More

    ಹಾನಿಗೊಂಡಿದ್ದ ಚೆಕ್‌ಡ್ಯಾಂ ಪರಿಶೀಲನೆ

    ಮದ್ದೂರು: ತಾಲೂಕಿನ ಆತಗೂರು ಹೋಬಳಿ ನವಿಲೆ ಗ್ರಾಮದಲ್ಲಿ ಶಿಂಷಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಏತ ನೀರಾವರಿ ಚೆಕ್‌ಡ್ಯಾಂ ಪ್ರವಾಹದಿಂದ ಹಾನಿಗೊಂಡಿದ್ದ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಕೇಂದ್ರ ಕಚೇರಿಯ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆಯ ಉಪ ಮುಖ್ಯ ಇಂಜಿನಿಯರ್ ಎಚ್.ಎಂ.ಟಿ.ಸ್ವಾಮಿ ಸೇರಿದಂತೆ ಇಲಾಖೆ ಅಧಿಕಾರಿಗಳ ತಂಡ ಹಾನಿಗೊಂಡಿರುವ ಏತ ನೀರಾವರಿ ಯೋಜನೆಯ ಚೆಕ್‌ಡ್ಯಾಂ ಮರು ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆ ನಡೆಸಿತು.

    ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ನವಿಲೆ ಏತ ನೀರಾವರಿಯಿಂದ ನವಿಲೆ, ಅಂಕನಾಥಪುರ, ಹೂತಗೆರೆ, ಅರಕನಹಳ್ಳಿ, ಕುಂದನಕುಪ್ಪೆ ಸೇರಿದಂತೆ ಆತಗೂರು ಹೋಬಳಿಯ ವ್ಯಾಪ್ತಿಯ ಸುಮಾರು 30 ಕೆರೆ, ಕಟ್ಟೆಗಳಿಗೆ ನೀರು ಪೂರೈಸುವ ಅಣೆಕಟ್ಟೆಯಾಗಿದೆ. ಅಲ್ಲದೆ ಮುತ್ತುರಾಯನ ಕೆರೆ ಅಚ್ಚುಕಟ್ಟು ಪ್ರದೇಶಕ್ಕೂ ನೀರಿನ ಸೌಲಭ್ಯ ನೀಡುವ ಸಾಮರ್ಥ್ಯ ಹೊಂದಿರುವ ಡ್ಯಾಂ ಇದಾಗಿದೆ ಎಂದರು.

    2 ತಿಂಗಳ ಹಿಂದೆ ಭಾರಿ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಮಾರ್ಕೋನಹಳ್ಳಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಶಿಂಷಾನದಿಗೆ ಹರಿಯ ಬಿಟ್ಟ ಪರಿಣಾಮ ನದಿಯಲ್ಲಿ ಭಾರಿ ಪ್ರಮಾಣದ ಪ್ರವಾಹ ಉಂಟಾಗಿ ಏತ ನೀರಾವರಿ ಚೆಕ್ ಡ್ಯಾಂ ಕುಸಿತಗೊಂಡಿರುವುದು ಮಾತ್ರವಲ್ಲದೆ, ಡ್ಯಾಂನ ಕೆಲವು ಕಾಂಕ್ರೀಟ್ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಚೆಕ್ ಡ್ಯಾಂ ಹಾನಿಗೊಂಡಿದೆ ಎಂದು ತಿಳಿಸಿದರು.

    ಸಣ್ಣ ನೀರಾವರಿ ಇಲಾಖೆಯ ವಿನ್ಯಾಸ ಶಾಖೆಯ ತಾಂತ್ರಿಕ ಸಹಾಯ ಇಂಜಿನಿಯರ್ ಪಿ.ಜಿ.ಅನಿತಾ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನವಿಲೆ ಗ್ರಾಮದ ಬಳಿ ಶಿಂಷಾ ನದಿಗೆ ಅಡ್ಡಲಾಗಿ ಏತ ನೀರಾವರಿ ಯೋಜನೆ ನಿರ್ಮಾಣ ಮಾಡಲಾಗಿದ್ದು, ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಶಿಂಷಾ ನದಿ ಉಂಟಾದ ಪ್ರವಾಹದ ಜತೆಗೆ ಚೆಕ್‌ಡ್ಯಾಂ ಸಮೀಪ ನಡೆದಿರುವ ಅಕ್ರಮ ಮರಳುಗಾರಿಕೆ ಸಹ ಡ್ಯಾಂ ಹಾನಿಗೊಳ್ಳಲು ಕಾರಣವಾಗಿದೆ ಎಂದರು.

    ಏತ ನೀರಾವರಿ ಚೆಕ್‌ಡ್ಯಾಂ ಮರು ನಿರ್ಮಾಣ ಮಾಡುವ ಸಂಬಂಧ ವಿನ್ಯಾಸ ಸಿದ್ಧಪಡಿಸಿ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ ನಂತರ 2 ತಿಂಗಳಲ್ಲಿ ಕಾಮಗಾರಿ ಕೈಗೊಂಡು ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ನಿವೃತ್ತ ಸಹಾಯಕ ಇಂಜಿನಿಯರ್ ಶಿವಕುಮಾರ್, ವಿನ್ಯಾಸ ಸಹಾಯಕ ಇಂಜಿನಿಯರ್ ಮೋಹಿತ್ ಬಾಬು, ಇಇ ತಾರಕೇಶ್, ಮಂಡ್ಯ ವಿಭಾಗದ ಎಇಇ ಚಿಕ್ಕಣ್ಣ, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಗ್ರಾಮ ಮುಖಂಡರಾದ ರಾಮಚಂದ್ರ, ರಂಗಸ್ವಾಮಿ, ಪುಟ್ಟೇಗೌಡ, ಗೋವಿಂದರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts