More

    ಹಾರೋಬೆಳವಡಿ ಸೇತುವೆ ಮತ್ತೆ ಜಲಾವೃತ

    ಧಾರವಾಡ : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಾರೋಬೆಳವಡಿ ಸೇತುವೆ ಮತ್ತೆ ಮುಳುಗಡೆಯಾಗಿದೆ.ಧಾರವಾಡ ತಾಲೂಕಿನ ಹಾರೋಬೆಳವಡಿ ಮತ್ತು ಸವದತ್ತಿ ತಾಲೂಕಿನ ಇನಾಮಹೊಂಗಲ ಮಧ್ಯದ ಬೃಹತ್ ಸೇತುವೆ 2019ರ ಆಗಸ್ಟ್ ಮಳೆಗೆ ಕೊಚ್ಚಿ ಹೋಗಿತ್ತು. ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ವಾಹನಗಳ ಸಂಚಾರಕ್ಕೆ ಸೇತುವೆ ಪಕ್ಕ ತಾತ್ಕಾಲಿಕ ರಸ್ತೆ ನಿರ್ವಿುಸಲಾಗಿದೆ. ಶುಕ್ರವಾರ ರಾತ್ರಿಯಿಡೀ ಸುರಿದ ಮಳೆಯಿಂದ ಭಾರಿ ಪ್ರಮಾಣದ ನೀರು ಬಂದಿದ್ದು, ಪಕ್ಕದ ರಸ್ತೆ ಜಲಾವೃತವಾಗಿತ್ತು.

    ಧಾರವಾಡ- ಸವದತ್ತಿ ಮಾರ್ಗವಾಗಿ ಹಲವು ಜಿಲ್ಲೆಗಳನ್ನು ಸಂರ್ಪಸುವ ರಸ್ತೆ ಇದಾಗಿದೆ. ಶನಿವಾರ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ವಾಹನ ಸಂಚಾರ ನಡೆಯಿತು. ಹಾರೋಬೆಳವಡಿಯಿಂದ ಇನಾಮಹೊಂಗಲದ ಕಡೆ ಹೋಗುವ ಜನ, ಪ್ರಾಣಭಯದಲ್ಲೇ ಹರಿಯುತ್ತಿರುವ ನೀರಿನಲ್ಲಿ ಸಂಚರಿಸುತ್ತಿರುವುದು ಕಂಡುಬಂತು.

    ಹುಬ್ಬಳ್ಳಿಯಲ್ಲಿ 57.4 ಮಿಮೀ ಮಳೆ: ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆಯವರೆಗೆ ನಿರಂತರವಾಗಿ ಮಳೆ ಸುರಿಯಿತು. ಶುಕ್ರವಾರ ರಾತ್ರಿಯಿಂದಲೇ ರಭಸ ಪಡೆದಿದ್ದ ಮಳೆ ಶನಿವಾರ ಮಧ್ಯಾಹ್ನದವರೆಗೆ ಸುರಿದ ಪರಿಣಾಮ ಜನಜೀವನ ಒಂದಿಷ್ಟು ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೇಶವ ನಗರ ಉದಯ ಹಾಸ್ಟೆಲ್ ಎದುರು ಮರ ಉರುಳಿ ಬಿದ್ದಿದೆ. ಯಾರಿಗೂ ಅಪಾಯವಾಗಿಲ್ಲ.

    ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ 1 ಮನೆ ಪೂರ್ಣ ಕುಸಿದ್ದು ಬಿದ್ದಿದ್ದು, 11 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ 3 ಮನೆಗಳು ಕುಸಿದಿವೆ. ಬೆಳಗ್ಗೆ 8 ಗಂಟೆಯ ವರೆಗೆ ಹುಬ್ಬಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 57.4 ಮಿಲಿ ಮೀಟರ್, ಛಬ್ಬಿಯಲ್ಲಿ 37.6, ಶಿರಗುಪ್ಪಿಯಲ್ಲಿ 52 ಹಾಗೂ ಬ್ಯಾಹಟ್ಟಿಯಲ್ಲಿ 24.6 ಮಿ.ಮೀ. ಮಳೆಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಮಧ್ಯಾಹ್ನದ ನಂತರ ಮಳೆ ಪ್ರಮಾಣ ಕಡಿಮೆಯಾಗಿದ್ದು ಸ್ವಲ್ಪ ನಿರಾಳತೆ ಉಂಟುಮಾಡಿತು. ಶನಿವಾರ ಸಂಜೆವರೆಗೂ ಧಾರವಾಡ ಜಿಲ್ಲೆಯಲ್ಲಿ ಸೂರ್ಯದರ್ಶನ ಸಾಧ್ಯವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts