More

    ಹಾಜರಾತಿ ನೀಡದ್ದಕ್ಕೆ ಚಾಲಕ-ನಿರ್ವಾಹಕರ ಆಕ್ಷೇಪ

    ಕಾರವಾರ: ಬಸ್​ಗಳ ಕಡಿಮೆ ಓಡಾಟದಿಂದ ಖಾಲಿ ಕುಳಿತುಕೊಳ್ಳುವಂತಾಗಿರುವ ಎನ್​ಡಬ್ಲ್ಯುಕೆಆರ್​ಟಿಸಿಯ ಚಾಲಕ ಹಾಗೂ ನಿರ್ವಾಹಕರಿಗೆ ಸಂಸ್ಥೆ ಹಾಜರಾತಿ ನೀಡದಿರುವ ಬಗ್ಗೆ ಆಕ್ಷೇಪಗಳು ಕೇಳಿ ಬಂದಿವೆ.

    ಕೋವಿಡ್-19 ಕಾರಣದಿಂದ ಬಸ್​ಗಳಲ್ಲಿ ಓಡಾಡುವವರ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಒಟ್ಟಾರೆ ಓಡಾಡುತ್ತಿದ್ದ ಬಸ್​ಗಳ ಪೈಕಿ ಶೇ. 35 ರಿಂದ 40 ರಷ್ಟು ಮಾತ್ರ ಈಗ ಓಡುತ್ತಿವೆ. ಆ ಬಸ್​ಗಳನ್ನು ಹೊರತುಪಿಡಿಸಿ ಉಳಿದವರು ಖಾಲಿ ಕುಳಿತುಕೊಳ್ಳುವಂತಾಗಿದೆ.

    ಸಾರಿಗೆ ಸಂಸ್ಥೆ ಏಪ್ರಿಲ್ ತಿಂಗಳ ವೇತನವನ್ನು ಎಲ್ಲರಿಗೂ ಸಂಪೂರ್ಣವಾಗಿ ವಿತರಿಸುವಂತೆ ಸೂಚಿಸಿದೆ. ಮೇ ತಿಂಗಳಲ್ಲಿ 18ರಿಂದ ಕರ್ತವ್ಯಕ್ಕೆ ಹಾಜರಾದವರಿಗೆ ಮಾತ್ರ ಹಾಜರಾತಿ ನೀಡುವಂತೆ ಎಲ್ಲ ಘಟಕ ವ್ಯವಸ್ಥಾಪಕರಿಗೆ ಸುತ್ತೋಲೆ ಹೊರಡಿಸಿತ್ತು. ಜೂ. 5ರಿಂದ ಅನ್ವಯವಾಗುವಂತೆ ಇನ್ನೊಂದು ಸುತ್ತೋಲೆ ಹೊರಡಿಸಿದ್ದು, ಚಾಲಕ ಹಾಗೂ ನಿರ್ವಾಹಕರು ಘಟಕಕ್ಕೆ ಬಂದರೂ ಕೆಲಸ ಸಿಗದೇ ಇದ್ದ ಪಕ್ಷದಲ್ಲಿ ಅವರಿಂದ ಬೆಳಗ್ಗೆ ಒಮ್ಮೆ ಹಾಗೂ ಸಂಜೆ ಒಮ್ಮೆ ಹಾಜರಾತಿ ಪಡೆದು ವೇತನ ನೀಡುವಂತೆ ಸಾರಿಗೆ ಸಂಸ್ಥೆ ಸುತ್ತೋಲೆ ಹೊರಡಿಸಿದೆ. ಆದರೆ, ಘಟಕಗಳ ಅಧಿಕಾರಿಗಳು ಇದನ್ನು ಪಾಲಿಸುತ್ತಿಲ್ಲ. ಘಟಕಗಳ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಗೆ ಕೆಲಸ ಇಲ್ಲದೇ ಇದ್ದರೂ ಸಂಪೂರ್ಣ ಹಾಜರಾತಿ ನೀಡಲಾಗುತ್ತಿದೆ. ಚಾಲಕ ಹಾಗೂ ನಿರ್ವಾಹಕರಿಗೆ ಮಾತ್ರ ಕೆಲಸಕ್ಕೆ ತೆರಳಿರುವ ದಿನ ಹೊರತುಪಡಿಸಿ ಉಳಿದ ದಿನಗಳನ್ನು ‘ಎಲ್’ಎಂದು ತೋರಿಸುತ್ತಿದ್ದಾರೆ ಎಂಬುದು ಚಾಲಕ ಹಾಗೂ ನಿರ್ವಾಹಕರ ದೂರು.

    ಚಾಲಕ, ನಿರ್ವಾಹಕರೇ ಸಾರಿಗೆ ಸಂಸ್ಥೆಯ ಜೀವಾಳ. ಕೋವಿಡ್-19 ಸಂದರ್ಭದಲ್ಲಿ ಯಾವುದೇ ಸುರಕ್ಷತಾ ಕ್ರಮ ಇಲ್ಲದೆಯೂ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಸುತ್ತೋಲೆಯಂತೆ ಘಟಕದಲ್ಲಿ ಹಾಜರಾತಿ ನೀಡುತ್ತಿಲ್ಲ. ನಮಗೆ ಡ್ಯೂಟಿ ಸಿಕ್ಕರೆ ಮಾತ್ರ ಹಾಜರಾತಿ ಎನ್ನುತ್ತಿದ್ದಾರೆ. ಡ್ಯೂಟಿ ಸಿಗದೇ ಇರುವುದು ನಮ್ಮ ತಪ್ಪೇ.

    ಹೆಸರು ಹೇಳಲಿಚ್ಛಿಸದ , ಎನ್​ಡಬ್ಲ್ಯುಕೆಆರ್​ಟಿಸಿ ಚಾಲಕ

    ಮೇ ಹಾಗೂ ಏಪ್ರಿಲ್ ಎರಡೂ ತಿಂಗಳ ವೇತನವನ್ನು ನಾವು ಈಗಾಗಲೇ ನಮ್ಮ ಸಿಬ್ಬಂದಿಗೆ ನೀಡಿದ್ದೇವೆ. ಕರ್ತವ್ಯಕ್ಕೆ ಅವಕಾಶ ಸಿಗದೇ ಇದ್ದವರಿಗೂ ನಾವು ರಜೆ ಹೊಂದಾಣಿಕೆ ಮಾಡಿ ವೇತನ ನೀಡುತ್ತಿದ್ದೇವೆ. ರೊಟೇಶನ್ ಮೇಲೆ ಸಾರಿಗೆ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುತ್ತಿದ್ದೇವೆ. ಇನ್ನು ಯಾವುದೇ ಪೂರ್ವ ಅನುಮತಿ ಇಲ್ಲದೆ, ದೀರ್ಘ ಕಾಲದಿಂದ ಗೈರು ಹಾಜರಾದವರಿಗೆ ಸಂಸ್ಥೆ ನಿಯಮದಂತೆ ನೋಟಿಸ್ ನೀಡಿ ವೇತನ ತಡೆ ಹಿಡಿದಿದ್ದೇವೆ.

    | ವಿವೇಕಾನಂದ ಹೆಗಡೆ , ಎನ್​ಡಬ್ಲ್ಯುಕೆಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts