More

    ಹಳ್ಳಿಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ; ಸಿಎಂ ಬಳಿಗೆ ನಿಯೋಗ ಕೊಂಡೊಯ್ಯುವುದಾಗಿ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ

    ತುಮಕೂರು: ಹಳ್ಳಿಕಾರರ ಅಭಿವೃದ್ಧಿ ನಿಗಮ ಸ್ಥಾಪನೆ, ಶಿಕ್ಷಣ ಸಂಸ್ಥೆ ಸ್ಥಾಪನೆಗೆ 5 ಎಕರೆ ಜಾಗ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಸೇರಿ ಜನಾಂಗದ ಬೇಡಿಕೆಗಳನ್ನು ಈಡೇರಿಸಲು ಹಳ್ಳಿಕಾರರ ನಿಯೋಗವನ್ನು ಸಿಎಂ ಬಳಿಗೆ ಕೊಂಡೊಯ್ಯುತ್ತೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆಯಿತ್ತರು.

    ನಗರದ ಗಾರ್ಡನ್ ರಸ್ತೆಯಲ್ಲಿ ಗುರುವಾರ ರಾಜ್ಯ ಹಳ್ಳಿಕಾರರ ಸಂಘದ ನಿರ್ಮಿಸಿರುವ ಶ್ರೀಕೃಷ್ಣ ಪ್ಯಾಲೇಸ್ ಹಾಗೂ ಶ್ರೀ ಗೋವರ್ದನ ಪಾರ್ಟಿಹಾಲ್ ಪ್ರಾರಂಭೋತ್ಸವದಲ್ಲಿ ಮಾತನಾಡಿ, ಹಳ್ಳಿಕಾರರ ಜನಾಂಗದ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ನನ್ನ ವಿಧಾನಸಭಾ ಕ್ಷೇತ್ರದಲ್ಲೂ ಹಳ್ಳಿಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಸಂಘದ ಹಿರಿಯರು ನನ್ನ ಜತೆ ಬಂದರೆ ಅವರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ಕರೆದುಕೊಂಡು ಹೋಗಿ ಚರ್ಚಿಸುತ್ತೇನೆ. ಆ ಮೂಲಕ ಮುಂಬರುವ ಬಜೆಟ್‌ನಲ್ಲಿ ತಮ್ಮ ಪ್ರಸ್ತಾವನೆಗಳಿಗೆ ಮನ್ನಣೆ ಸಿಗುವ ನಿಟ್ಟಿನಲ್ಲಿ ಯತ್ನಿಸುತ್ತೇನೆ ಎಂದು ತಿಳಿಸಿದರು.
    ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಹಳ್ಳಿಕಾರರು. ವಿದ್ಯಾರ್ಥಿ ದಿಸೆಯಿಂದಲೂ ಬೆಂಗಳೂರಿನಲ್ಲಿ ಅವರ ಜತೆ ಉತ್ತಮ ಒಡನಾಟ ಹೊಂದಿದ್ದೇನೆ. ತಾವು ಕೊಟ್ಟಿರುವ ಬೇಡಿಕೆಗಳ ಪಟ್ಟಿಯನ್ನು ಸಿಎಂ ಬಳಿ ಪ್ರಸ್ತಾಪಿಸಿ ಸ್ಪಂದಿಸುತ್ತೇನೆ. ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪಿಸುವ ಸಂಬಂಧ ಕೂಡ ಗಮನಸೆಳೆಯಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

    ಉಳ್ಳವರು ಇಲ್ಲದವರಿಗೆ ಸಹಾಯಹಸ್ತ ಚಾಚಬೇಕು. ಆ ಮೂಲಕ ಸಮಾಜದಲ್ಲಿ ಶ್ರೀಮಂತ, ಬಡವ ಎಂಬ ಅಂತರ ಕಡಿಮೆ ಮಾಡಲು ಸಾಧ್ಯ. ಎಲ್ಲರೂ ಸ್ವಾಭಿಮಾನದಿಂದ ಬಾಳಬೇಕು. ಅದಕ್ಕೆ ಪರಸ್ಪರ ಸಹಕಾರ ಅಗತ್ಯ. ಇನ್ನು ಈ ಪಾರ್ಟಿಹಾಲ್‌ನಿಂದ ಬರುವ ಆದಾಯವನ್ನು ಜನಾಂಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬಳಸುವುದು ಒಳ್ಳೆಯ ನಿರ್ಧಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ತಿರುಪುರ್ ಲಕ್ಷ್ಮೀನಾರಾಯಣ ಪೀಠದ ಶ್ರೀ ಮಹಾಲಕ್ಷ್ಮೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಹೇಮಚಂದ್ರಸಾಗರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸೊಗಡುಶಿವಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಕೆ.ಎಂ.ನಾಗರಾಜ್, ಪಾಲಿಕೆ ಸದಸ್ಯೆ ದೀಪಶ್ರೀ, ರಾಜ್ಯ ಹಳ್ಳಿಕಾರರ ಸಂಘದ ಅಧ್ಯಕ್ಷ ಕೆ.ಎಂ.ಮುನಿರಂಗಪ್ಪ, ಪ್ರಧಾನ ಕಾರ್ಯದರ್ಶಿ ಕರಿಯಪ್ಪ, ಎಸ್.ಆರ್.ಕೆಂಪೇಗೌಡ, ಎಂ.ಆರ್.ಕುಮಾರ್, ಎಂ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

    ಜೆಡಿಎಸ್-ಕಾಂಗ್ರೆಸ್ ಒಳ ಒಪ್ಪಂದ: ತುಮಕೂರು: ಮೈಸೂರು ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ನಡೆಯನ್ನು ಮತದಾರರು ಗಮನಿಸಿದ್ದು ಕೊನೇ ಘಳಿಗೆಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್.ಟಿ.ಸೋಮಶೇಖರ್ ಹೇಳಿದರು.
    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ಮುನ್ನ ಮೈತ್ರಿ ತಪ್ಪಲು ಸಿದ್ದರಾಮಯ್ಯ ಅವರೇ ಕಾರಣವೆಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಜೆಡಿಎಸ್ ಜತೆ ನಾವು ಯಾವುದೇ ಕಾರಣಕ್ಕೂ ಹೋಗಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು. ನಮಗೆ ಬಹುಮತ ಇರಲಿಲ್ಲ. ಹಾಗಾಗಿ, ಇಬ್ಬರ ಹೇಳಿಕೆಗಳನ್ನು ಗಮನಿಸಿ ನಾವು ಮತ್ತು ನಮ್ಮ ಪಕ್ಷವು ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಎಲ್ಲ ರೀತಿ ಪ್ರಯತ್ನ ಮಾಡಿದೆವು ಎಂದರು.
    ನಾವು ವಿರೋಧ ಪಕ್ಷದಲ್ಲಿ ಇದ್ದುಕೊಂಡು ರಚನಾತ್ಮಕ ಕೆಲಸ ಮಾಡುತ್ತೇವೆ. ಅಲ್ಲದೆ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಸ್ಪಷ್ಟಬಹುಮತದೊಂದಿಗೆ ಗೆಲುವು ಸಾಧಿಸಲು ಕಾರ್ಯತಂತ್ರ ರೂಪಿಸುತ್ತೇವೆ. ಇನ್ನು ಮೈಸೂರು ಪಾಲಿಕೆ ಮೇಯರ್ ಹಾಗೂ ಉಪಮೇಯರ್‌ಗೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts