More

    ಹಾವೇರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ

    ರಾಣೆಬೆನ್ನೂರ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೊಂಡಿದ್ದು, ವಿಧಾನ ಪರಿಷತ್ ಸದಸ್ಯ ಆರ್. ಶಂಕರ ಅವರಿಗೆ ಮತ್ತೆ ಮಂತ್ರಿ ಸ್ಥಾನ ಒಲಿದಿದೆ.

    ಹಾವೇರಿ ಜಿಲ್ಲೆಯ ಮೂವರು ಶಾಸಕರಿಗೆ ಮಂತ್ರಿ ಸ್ಥಾನ ದೊರೆತಿರುವುದು ಜಿಲ್ಲೆ ಮಟ್ಟಿಗೆ ದಾಖಲೆಯಾಗಿದೆ. ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಮೂಲಕ 2018ರಲ್ಲಿ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದ ಆರ್. ಶಂಕರ ಅವರು ಮೂರು ವರ್ಷದಲ್ಲಿ 3ನೇ ಬಾರಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಸಚಿವರಾದರು. ನಂತರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿ.ಸಿ. ಪಾಟೀಲ ಸಚಿವರಾಗಿದ್ದಾರೆ.

    2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ ಸಚಿವರಾಗಿದ್ದರು. 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾನಗಲ್ಲ ಕ್ಷೇತ್ರದ ಮನೋಹರ ತಹಶೀಲ್ದಾರ್ ಅವರಿಗೆ ಮಂತ್ರಿ ಸ್ಥಾನ ನೀಡಿತ್ತು. ಆದರೆ, ಅನಾರೋಗ್ಯದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಹಾವೇರಿ ಕ್ಷೇತ್ರದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಒಲಿದಿತ್ತು.

    3ನೇ ಬಾರಿ: 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಶಂಕರ ಅರಣ್ಯ ಮತ್ತು ಪರಿಸರ ಖಾತೆ ನಿರ್ವಹಿಸಿದ್ದರು. ಆದರೆ, ಕೆಲ ತಿಂಗಳಲ್ಲಿ ಅವರ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವ ಸಂಪುಟದಿಂದ ಕೈ ಬಿಡಲಾಗಿತ್ತು. 2019ರಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದಿದ್ದರು. ಹೀಗಾಗಿ ಸರ್ಕಾರ ಬೀಳುತ್ತದೆ ಎಂಬ ಉದ್ದೇಶದಿಂದ 2ನೇ ಬಾರಿಗೆ ಮಂತ್ರಿಯನ್ನಾಗಿ ಮಾಡಿ ಪೌರಾಡಳಿತ ಖಾತೆ ನೀಡಲಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಶಂಕರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಆದರೆ, ಪಕ್ಷಾಂತರ ಕಾಯ್ದೆಯಡಿ ಶಂಕರ ಅವರ ಶಾಸಕ ಸ್ಥಾನವನ್ನು ಅಂದಿನ ವಿಧಾನಸಭಧ್ಯಕ್ಷರು ಅನರ್ಹಗೊಳಿಸಿದ್ದರು. ಶಾಸಕ ಸ್ಥಾನ ಕಳೆದುಕೊಂಡ ಶಂಕರಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಿಲ್ಲ. ಆದರೆ, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

    ಮಂತ್ರಿ ಸ್ಥಾನಕ್ಕಾಗಿ ಕಸರತ್ತು: 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. 2018ರ ಚುನಾವಣೆಯಲ್ಲಿ 4,338 ಮತಗಳ ಅಂತರದಿಂದ ಕೆ.ಬಿ. ಕೋಳಿವಾಡ ವಿರುದ್ಧ ಗೆದ್ದರು. ಅಲ್ಲದೆ, ರಾಜ್ಯದಲ್ಲಿ ಕೆಪಿಜೆಪಿಯಿಂದ ಆಯ್ಕೆಯಾದ ಏಕೈಕ ಶಾಸಕ ಎಂದು ಗುರುತಿಸಿಕೊಂಡಿದ್ದರು. ಜತೆಗೆ ಸರ್ಕಾರ ರಚನೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಸ್ಪಷ್ಟ ಬಹುಮತವಿಲ್ಲದ ಕಾರಣ ಆರ್. ಶಂಕರಗೆ ಆ ಸಮಯದಲ್ಲಿ ಭಾರಿ ಬೇಡಿಕೆ ಬಂದಿತ್ತು. ಜತೆಗೆ ಅವರಲ್ಲಿ ಗೊಂದಲವೂ ಮೂಡಿತ್ತು. ಹೀಗಾಗಿ ಬೆಳಗ್ಗೆ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಂಡಿದ್ದರೆ, ಅದೇ ದಿನ ಸಂಜೆ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts