More

    ಹಳ್ಳೂರು ಹೊಸ ಸೇತುವೆ ಬಳಿ ಕೆಸರು, ಗುಂಡಿ

    ಆನಂದಪುರ: ಆಚಾಪುರ ಗ್ರಾಪಂ ವ್ಯಾಪ್ತಿಯ ಹಳ್ಳೂರು ಹಳ್ಳದ ಹೊಸ ಸೇತುವೆಯ ಎರಡೂ ಕಡೆ ಕೆಸರು ಮತ್ತು ಹೊಂಡ ಉಂಟಾಗಿದ್ದು ನಿತ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ

    ಈ ಸೇತುವೆ ತಗ್ಗಿನಿಂದ ಕೂಡಿರುವ ಕಾರಣ ಬೇಸಿಗೆಯಲ್ಲಿ ನೂತನ ಸೇತುವೆ ನಿರ್ವಿುಸಲಾಗಿತ್ತು. ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆಯನ್ನು ಎತ್ತರಿಸಲು ಹೊಸದಾಗಿ ಮಣ್ಣು ತುಂಬಲಾಗಿತ್ತು. ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಮಣ್ಣು ಕುಸಿದು ಗುಂಡಿ ಬಿದ್ದಿದೆ. ಈ ಸೇತುವೆಯ ಸ್ಥಳದಲ್ಲಿ ಹಳ್ಳೂರು ಗ್ರಾಮದ ಇಳಿಜಾರು ಇದ್ದು ಮಳೆಯ ನೀರಿನ ಜತೆ ಕೆಸರು ಮಣ್ಣು ಸಹ ಕೊಚ್ಚಿಕೊಂಡು ಬಂದು ಸೇತುವೆಯ ಎರಡೂ ಕಡೆ ಹರಡಿಕೊಂಡಿದೆ. ಅತಿಯಾದ ಕೆಸರಿನ ಕಾರಣ ಹೊಸ ಸೇತುವೆಯ ಜಾಗದಲ್ಲಿ ವಾಹನ ಚಾಲನೆ ಕಷ್ಟವಾಗುತ್ತಿದೆ. ಚಾಲಕರು ವಾಹನ ಚಲಾಯಿಸಲು ಗೋಳಾಡುವಂತಾಗಿದೆ.

    ಮುರುಘಾಮಠದ ರಾಷ್ಟ್ರೀಯ ಹೆದ್ದಾರಿ 206ರಿಂದ ಲಕ್ಕವಳ್ಳಿ, ಮಾದಾಪುರ, ಕೆಂಚನಾಲ ಮೂಲಕ ರಿಪ್ಪನ್​ಪೇಟೆ ಸಂರ್ಪಸುವ ರಸ್ತೆ ಇದಾಗಿದೆ. ದ್ವಿಚಕ್ರ ವಾಹನ ಈ ಸ್ಥಳದಲ್ಲಿ ಹೂತು ಬೀಳುತ್ತಿವೆ. ಸವಾರರ ಪೇಚಾಟ ಹೇಳತೀರದಾಗಿದೆ.

    ಈ ಕೆಸರನ್ನು ತೆರವುಗೊಳಿಸಿ ಜಲ್ಲಿ ಪುಡಿ ಹಾಕಿ ಗಟ್ಟಿಗೊಳಿಸುವ ಕಾರ್ಯನಡೆಸಬೇಕು. ಇಲ್ಲವಾದಲ್ಲಿ ಸೇತುವೆಯ ಎರಡೂ ಕಡೆ ಬೇಲಿ ನಿರ್ವಿುಸಿ ಬಂದ್ ಮಾಡಿ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಹಳ್ಳೂರು ಹಳ್ಳದ ಸೇತುವೆಯ ಎರಡೂ ಕಡೆ ಕೆಸರು ತುಂಬಿಕೊಂಡಿದೆ. ಗುಂಡಿ ಬಿದ್ದಿದೆ. ಬೈಕ್​ನಿಂದ ಹಿಡಿದು ಜಂಬಿಟ್ಟಿಗೆ ತುಂಬಿದ ಭಾರವಾದ ಲಾರಿಗಳೂ ಸಹ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಅನಿವಾರ್ಯತೆ ಇದೆ. ಗುಂಡಿ ಬಿದ್ದ ಈ ಸ್ಥಳದಲ್ಲಿ ಕೆಸರಿನಲ್ಲಿ ವಾಹನ ಜಾರುವಂತಾಗುತ್ತಿದೆ.

    | ಭರತ್ ಲಕ್ಕವಳ್ಳಿ, ಲಾರಿ ಮಾಲಿಕ

    ಬೇಸಿಗೆಯ ಕೊನೆಗೆ ಈ ಕಾಮಗಾರಿ ನಡೆಸಲಾಗಿತ್ತು. ಹೊಸದಾಗಿ ಮಣ್ಣು ತುಂಬಿದ ಕಾರಣ ಮಳೆ ಬಿದ್ದು ಸಿಂಕ್ ಆಗಲಿ ಎಂದು ಬಿಡಲಾಗಿತ್ತು. ಈಗ ಗುಂಡಿ ಬಿದ್ದು ಕೆಸರಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇಂಜಿನಿಯರ್ ಮಾರ್ಗದರ್ಶನ ಪಡೆದು ಶೀಘ್ರವಾಗಿ ಗಟ್ಟಿ ಜಲ್ಲಿ ಅಳವಡಿಸಿ ಸಂಪರ್ಕ ರಸ್ತೆ ಸರಿಪಡಿಸಲಾಗುವುದು.

    | ನವೀನ್, ಸಾಗರದ ಗುತ್ತಿಗೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts