More

    ಹಾವೇರಿ ಜಿಲ್ಲೆಗೆ 14ನೇ ಸ್ಥಾನ

    ಹಾವೇರಿ: ಈ ಬಾರಿಯ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಶೇ. 68.01ರಷ್ಟಾಗಿದೆ. ರಾಜ್ಯದಲ್ಲಿ ಜಿಲ್ಲೆಗೆ 14ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕಿಂತ 2ಸ್ಥಾನ ಮೇಲಕ್ಕೇರಿದೆ. ಪರೀಕ್ಷೆಗೆ ಹಾಜರಾದ ಒಟ್ಟು 12,179 ವಿದ್ಯಾರ್ಥಿಗಳಲ್ಲಿ 8,283ವಿದ್ಯಾರ್ಥಿಗಳು ಪಾಸಾಗಿದ್ದಾರೆ.

    ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದ ಶೇಕಡ ಪ್ರಮಾಣದಲ್ಲಿ ತುಸು ಕಡಿಮೆಯಾದರೂ ರಾಜ್ಯದ ಜಿಲ್ಲಾವಾರು ಪಟ್ಟಿಯಲ್ಲಿ 2ಸ್ಥಾನ ಮುನ್ನಡೆಯಾಗಿದೆ. ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಶೇ. 68.40ರಷ್ಟಾಗಿ ಜಿಲ್ಲೆಗೆ 16ನೇ ಸ್ಥಾನ ಲಭಿಸಿತ್ತು.

    ವಾಣಿಜ್ಯ ವಿಭಾಗ ಫಸ್ಟ್, ಕಲಾ ವಿಭಾಗ ಲಾಸ್ಟ್…

    ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 4,312ವಿದ್ಯಾರ್ಥಿಗಳಲ್ಲಿ 3335 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 77.34ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 2,233 ವಿದ್ಯಾರ್ಥಿಗಳಲ್ಲಿ 1,697ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 76ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 5,634 ವಿದ್ಯಾರ್ಥಿಗಳಲ್ಲಿ 3,251 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 57.7ರಷ್ಟು ಫಲಿತಾಂಶ ಬಂದಿದೆ.

    ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ

    ನಗರ ಪ್ರದೇಶದ 7,667 ವಿದ್ಯಾರ್ಥಿಗಳಲ್ಲಿ 5,140 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 67.04ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದ 4,512ವಿದ್ಯಾರ್ಥಿಗಳಲ್ಲಿ 3,143 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 69.66ರಷ್ಟು ಫಲಿತಾಂಶ ಬಂದಿದೆ. ಪ್ರತಿ ಸಲದಂತೆ ಈ ಸಲವೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

    ಬಾಲಕಿಯರೇ ಫಸ್ಟ್

    ದ್ವಿತೀಯ ಪಿಯುಸಿಯಲ್ಲಿ ಮೊದಲ ಬಾರಿ, ರಿಪೀಟರ್ಸ್ ಹಾಗೂ ಬಾಹ್ಯ ಸೇರಿ ಒಟ್ಟು 7,866ಬಾಲಕಿಯರ ಪರೀಕ್ಷೆ ಬರೆದಿದ್ದರು. ಅದರಲ್ಲಿ 5,522 ವಿದ್ಯಾರ್ಥಿನಿಯರು ಪಾಸಾಗಿದ್ದು, ಶೇ. 70.02ರಷ್ಟು ಫಲಿತಾಂಶ ಬಂದಿದೆ. ಒಟ್ಟು 6,641 ಬಾಲಕರು ಪರೀಕ್ಷೆ ಬರೆದಿದ್ದು, 3,513ಬಾಲಕರು ಪಾಸಾಗಿದ್ದು, ಶೇ. 52.9ರಷ್ಟು ಫಲಿತಾಂಶ ಬಂದಿದೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 10,439ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 6,190 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 59.3ರಷ್ಟು ಫಲಿತಾಂಶ ಬಂದಿದೆ. ಆಂಗ್ಲ ಮಾಧ್ಯಮದಲ್ಲಿ 4,068ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 2,845ವಿದ್ಯಾರ್ಥಿಗಳು ಪಾಸಾಗಿದ್ದು ಶೇ. 69.94ರಷ್ಟು ಫಲಿತಾಂಶ ಬಂದಿದೆ.

    ಜಿಲ್ಲೆಯಲ್ಲಿ ಒಟ್ಟು ಮೊದಲ ಬಾರಿ, ರಿಪೀಟರ್ಸ್ ಹಾಗೂ ಬಾಹ್ಯ ಸೇರಿ ಒಟ್ಟು 14,507ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 9,035ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 62.28ರಷ್ಟು ಫಲಿತಾಂಶ ಬಂದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಆಂಜನೇಯ ತಿಳಿಸಿದ್ದಾರೆ.

    ಪುನೀತ, ಐಶ್ವರ್ಯ, ಸಚಿನ್ ಟಾಪರ್

    ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ರಟ್ಟಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಪುನೀತ ತಿಪ್ಪಣ್ಣನವರ 580(ಶೇ. 96.66), ವಾಣಿಜ್ಯ ವಿಭಾಗದಲ್ಲಿ ರಾಣೆಬೆನ್ನೂರ ರೋಟರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ಐಶ್ವರ್ಯ ಎನ್ ಲದ್ವಾ 591(ಶೇ. 98.05)ಹಾಗೂ ವಿಜ್ಞಾನ ವಿಭಾಗದಲ್ಲಿ ರಾಣೆಬೆನ್ನೂರ ನಗರದ ಆರ್​ಟಿಇಎಸ್ ಪದವಿ ಪೂರ್ವ ಕಾಲೇಜ್​ನಲ್ಲಿ ವಿದ್ಯಾರ್ಥಿ ಸಚಿನ್ ಬಿ ಹೊಳಲ 577(ಶೇ. 96.16) ಹಾಗೂ ರಾಣೆಬೆನ್ನೂರ ರಾಜರಾಜೇಶ್ವರಿ ಪಿಯು ಕಾಲೇಜ್ ವಿದ್ಯಾರ್ಥಿನಿ ನಿರ್ಮಲಾ ವಿ ಹಿರೇಮಠ 577(ಶೇ. 96.16) ಅಂಕ ಪಡೆಯುವುದರೊಂದಿಗೆ ಜಿಲ್ಲೆಯ ಟಾಪರ್​ಗಳಾಗಿದ್ದಾರೆ.

    ನಾನು ನಿರೀಕ್ಷಿತ ಅಂಕಗಳು ಬಂದಿದ್ದು, ಫಲಿತಾಂಶ ಸಂತಸ ತಂದಿದೆ. ನಮ್ಮ ಕುಟುಂಬದವರು ಹಾಗೂ ಶಿಕ್ಷಕರು ಓದಿಗೆ ಬಹಳ ಸಹಾಯ ಮಾಡಿದ್ದಾರೆ. ಶಿಕ್ಷಕರು ಉತ್ತಮವಾಗಿ ಪಾಠ ಹೇಳುತ್ತಿದ್ದರು. ಅದನ್ನು ಸರಿಯಾಗಿ ಗ್ರಹಿಕೆ ಮಾಡಿಕೊಳ್ಳುತ್ತಿದ್ದೆವು. ಇದರ ಫಲವಾಗಿ ಉತ್ತಮ ಅಂಕ ಬಂದಿವೆ. ಮುಂದೆ ಸಿಎ ಮಾಡಬೇಕು ಎಂದುಕೊಂಡಿದ್ದೇನೆ.

    | ಐಶ್ವರ್ಯ ಎನ್.ಎಲ್., ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ

    ನಿತ್ಯವೂ ಕಾಲೇಜ್ ಸಮಯ ಹೊರತು ಪಡಿಸಿ ಐದು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಅಂದುಕೊಂಡಂತೆ ಉತ್ತಮ ಅಂಕಗಳು ಬಂದಿವೆ. ನನ್ನ ಕುಟುಂಬದವರು ಬಹಳ ಸಹಕಾರ ನೀಡಿದ್ದಾರೆ. ಶಿಕ್ಷಕರು ನೀಡಿದ ಪಠ್ಯದ ಅಧ್ಯಯನ ತುಂಬ ಅನುಕೂಲವಾಗಿದೆ. ಮುಂದೆ ಸಿವಿಲ್ ಇಂಜಿನಿಯರಿಂಗ್ ಓದುವ ಕನಸು ಇದೆ.

    | ನಿರ್ಮಲಾ ಹಿರೇಮಠ, ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ

    ಬಟ್ಟೆ ವ್ಯಾಪಾರಿಯ ಮಗಳಿಗೆ ಶೇ. 94.83 ಅಂಕ

    ರಾಣೆಬೆನ್ನೂರ: ಸಂತೆ ಸಂತೆ ಸುತ್ತಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯ ಮಗಳು ಪಿಯುಸಿ ಪರೀಕ್ಷೆಯಲ್ಲಿ ಶೇ. 94.83 ಅಂಕಗಳಿಸುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ.

    ತಾಲೂಕಿನ ತುಮ್ಮಿನಕಟ್ಟಿಯ ಸಂಗನ ಬಸವೇಶ್ವರ ಪದವಿಪೂರ್ವ ಕಾಲೇಜ್​ನ ಕಲಾ ವಿಭಾಗದ ವಿದ್ಯಾರ್ಥಿನಿ ಚಂದನಾ ಬ್ಯಾಳಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ.

    ಶಿಕ್ಷಣಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ. ಕನ್ನಡ-97, ಇಂಗ್ಲಿಷ್-83, ಇತಿಹಾಸ-98, ಭೌಗೋಳಶಾಸ್ತ್ರ-94 ಹಾಗೂ ರಾಜ್ಯಶಾಸ್ತ್ರ-97 ಸೇರಿ ಒಟ್ಟು 569 ಅಂಕಗಳಿಸಿದ್ದು, ಕೆಎಎಸ್ ಓದುವ ಕನಸು ಹೊತ್ತಿದ್ದಾರೆ.

    ಇವರ ತಂದೆ ವಾಗೀಶಪ್ಪ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಬಟ್ಟೆ ವ್ಯಾಪಾರ ಮಾಡುತ್ತ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದಾರೆ. ಚಂದನಾ ಅವರ ಅಕ್ಕ ಬಿಎ ಓದುತ್ತಿದ್ದಾರೆ. ಆದರೀಗ ಕರೊನಾದಿಂದ ತಂದೆ ಬಟ್ಟೆ ವ್ಯಾಪಾರ ಮಾಡಲಾಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ನಿತ್ಯದ ಕೂಲಿಗಾಗಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಹುಡುಕಿದರೂ ಸಿಗುತ್ತಿಲ್ಲ ಎಂಬುದು ವಾಗೀಶಪ್ಪ ಅವರ ಅಳಲು. ಇಂಥ ಕಷ್ಟದ ಸಮಯದಲ್ಲೂ ಚಂದನಾ ಉತ್ತಮ ಅಂಕಗಳಿಸಿರುವುದು ನಮಗೆ ಸಂತಸ ತಂದಿದೆ ಎಂಬುದು ಕುಟುಂಬದವರ ಅಭಿಪ್ರಾಯ.

    ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿ ಮಿತ್ರನ ಸಹಕಾರ

    ರಟ್ಟಿಹಳ್ಳಿ: ತಂದೆ-ತಾಯಿಯ ಪ್ರೋತ್ಸಾಹ, ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಗರಿಷ್ಠ ಅಂಕಗಳನ್ನು ಪಡೆಯಲು ಸಹಾಯವಾಗಿದೆ ಎಂದು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಪುನೀತ್ ತಿಪ್ಪಣ್ಣನವರ ಹರ್ಷ ವ್ಯಕ್ತಪಡಿಸಿದರು.

    ವಿಜಯವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಪುನೀತ್, ‘ತಂದೆ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕವಾಗಿ ಸೇವೆ, ತಾಯಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು ನನ್ನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಅವರ ಪರಿಶ್ರಮಕ್ಕೆ ತಕ್ಕ ಫಲ ನೀಡಬೇಕೆಂಬ ಛಲವೇ ನನ್ನ ಉತ್ತಮ ಫಲಿತಾಂಕ್ಕೆ ಕಾರಣವಾಯಿತು’ ಎಂದರು.

    ಪುನೀತ್ 580 ಅಂಕ (ಶೇ 96.66) ಅಂಕ ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ 98, ಇಂಗ್ಲಿಷ್ 90, ಇತಿಹಾಸ 100, ಅರ್ಥಶಾಸ್ತ್ರ 100, ಸಮಾಜಶಾಸ್ತ್ರ 98 ಮತ್ತು ಶಿಕ್ಷಣಶಾಸ್ತ್ರದಲ್ಲಿ 94 ಅಂಕಗಳನ್ನು ಗಳಿಸಿದ್ದಾರೆ. ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಮಾಡುವ ಗುರಿ ಹೊಂದಿದ್ದೇನೆ ಎಂದು ಭವಿಷ್ಯದ ಕನಸುಗಳನ್ನು ಹಂಚಿಕೊಂಡನು.

    ‘ಕಾಲೇಜಿನಲ್ಲಿ ಮಾಡುವ ಪಾಠವನ್ನು ಮನೆಯಲ್ಲಿ ಪ್ರತಿದಿನ ಮನನ ಮಾಡಬೇಕು, ಓದಿದ್ದು ಅರ್ಥವಾಗದಿದ್ದರೆ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು’ ಎಂದು ವಿದ್ಯಾರ್ಥಿಗಳಿಗೆ ಪುನೀತ್ ಕಿವಿಮಾತು ಹೇಳಿದರು. ವಿದ್ಯಾರ್ಥಿ ಸಾಧನೆಗೆ ಪ್ರಾಚಾರ್ಯ ಗುಡ್ಡಚಾರಿ ಕಮ್ಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts