿಲ್ಲ: ಹೆಣ್ಣುಮಕ್ಕಳ ಹಬ್ಬ ಎಂದೇ ಕರೆಸಿಕೊಳ್ಳುವ ಪಂಚಮಿ ಹಬ್ಬಕ್ಕೆ ಮಹಿಳೆಯರು ಗಂಡನ ಮನೆಯಿಂದ ತವರಿಗೆ ಬಂದು ಹೊಸ ಸೀರೆ ಧರಿಸಿ ಸಂಭ್ರಮದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ, ಪಂಚಮಿ ಹಬ್ಬದ ಮುನ್ನಾದಿನ ರೊಟ್ಟಿ ಪಂಚಮಿ ಆಚರಿಸಿ ತಮ್ಮ ಮನೆಯಲ್ಲಿ ರೊಟ್ಟಿಯನ್ನು ಅಕ್ಕಪಕ್ಕದ ಮನೆಯವರಿಗೆ ಕೊಡುತ್ತಿದ್ದರು. ಆದರೆ, ಕರೊನಾ ವೈರಸ್ ಹರಡುವಿಕೆ ಹೆಚ್ಚಾಗಿರುವ ಪರಿಣಾಮ ಬೀಗರನ್ನು ಹಬ್ಬಕ್ಕೆ ಕರೆಯಲಿಲ್ಲ, ಕರೆದರೂ ಅವರು ಬರಲಿಲ್ಲ.

    ಮಣ್ಣಿನ ಹುತ್ತಗಳಿಗೆ ಹಾಲು, ತುಪ್ಪ
    ಬ್ಯಾಡಗಿ:
    ಕರೊನಾ ಭೀತಿ ಮಧ್ಯೆಯೂ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಗರಪಂಚಮಿಯನ್ನು ಶುಕ್ರವಾರ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

    ಹಬ್ಬದ ನಿಮಿತ್ತಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಹುತ್ತಗಳಿಗೆ ಹಾಲು, ತುಪ್ಪ ಎರೆದು ಪೂಜೆ ಸಲ್ಲಿಸಿದರು. ಪಟ್ಟಣ ಪ್ರದೇಶದ ದೇವಸ್ಥಾನಗಳಲ್ಲಿನ ನಾಗರಕಟ್ಟೆ ಹಾಗೂ ನಾಗಲಿಂಗದೇವರಿಗೆ ಹಾಲೆರೆದರು. ಶುಕ್ರವಾರ ಶುಕ್ರಗೌರಿ, ಮಂಗಳಗೌರಿ ಪೂಜೆ ವ್ರತ ಕೈಗೊಂಡ ಮಹಿಳೆಯರು, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಇಲ್ಲಿನ ವೀರಭದ್ರೇಶ್ವರ, ಸಿದ್ದೇಶ್ವರ, ಸಾಯಿ ಮಂದಿರ, ರೇಣುಕ ಮಂದಿರ, ಸಂಗಮೇಶ್ವರ, ದಾನಮ್ಮ ದೇವಿ, ಗಣಪತಿ, ಗ್ರಾಮದೇವತೆ, ದೊಡ್ಡ ಆಂಜನೇಯ ದೇವಸ್ಥಾನಗಳಿಗೆ ಒಬ್ಬೊಬ್ಬರಾಗಿ ತೆರಳಿ ನಮಿಸಿದರು.

    ಭಾವೈಕ್ಯದ ಪಂಚಮಿ ಹಬ್ಬ
    ಸವಣೂರ:
    ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರಪಂಚಮಿ ಹಬ್ಬವನ್ನು ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಪುರಾತನ ಕಾಲದಿಂದ ಆಚರಿಸುತ್ತಿರುವ ಪಂಚಮಿ ಹಬ್ಬ ಭಾವೈಕ್ಯ, ಸಂಸ್ಕೃ ಬಿಂಬಿಸುತ್ತದೆ. ಹಬ್ಬದ ಅಂಗವಾಗಿ ಹೊಸ ಬಟ್ಟೆ ತೊಟ್ಟ ಮಹಿಳೆಯರು ಮತ್ತು ಮಕ್ಕಳು ಬೆಳಗ್ಗೆ ಪಟ್ಟಣದ ಹಳೇ ಕೋರ್ಟ್ ಆವರಣ, ಕೋರಿಪೇಟೆಯ ಇಟಗಿ ಭೀಮಾಂಭಿಕಾ ಬನ್ನಿ ಕಟ್ಟೆ, ಸಿಂಪಿಗಲ್ಲಿ ವಿಠ್ಠಲ ಮಂದಿರ, ಶುಕ್ರವಾರ ಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನ, ದಂಡಿನಪೇಟೆಯ ದುರ್ಗಾದೇವಿ ದೇವಸ್ಥಾನಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ನಾಗದೇವರ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದರು. ನಾಗದೇವರ ಕಲ್ಲಿನಮೂರ್ತಿಗೆ ಹಾಲು ಎರೆದರು. ನಂತರ ಜೋಕಾಲಿ ಆಡಿ ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts