More

    ಹಾಲಿ ಶಾಸಕರನ್ನು ಯಾವ ಕಾರಣಕ್ಕೂ ಒಪ್ಪುವ ಮಾತೇ ಇಲ್ಲ; ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ: ನಮೋ ವೇದಿಕೆ ಸ್ಪಷ್ಟನೆ

    ಸೊರಬ: ನಮೋ ವೇದಿಕೆ ವ್ಯಕ್ತಿ ಪ್ರತಿಷ್ಠೆಯ ವಿರುದ್ಧ ಇದೆಯೇ ಹೊರತು ಬಿಜೆಪಿ ಸಂಘಟನೆಯಲ್ಲಿ ಯಾವ ಗೊಂದಲವೂ ಇಲ್ಲ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆ ಎಂದು ತಾಲೂಕು ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.
    ಮಂಗಳವಾರ ನಮೋ ವೇದಿಕೆ ಕಚೇರಿಯಲ್ಲಿ ಆಯೋಜಿಸಿದ್ದ ನಮೋ ವೇದಿಕೆ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಸಂಸದರು ಹಾಗೂ ಎಂಎಲ್‌ಸಿ ಅನುದಾನದಿಂದ ಬಂದ ಕಾಮಗಾರಿಗಳನ್ನು ಇಲ್ಲಿಯ ಶಾಸಕರು ನೆಪಮಾತ್ರಕ್ಕೆ ಹಾಕಿಕೊಂಡು ಕಾರ್ಯಕರ್ತರ ಗಮನಕ್ಕೆ ತಾರದೆ ಅವರ ಬೆರೆಳೆಣಿಕೆಯ ಹಿಂಬಾಲಕರನ್ನು ಇಟ್ಟುಕೊಂಡು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ದೂರಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಾಲೂಕಿಗೆ ಸಾಕಷ್ಟು ಬಹಳಷ್ಟು ಅನುದಾನ ನೀಡಿದ್ದಾರೆ. ಆದರೆ ವ್ಯಕ್ತಿ ಪ್ರತಿಷ್ಠೆಯಿಂದಾಗಿ ಕಾರ್ಯಕರ್ತರನ್ನು ದೂರ ಮಾಡಿದ್ದರಿಂದ ಎಷ್ಟೇ ಅಭಿವೃದ್ಧಿಯಾದರೂ ಕಾರ್ಯಕರ್ತರಲ್ಲಿ ಯಾವ ಉತ್ಸಾಹ ಇಲ್ಲ. ಶಾಸಕರು ಕೇವಲ ಬೇರೆಯವರ ಅನುದಾನದ ಕಾಮಗಾರಿಗಳ ಉದ್ಘಾಟನೆಯಲ್ಲಿ ಮಗ್ನರಾಗಿದ್ದಾರೆಯೇ ಹೊರತು ಪಕ್ಷ ಸಂಘಟನೆಯಲ್ಲಿ ತೊಡಗಿಲ್ಲ ಎಂದು ಆರೋಪಿಸಿದರು.
    ತಾಲೂಕಿನಲ್ಲಿ ವ್ಯಕ್ತಿ ಪ್ರತಿಷ್ಠೆ ಹಾಗೂ ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಶಾಸಕರ ವಿರುದ್ಧವೇ ನಮೋ ವೇದಿಕೆ ಆರಂಭವಾಗಿದೆ. ಈಗಲೂ ಹಾಗೂ ಮುಂದೆಯೂ ವಿರುದ್ಧವಾಗಿಯೇ ಇರುತ್ತದೆ. ಬೇರೆ ತಾಲೂಕುಗಳಲ್ಲಿ ಇಂಥವರೇ ಮುಂದಿನ ಚುನಾವಣಾ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಣೆ ಮಾಡಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ಘೋಷಣೆಯಾಗದಿರಲು ಕಾರಣ ವ್ಯಕ್ತಿ ಪ್ರತಿಷ್ಠೆಯನ್ನು ವಿರೋಧಿಸುವ ನಮೋ ವೇದಿಕೆ ಎಂದರು.
    ಶಾಸಕರ ಸ್ಪರ್ಧೆಗೆ ಒಪ್ಪಲ್ಲ: ಚುನಾವಣೆಗಳು ಸಮೀಪಿಸುತ್ತಿದ್ದಂತೆ ನಾವೆಲ್ಲ ಸರಿಪಡಿಸಿಕೊಂಡು ಒಂದಾಗಿದ್ದೇವೆ ಎಂದು ಭಾಷಣ ಬಿಗಿಯುತ್ತಿರುವ ಶಾಸಕರು ನಮ್ಮನ್ನು ಸರಿಪಡಿಸುವುದು ಬೇಕಾಗಿಲ್ಲ. ಮೊದಲು ಅವರು ಸರಿಯಾಗಲಿ. ನಾವು ಸರಿಯಾಗಿಯೇ ಇದ್ದೇವೆ. ಇಂತಹ ಹೇಳಿಕೆಗಳಿಂದ ನಮೋ ವೇದಿಕೆ ವ್ಯಕ್ತಿ ಪ್ರತಿಷ್ಠೆಯನ್ನು ಒಪ್ಪಿಕೊಂಡಿದೆ ಎಂದು ತಿಳಿಯಬಾರದು. ನಮ್ಮ ಉದ್ದೇಶ ತಾಲೂಕಿನಲ್ಲಿ ಹಾಲಿ ಇರುವ ಶಾಸಕರನ್ನು ಬಿಟ್ಟು ಬೇರೆಯವರನ್ನು ವರಿಷ್ಠರು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ನಾವು ಚುನಾವಣೆಯಲ್ಲಿ ಹೆಗಲು ಕೊಟ್ಟು ನಿಲ್ಲುತ್ತೇವೆ. ಹಾಲಿ ಅಭ್ಯರ್ಥಿಯನ್ನೇ ಮುಂದುವರಿಸಿದರೆ ನಮೋ ವೇದಿಕೆಯಿಂದ ಓರ್ವರನ್ನು ಕಣಕ್ಕಿಳಿಸಿ ಚುನಾವಣೆಗೆ ಇಳಿಯುತ್ತೇವೆ ಎಂದು ಸ್ಪಷ್ಟಪಡಿಸಿದರು. ಯಾವ ಕಾರಣಕ್ಕೂ ನಮೋ ವೇದಿಕೆ ಹಾಲಿ ಶಾಸಕರನ್ನು ಅಭ್ಯರ್ಥಿಯನ್ನಾಗಿ ಒಪ್ಪುವುದಿಲ್ಲ ಎಂದು ಪಾಣಿ ರಾಜಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts